ಮುಂಬೈ: ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯವು ಯಾತ್ರಾರ್ಥಿಗಳ ಗುತ್ತಿಗೆ ಹಾಗೂ ಸೇವೆಗಳನ್ನು ಅಂತಿಮಗೊಳಿಸಲು ಕಡ್ಡಾಯವಾಗಿ ಬಳಸಬೇಕಾದ ನುಸುಕ್ ( Nusuk ) ಪೋರ್ಟಲ್ ಗೆ ಪ್ರವೇಶವನ್ನು ಸ್ಥಗಿತಗೊಳಿಸಿದೆ.
ಈ ಹಿನ್ನೆಲೆಯಲ್ಲಿ ಖಾಸಗಿ ಪ್ರವಾಸ ನಿರ್ವಾಹಕರ ಮೂಲಕ ಈ ಬಾರಿಯ ಹಜ್ ಯಾತ್ರೆಗೆ ಸೀಟು ಕಾಯ್ದಿರಿಸಿದ್ದ ಸುಮಾರು 52,000 ಭಾರತೀಯರಿಗೆ ಭಾರಿ ಹಿನ್ನಡೆಯುಂಟಾಗಿದ್ದು, ಈಗಾಗಲೇ ಖಾಸಗಿ ಕೋಟಾದಡಿ ಮುಂಗಡ ಕಾಯ್ದಿರಿಸಿರುವವರ ಪೈಕಿ ಶೇ. 20ರಷ್ಟು ಯಾತ್ರಾರ್ಥಿಗಳ ಹಜ್ ಯಾತ್ರೆಯನ್ನು ಮಾತ್ರ ದೃಢಪಡಿಸಲಾಗಿದೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಹೊಸದಾಗಿ ಸುತ್ತೋಲೆ ಹೊರಡಿಸಿದೆ.
ಇದರನ್ವಯ ಸಂಯೋಜಿತ ಹಜ್ ಗುಂಪು ಸಂಘಟಕರ (CHGOs) ಅಡಿ ನೋಂದಾಯಿಸಿಕೊಂಡಿರುವ ಸುಮಾರು ಶೇ. 80ರಷ್ಟು ಯಾತ್ರಾರ್ಥಿಗಳ 2025ರ ಹಜ್ ಯಾತ್ರೆಯಲ್ಲಿ ಅನಿಶ್ಚಿತತೆ ತಲೆದೋರಿದೆ.
ಪಾವತಿಗಳಲ್ಲಿನ ವಿಳಂಬ ಹಾಗೂ ಸೇವಾ ಒಪ್ಪಂದಗಳು ಅಂತಿಮಗೊಳ್ಳದ ಕಾರಣಕ್ಕೆ ಸಂಯೋಜಿತ ಹಜ್ ಗುಂಪು ಸಂಘಟನೆಗಳಿಗೆ (CHGOs) ಮಂಜೂರು ಮಾಡಲಾಗಿದ್ದ ಮಿನಾ ಝೋನ್ಸ್ 1 ಹಾಗೂ 2 ಅನ್ನು ಸೌದಿ ಅರೇಬಿಯಾದ ಪ್ರಾಧಿಕಾರಗಳು ರದ್ದುಗೊಳಿಸಿವೆ. ಉಳಿದ 3, 4, 5 ವಲಯಗಳನ್ನೂ ತಡೆ ಹಿಡಿದಿರುವುದರಿಂದ, ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.
ಸುತ್ತೋಲೆಯ ಪ್ರಕಾರ, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಈ ಲೋಪದ ಹೊಣೆಯನ್ನು ಖಾಸಗಿ ಪ್ರವಾಸ ನಿರ್ವಾಹಕರ ಮೇಲೆ ಹೊರಿಸಿದೆ. ಪ್ರತಿ ಸಂಯೋಜಿತ ಹಜ್ ಗುಂಪು ಸಂಘಟನೆಗಳು (CHGOs)
ಸ್ವತಂತ್ರವಾಗಿ ಸೇವಾ ಒಪ್ಪಂದಗಳನ್ನು ನುಸುಕ್ ಪೋರ್ಟಲ್ ನಲ್ಲಿ ಅಂತಿಮಗೊಳಿಸಬೇಕಿತ್ತು. ಆದರೆ, ಬಹುತೇಕರು ಸಕಾಲದಲ್ಲಿ ಗುತ್ತಿಗೆ ಒಪ್ಪಂದಗಳು ಅಥವಾ ಪಾವತಿ ಪ್ರಕ್ರಿಯೆಯನ್ನು ಅಪ್ಲೋಡ್ ಮಾಡುವಲ್ಲಿ ವಿಫಲಗೊಂಡಿದ್ದಾರೆ ಎಂದು ಅದು ಹೇಳಿದೆ. ಇದರ ಪರಿಣಾಮವಾಗಿ, ಸೌದಿ ಅರೇಬಿಯಾ ಪ್ರಾಧಿಕಾರಗಳು ಎಲ್ಲ ಬಗೆಯ ಪ್ರವೇಶಗಳನ್ನು ಹಿಂಪಡೆದಿದ್ದು, ಖಾಸಗಿ ಭಾರತೀಯ ಯಾತ್ರಾರ್ಥಿಗಳಿಗೆ ಮೀಸಲಾಗಿದ್ದ ಎಲ್ಲ ವಲಯಗಳನ್ನು ಮುಟ್ಟುಗೋಲು ಹಾಕಿಕೊಂಡಿವೆ.
“ಈ ಲೋಪವು ಸರಕಾರದ ಕಡೆಯಿಂದಾಗಿದೆ. ಕಳೆದ ವರ್ಷ , ಸೌದಿ ಪ್ರಾಧಿಕಾರಗಳು ನಿಯಮಾವಳಿಗಳಿಗೆ ತಿದ್ದುಪಡಿ ಮಾಡಿದ್ದವು . ನೇರವಾಗಿ ನಿರ್ವಾಹಕರು ಪಾವತಿ ಮಾಡುವ ಬದಲು ಸರಕಾರಿ ಮಾರ್ಗದ ಮೂಲಕ ಪಾವತಿಯನ್ನು ಠೇವಣಿ ಇಡುವಂತೆ ಖಾಸಗಿ ನಿರ್ವಾಹಕರಿಗೆ ಸೂಚಿಸಿದ್ದವು. ಸರಕಾರವು ಈ ಮೊತ್ತವನ್ನು ಸೌದಿ ಪ್ರಾಧಿಕಾರಗಳಿಗೆ ಜಮೆ ಮಾಡಬೇಕಿತ್ತು” ಎಂದು ಖಾಸಗಿ ಪ್ರವಾಸ ನಿರ್ವಾಹಕರೊಬ್ಬರು ತಿಳಿಸಿದ್ದಾರೆ.ಬಹುತೇಕ ನಿರ್ವಾಹಕರು ತಮ್ಮ ಪಾವತಿಯನ್ನು ಸರಕಾರಕ್ಕೆ ಜಮೆ ಮಾಡಿದ್ದರು. ಆದರೆ, ಕೆಲವರು ತಮ್ಮ ಪಾವತಿಯನ್ನು ಸರಿಯಾದ ಸಮಯದಲ್ಲಿ ಜಮೆ ಮಾಡುವಲ್ಲಿ ವಿಳಂಬ ಮಾಡಿರಬಹುದು ಎಂದೂ ಅವರು ಹೇಳಿದ್ದಾರೆ.
2024ಕ್ಕೂ ಮುಂಚೆ, ಖಾಸಗಿ ನಿರ್ವಾಹಕರು ತಮ್ಮ ಖಾತೆಗಳಿಂದ ನೇರವಾಗಿ ಸೌದಿ ಪ್ರಾಧಿಕಾರಗಳಿಗೆ ತಮ್ಮ ಪಾವತಿಗಳನ್ನು ಜಮೆ ಮಾಡುತ್ತಿದ್ದರು ಎಂದೂ ಅವರು ತಿಳಿಸಿದ್ದಾರೆ. “ಆದರೆ, ಸರಕಾರವು ಎಲ್ಲ ನಿರ್ವಾಹಕರ ಪಾವತಿಗಾಗಿ ಕಾಯುತ್ತಾ ಕೂತಿದ್ದರಿಂದ, ಪಾವತಿಯಲ್ಲಿ ವಿಳಂಬವಾಗಿದ್ದು, ಇದರಿಂದಾಗಿ ಸೌದಿ ಪ್ರಾಧಿಕಾರಗಳ ಪಾವತಿ ಮಾರ್ಗಗಳು ಬಂದ್ ಆಗಿವೆ. ಸರಕಾರದ ನಿರ್ಲಕ್ಷ್ಯದಿಂದಾಗಿ, ತಮ್ಮ ಪಾವತಿ ಪ್ರಕ್ರಿಯೆಗಳನ್ನು ಸರಿಯಾಗಿ ಮುಗಿಸಿರುವ ನಿರ್ವಾಹಕರನ್ನೊಳಗೊಂಡಂತೆ ಎಲ್ಲ ನಿರ್ವಾಹಕರೂ ತೊಂದರೆಗೀಡಾಗಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ.
‘ಡೇರೆಗಳ ನಗರ’ ಎಂದೇ ಕರೆಯಲ್ಪಡುವ ಮಿನಾ, ಹಜ್ ಯಾತ್ರಾರ್ಥಿಗಳ ಪಾಲಿಗೆ ಪ್ರಮುಖ ತಾಣವಾಗಿದೆ. ಯಾತ್ರಾರ್ಥಿಗಳು ತಮ್ಮ ಹಜ್ ಕ್ರಮಗಳನ್ನು ನೆರವೇರಿಸಲು ಇಲ್ಲಿ ಐದು ದಿನಗಳ ಕಾಲ ತಂಗುತ್ತಾರೆ.
ಶೈತಾನ್ ನನ್ನು ಪ್ರತಿನಿಧಿಸುವ ಸಾಂಕೇತಿಕ ಗೋಪುರವಾದ ಜಮ್ರಾತ್ ಮೇಲೆ ನಡೆಸಲಾಗುವ ಕಲ್ಲು ತೂರಾಟದ ಸ್ಥಳದಿಂದ ಮಿನಾಕ್ಕಿರುವ ದೂರವನ್ನು ಆಧರಿಸಿ, ಈ ಶಿಬಿರ ನಗರವನ್ನು ಐದು ವಲಯಗಳನ್ನಾಗಿ ವಿಂಗಡಿಸಲಾಗಿದೆ.
ಉತ್ತಮ ಯೋಜನೆ ಹಾಗೂ ಜನಜಂಗುಳಿಯ ನಿಯಂತ್ರಣಕ್ಕಾಗಿ ಸೌದಿ ಪ್ರಾಧಿಕಾರಗಳು ಈ ವಲಯಗಳನ್ನು ಮುಂಗಡವಾಗಿ ಮಂಜೂರು ಮಾಡುತ್ತವೆ. ಭಾರತೀಯ ಸಂಯೋಜಿತ ಹಜ್ ಗುಂಪು ಸಂಘಟನೆಗಳು ಈ ಮಂಜೂರಾದ ವಲಯಗಳನ್ನು ಆಧರಿಸಿ, ಶಿಬಿರಗಳನ್ನು ಕಾಯ್ದಿರಿಸುತ್ತವೆ ಹಾಗೂ ವ್ಯವಸ್ಥೆಗಳನ್ನು ಮಾಡುತ್ತವೆ. ಆದರೆ, ಜಮ್ ರಾತ್ ಗೆ ತೀರಾ ಸನಿಹವಿರುವ ಕಾರಣಕ್ಕೆ ಬಹು ಬೇಡಿಕೆಯ ವಲಯಗಳಾಗಿರುವ ವಲಯ 1 ಹಾಗೂ 2 ಅನ್ನು ದಿಢೀರ್ ಎಂದು ರದ್ದುಗೊಳಿಸಿದ್ದರಿಂದ ಹಾಗೂ ಉಳಿದ ವಲಯಗಳಿಗೆ ಮಾಡಬೇಕಿದ್ದ ಪಾವತಿಗಳೂ ನಿಲುಗಡೆಯಾಗಿದ್ದರಿಂದ, ಎಲ್ಲ ಹಾಲಿ ವ್ಯವಸ್ಥೆಗಳು ಬುಡಮೇಲಾಗಿವೆ.