ನವದೆಹಲಿ:ಭೀಮಾ ಕೋರೆಗಾಂವ್ನಲ್ಲಿ ದಲಿತರ ಮೇಲೆ ನಡೆದ ಕಲ್ಲು ತೂರಾಟ ವಿರೋಧಿಸಿ ಮಹಾರಾಷ್ಟ್ರದ ವಿವಿಧೆಡೆ ನಡೆಯುತ್ತಿರುವ ಪ್ರತಿಭಟನೆಗಳು ಹಿಂಸಾಚಾರದ ಸ್ವರೂಪ ಪಡೆದಿದ್ದು,ಇದರ ಹಿಂದೆ ಆರ್ಎಸ್ಎಸ್ ಕೈವಾಡವಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ‘ಮೌನಿ ಬಾಬಾ’ ಎಂದು ಟೀಕಿಸಿದೆ.
ಲೋಕಸಭೆಯಲ್ಲಿ ದಲಿತರ ಪ್ರತಿಭಟನೆಯನ್ನು ಪ್ರಸ್ತಾಪಿಸಿದ ಖರ್ಗೆ, ‘ಸಮಾಜವನ್ನು ಒಡೆಯುವ ಉಗ್ರ ಹಿಂದುತ್ವವಾದಿ ಸಂಘಟನೆಯಾದ ಆರ್ಎಸ್ಎಸ್ ಈ ಹಿಂಸಾಚಾರದ ಹಿಂದಿದೆ’ ಎಂದಿದ್ದಾರೆ.
‘ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲೆಲ್ಲಾ ಅಸಮಾನತೆ, ಅನ್ಯಾಯ ಮನೆ ಮಾಡಿದೆ. ಈ ಹಿಂಸಾಚಾರದ ತನಿಖೆಗಾಗಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯೊಬ್ಬರನ್ನು ನೇಮಿಸಬೇಕು’ ಎಂದು ಖರ್ಗೆ ಆಗ್ರಹಿಸಿದ್ದಾರೆ.
‘ಇಂತಹ ವಿಷಯಗಳ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮೌನ ವಹಿಸುತ್ತಾರೆ. ಮಹಾರಾಷ್ಟ್ರದಲ್ಲಿ ದಲಿತರಿಗೆ ಆಗಿರುವ ಅನ್ಯಾಯದ ಬಗ್ಗೆ ಮೋದಿ ಮೌನ ಮುರಿಯಬೇಕು. ಮೋದಿ ಸದನಕ್ಕೆ ಬಂದು ಈ ಬಗ್ಗೆ ಮಾತನಾಡಬೇಕು. ಇಂತಹ ಘಟನೆಗಳು ನಡೆದಾಗೆಲ್ಲಾ ಅವರು ಮಾತನಾಡುವುದೇ ಇಲ್ಲ’ ಎಂದಿದ್ದಾರೆ.