ಪಿಲಿಕುಳದಲ್ಲಿ ಹಿಂದು ಸಂಘಟನೆಯ ಕಾರ್ಯಕರ್ತರಿಂದ ನೈತಿಕ ಪೋಲೀಸ್ ಗಿರಿ :ಮೂವರ ಬಂಧನ

ಮಂಗಳೂರು: ನಗರದ ಪಿಲಿಕುಳ ನಿಸರ್ಗ ಧಾಮದಲ್ಲಿ ಜೊತೆಯಲ್ಲಿದ್ದ 2 ಅನ್ಯಕೋಮಿನ ಜೋಡಿಯ ಮೇಲೆ ದಾಳಿ ನಡೆಸಿರುವ ಘಟನೆ ಮಂಗಳವಾರ ನಡೆದಿದ್ದು,ಭಾರೀ ಚರ್ಚೆಗೆ ಕಾರಣವಾಗಿದೆ. ಪಿಲಿಕುಳದ ಮಾನಸ ವಾಟರ್ ಪಾರ್ಕ್​ಗೆ ಬಂದಿದ್ದ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಥಳಿಸಿದ್ದಾರೆ.

ಸ್ಥಳೀಯ ಕಾಲೇಜೊಂದರ ಪಿಯು ವಿದ್ಯಾರ್ಥಿನಿಯರು ಅನ್ಯಕೋಮಿನ ಯುವಕನ ಜತೆ ಓಡಾಡುತ್ತಿದ್ದುದನ್ನು ಪತ್ತೆ ಹಚ್ಚಿ ಈ ಕೃತ್ಯವೆಸಗಿದ್ದಾರೆ. ಮುಸ್ಲಿಂ ಯುವಕನ ಜತೆಗಿದ್ದ ಯುವತಿಯರಲ್ಲಿ ಒಬ್ಬಳು ಹಿಂದು, ಮತ್ತೊಬ್ಬಳು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವಳು ಎನ್ನಲಾಗಿದೆ.

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಕಾವೂರು ಠಾಣೆ ಪೊಲೀಸರು ವಿದ್ಯಾರ್ಥಿಗಳನ್ನು ರಕ್ಷಿಸಲು ಹೊರಗೆ ಕರೆತರುತ್ತಿರುವಾಗಲೇ ಈ ಗುಂಪು ಅವರ ಮೇಲೆ ಹಲ್ಲೆ ನಡೆಸಿದೆ. ಘಟನೆಗೆ ಸಂಬಂಧಿಸಿದ ವಿಡಿಯೊ ತುಣುಕು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಕಾವೂರು ಠಾಣೆ ಇನ್‌ಸ್ಪೆಕ್ಟರ್‌ ಕೆ.ಆರ್‌.ನಾಯ್ಕ್ ಮತ್ತು ಕಾನ್‌ಸ್ಟೆಬಲ್‌ ವಿಶ್ವನಾಥ್‌ ವಿದ್ಯಾರ್ಥಿಗಳನ್ನು ಕರೆತರುತ್ತಿದ್ದಾರೆ. ಆಗ ಹಿಂದಿನಿಂದ ಹೋದ ಸಂಪತ್‌ ಮತ್ತು ಸಹಚರರು ವಿದ್ಯಾರ್ಥಿನಿಯೊಬ್ಬಳ ಬೆನ್ನಿಗೆ ಗುದ್ದಿದ್ದಾರೆ. ಪೊಲೀಸರು ತಡೆಯುತ್ತಿದ್ದಂತೆ ಹಿಂದಿದ್ದ ಮುಸ್ಲಿಂ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿರುವುದು ದೃಶ್ಯಗಳಲ್ಲಿದೆ.

ಈ ನೈತಿಕ ಪೊಲೀಸ್‌ ಗಿರಿ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ರಾಮಲಿಂಗಾ ರೆಡ್ಡಿ ‘ಈ ಬಗ್ಗೆ ಕ್ರಮ ಕೈಗೊಳ್ಳಲು ಅಲ್ಲಿನ ಎಸ್‌ಪಿಗೆ ತಿಳಿಸಿದ್ದೇನೆ. ಮಧ್ಯಾಹ್ನದ ವೇಳೆ ಹಲ್ಲೆ ನಡೆಸಿದ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ’ ಎಂದಿದ್ದಾರೆ.

ಸಚಿವ ಯು.ಟಿ .ಖಾದರ್‌ ಅವರು ಪ್ರತಿಕ್ರಿಯೆ ನೀಡಿದ್ದು ‘ಯುವತಿಯ ಮೇಲೆ ಹಲ್ಲೆ ನಡೆದಿರುವುದು ತಪ್ಪು, ಪೊಲೀಸರ ಮುಂದೆ ಹಲ್ಲೆ ನಡೆದಿದ್ದರೆ ಆ ಸಿಬಂದಿಯ ವಿರುದ್ಧವೂ ಕ್ರಮ ಕೈಗೊಳ್ಳಬೇಕು.  ಈ ಪ್ರಕರಣದ ಕುರಿತು ಗೃಹ ಸಚಿವರೊಂದಿಗೆ ಮಾತನಾಡಿದ್ದೇನೆ’ ಎಂದಿದ್ದಾರೆ.

ಘಟನೆ ಸಂಬಂಧ ಮೂಡುಶೆಡ್ಡೆ ನಿವಾಸಿಗಳಾದ ಸಂಪತ್‌ ಶೆಟ್ಟಿ, ವರದ ಮತ್ತು ದಿನೇಶ್‌ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಸಂಪತ್‌ ಕಾವೂರು ಠಾಣೆ ರೌಡಿಗಳ ಪಟ್ಟಿಯಲ್ಲಿದ್ದಾನೆ. ಈತ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತ ಎಂಬುದು ಗೊತ್ತಾಗಿದೆ. ಉಳಿದವರು ಯಾವ ಸಂಘಟನೆಗೆ ಸೇರಿದವರು ಎಂಬುದರ ಕುರಿತು ವಿಚಾರಣೆ ನಡೆದಿದೆ. ಇನ್ನೂ ಕೆಲವರು ಪ್ರಕರಣದಲ್ಲಿ ಭಾಗಿಯಾಗಿದ್ದು, ಅವರನ್ನೂ ಬಂಧಿಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್‌ ಟಿ.ಆರ್‌.ಸುರೇಶ್  ತಿಳಿಸಿದರು.

ಬಂಧಿತ ಆರೋಪಿಗಳ ವಿರುದ್ಧ ಅಡ್ಡಗಟ್ಟಿರುವುದು, ಆಯುಧದಿಂದ ಹಲ್ಲೆ ನಡೆಸಿರುವುದು, ಜೀವ ಬೆದರಿಕೆ, ಮಹಿಳೆಯ ಘನತೆಗೆ ಹಾನಿ ಮಾಡಲು ಯತ್ನಿಸಿರುವುದು, ವಿಭಿನ್ನ ಧರ್ಮದ ಜನರ ನಡುವೆ ಮತೀಯ ದ್ವೇಷ ಹಬ್ಬಿಸಲು ಯತ್ನಿಸಿರುವ ಆರೋಪದಡಿ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳು ಹಾಗೂ ಬಾಲಾಪರಾಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!