janadhvani

Kannada Online News Paper

ಇಂದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ

ಬೆಂಗಳೂರು: ವಿಧಾನಸಭೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗದಿದ್ದರೂ, ಆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಬೆಳಿಗ್ಗೆ 9 ಗಂಟೆಗೆ ರಾಜಭವನದ ಬ್ಯಾಕ್ವೆಂಟ್‌ ಹಾಲ್‌ನಲ್ಲಿ ನಡೆಯಲಿರುವ ಸರಳ ಸಮಾರಂಭದಲ್ಲಿ ಯಡಿಯೂರಪ್ಪ ಅವರಿಗೆ ರಾಜ್ಯಪಾಲ ವಜುಭಾಯಿ ವಾಲಾ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ. ಹದಿನೈದು ದಿನಗಳ ಒಳಗೆ ಸದನದಲ್ಲಿ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಸೂಚಿಸಿದ್ದಾರೆ.

ರಾತ್ರಿ 9.30ಕ್ಕೆ ಮಾಧ್ಯಮಗೋಷ್ಠಿ ನಡೆಸಿದ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್‌, ‘ಯಡಿಯೂರಪ್ಪ ಒಬ್ಬರೇ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬಹುಮತ ಸಾಬೀತು ಪಡಿಸಿದ ಬಳಿಕ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ’ ಎಂದು ಪ್ರಕಟಿಸಿದರು.

ಈ ಬೆಳವಣಿಗೆಗಳ ಬೆನ್ನಲ್ಲೆ, ‘ಆಪರೇಷನ್ ಕಮಲ’ದ ಭೀತಿಯಿಂದ ಕಂಗಾಲಾಗಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ತಮ್ಮ ಪಕ್ಷದ ಶಾಸಕರನ್ನು ಹಿಡಿತದಲ್ಲಿಟ್ಟುಕೊಳ್ಳಲು ‘ರೆಸಾರ್ಟ್‌ ರಾಜಕೀಯ’ದ ಮೊರೆ ಹೋಗಿದ್ದಾರೆ.

222 ಕ್ಷೇತ್ರಗಳಿಗೆ ಮೇ 12ರಂದು ನಡೆದ ಚುನಾವಣೆಯಲ್ಲಿ 104 ಸ್ಥಾನಗಳನ್ನು ಗೆದ್ದು ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಫಲಿತಾಂಶ ಪ್ರಕಟವಾದ ಬೆನ್ನಲ್ಲೆ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಯಡಿಯೂರಪ್ಪ ಅಹವಾಲು ಸಲ್ಲಿಸಿದ್ದರು. ಈ ಮಧ್ಯೆ, ‘ಕೈ’ ಜೋಡಿಸಿದ ಜೆಡಿಎಸ್‌– ಕಾಂಗ್ರೆಸ್‌ ಕೂಡಾ ರಾಜ್ಯಪಾಲರನ್ನು ಭೇಟಿ ಮಾಡಿ ಸಮ್ಮಿಶ್ರ ಸರ್ಕಾರ ರಚಿಸುವ ಹಕ್ಕು ಮಂಡಿಸಿದ್ದವು.

ಸರ್ಕಾರ ರಚನೆ ಕುರಿತಂತೆ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಶಾಸಕಾಂಗ ಪಕ್ಷದ ಸಭೆ ನಡೆಸಿದ ಈ ಮೂರೂ ಪಕ್ಷಗಳು ಬುಧವಾರ ದಿನಿವಿಡೀ ಸರ್ಕಸ್‌ ನಡೆಸಿವೆ. ಸದನದಲ್ಲಿ ಅಗತ್ಯ ಸಂಖ್ಯಾ ಬಲ ತೋರಿಸಲು ಬಿಜೆಪಿ ಕೂಡಾ ನಾನಾ ಕಸರತ್ತು ನಡೆಸುತ್ತಿದೆ.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೆ ಈ ‘ಸರ್ಕಸ್‌’ ಮುಂದುವರಿಸಲು ಬಿಜೆಪಿಗೆ 15 ದಿನಗಳ ಕಾಲಾವಕಾಶ ಸಿಗಲಿದೆ.  ಈ ಅವಧಿಯಲ್ಲಿ ಕಾಂಗ್ರೆಸ್‌– ಜೆಡಿಎಸ್‌ ಸದಸ್ಯರನ್ನು ತನ್ನತ್ತ ಸೆಳೆಯಲುಬಿಜೆಪಿ ಶಾಸಕರ ಖರೀದಿಗೆ ಮುಂದಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಬಿಜೆಪಿ– ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ  2007ರಲ್ಲಿ ಏಳು ದಿನ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು.

2008ರಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷ 110 ಸ್ಥಾನ ಗಳಿಸಿತ್ತು. ಆಗ ಆರು ಪಕ್ಷೇತರ ಶಾಸಕರ ನೆರವಿನಿಂದ ಎರಡನೇ ಬಾರಿ ಮುಖ್ಯಮಂತ್ರಿ
ಯಾಗಿ ಅಧಿಕಾರ ಸ್ವೀಕರಿಸಿದ್ದರು.

ಅಂದು ನಡೆದ ರಾಜಕೀಯ ಬೆಳವಣಿಗೆಗಳ ಕಾರಣ ಅವರು ಅಧಿಕಾರ ಪೂರ್ಣಗೊಳಿಸಿರಲಿಲ್ಲ. ಅವರು ಅಧಿಕಾರ ಕಳೆದುಕೊಂಡ ಬಳಿಕ ಬಿಜೆಪಿಯ ಡಿ.ವಿ. ಸದಾನಂದ ಗೌಡ ಮತ್ತು ಜಗದೀಶ ಶೆಟ್ಟರ್‌ ಮುಖ್ಯಮಂತ್ರಿ ಪಟ್ಟ ಅಲಂಕರಿಸಿದ್ದರು.

ರೆಸಾರ್ಟ್‌ನತ್ತ ಕಾಂಗ್ರೆಸ್‌ ಶಾಸಕರು: ಬುಧವಾರ ಬೆಳಿಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ನಡೆಸಿದ ಕಾಂಗ್ರೆಸ್‌ ನಾಯಕರು,  ಎಲ್ಲ ಶಾಸಕರನ್ನು ರೆಸಾರ್ಟ್‌ಗೆ ಸ್ಥಳಾಂತರಿಸಲು  ತೀರ್ಮಾನಿಸಿದರು. ಬಿಜೆಪಿ ಹಟಕ್ಕೆ ಬಿದ್ದು, ಸರ್ಕಾರ ರಚಿಸಲು ಮುಂದಾಗಿದ್ದು, ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಸೆಳೆಯುವ ಆತಂಕ ಕಾಂಗ್ರೆಸ್‌ ಹಿರಿಯ ನಾಯಕರಲ್ಲಿದೆ. ಹೀಗಾಗಿ, ರೆಸಾರ್ಟ್‌ನಲ್ಲಿರುವ ಶಾಸಕರಿಗೆ ಬಿಗಿ ಭದ್ರತೆ ಒದಗಿಸಲು ಮತ್ತು ಬಿಜೆಪಿ ಸಂಪರ್ಕಕ್ಕೆ ಅವಕಾಶ ಸಿಗದಂತೆ ಭದ್ರಕೋಟೆ ನಿರ್ಮಿಸಲಾಗಿದೆ ಎಂದು ಮೂಲಗಳು ಹೇಳಿವೆ.

error: Content is protected !! Not allowed copy content from janadhvani.com