janadhvani

Kannada Online News Paper

ಪ್ರಸಾರ ಖಾತೆಯಿಂದ ಸ್ಮೃತಿ ಇರಾನಿ ಔಟ್, ಹಣಕಾಸು ಪಿಯೂಷ್‌ ಗೋಯಲ್‌ ಹೆಗಲಿಗೆ

ನವದೆಹಲಿ: ಕೇಂದ್ರ ಸರ್ಕಾರ 2019ರ ಲೋಕಸಭಾ ಚುನಾವಣೆ ಎದುರು ನೋಡುತ್ತಿರುವ ಸಂದರ್ಭದಲ್ಲಿಯೇ ಕೇಂದ್ರದ ಸಂಪುಟದಲ್ಲಿ ಸಣ್ಣ ಸರ್ಜರಿಯೊಂದನ್ನು ಮಾಡಲಾಗಿದೆ.

ಸ್ಮೃತಿ ಇರಾನಿ ಅವರು ನಿಭಾಯಿಸುತ್ತಿದ್ದ ಮಾಹಿತಿ ಮತ್ತು ಪ್ರಸಾರ ಇಲಾಖೆಯನ್ನು ಹಿಂಪಡೆಯಲಾಗಿದೆ. ರಾಜವರ್ಧನ್‌ ಸಿಂಗ್‌ ರಾಠೋಡ್ ಇನ್ನುಮುಂದೆ ಈ ಖಾತೆಯ ಮೇಲ್ವಿಚಾರಣೆ ಮಾಡಲಿದ್ದಾರೆ.

ಹಣಕಾಸು ಖಾತೆಯ ಹೊರೆಯನ್ನು ಅರುಣ್‌ ಜೇಟ್ಲಿ ಅವರ ಹೆಗಲಿನಿಂದ ಇಳಿಸಿ, ರೈಲ್ವೆ ಸಚಿವರಾಗಿರುವ ಪಿಯೂಷ್‌ ಗೋಯಲ್‌ ಅವರಿಗೆ ಹೊರಿಸಲಾಗಿದೆ. ಈ ಖಾತೆಯನ್ನು ಜೇಟ್ಲಿ 2014ರಿಂದ ನೋಡಿಕೊಳ್ಳುತ್ತಿದ್ದರು.

ಇರಾನಿ ಅವರ ಬಳಿ ಸದ್ಯ ಜವಳಿ ಖಾತೆ ಮಾತ್ರ ಉಳಿದಿದೆ. ಈ ಹಿಂದೆ ಅವರು ಮಾನವ ಸಂಪನ್ಮೂಲ ಅಭಿವೃದ್ಧಿ(ಎಚ್‌ಆರ್‌ಡಿ) ಸಚಿವೆ ಆಗಿದ್ದರು. ಕೆಲವು ವಿವಾದಗಳಿಂದಾಗಿ ಎಚ್‌ಆರ್‌ಡಿ ಖಾತೆಯನ್ನು ಇರಾನಿ ಅವರಿಂದ ಹಿಂಪಡೆದು, ಪ್ರಕಾಶ್‌ ಜಾವಡೇಕರ್‌ ಅವರಿಗೆ ನೀಡಲಾಗಿತ್ತು. ಈಗ ಪುನಃ ಪ್ರಮುಖ ಖಾತೆಯೊಂದನ್ನು ಇರಾನಿ ಅವರಿಂದ ಹಿಂಪಡೆಯಲಾಗಿದೆ.

ಅರುಣ್‌ ಜೇಟ್ಲಿ ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕಳೆದ ಸೋಮವಾರ ಅವರು ನವದೆಹಲಿಯ ಏಮ್ಸ್‌ನಲ್ಲಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರು ಗುಣಮುಖ ಆಗುವವರೆಗೂ ಅವರ ಖಾತೆಯನ್ನು ಗೋಯಲ್‌ ಅವರಿಗೆ ವಹಿಸಲಾಗಿದೆ ಎನ್ನುತ್ತವೆ ಮೂಲಗಳು.

ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ರಾಜ್ಯ ಸಚಿವ ಸ್ಥಾನ ಮತ್ತು ಪ್ರವಾಸೋದ್ಯಮ ಖಾತೆಗಳನ್ನು ಕೆ.ಜೆ.ಅಲ್ಪಾನ್ಸೊ ನಿಭಾಯಿಸುತ್ತಿದ್ದರು. ಅವರಿಂದ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಹಿಂಪಡೆದು, ಅದರ ಹೊಣೆಯನ್ನು ಎಸ್‌.ಎಸ್‌.ಅಹ್ಲುವಾಲಿಯಾ ಅವರಿಗೆ ವಹಿಸಲಾಗಿದೆ.

error: Content is protected !! Not allowed copy content from janadhvani.com