janadhvani

Kannada Online News Paper

ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ಘನತೆ,ನ್ಯಾಯ ನೀಡಿದ ಎನ್.ಕೆ.ಮುಹಮ್ಮದ್ ಶಾಫಿ ಸ‌ಅದಿ ನಂದಾವರ

✍️ ಕೆ.ಎ.ಅಬ್ದುಲ್ ಅಝೀಝ್ ಪುಣಚ

ಎನ್.ಕೆ.ಮುಹಮ್ಮದ್ ಶಾಫಿ ಸ‌ಅದಿ ನಂದಾವರ ಅವರು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸೇವೆಯೊಂದಿಗೆ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಸದಸ್ಯ ರಾಗುವ ಮೂಲಕ ಇಡೀ ರಾಜ್ಯದಲ್ಲಿ ಮನೆಮಾತಾಗಿರುವ ಯುವ ವಿದ್ವತ್ ಪ್ರತಿಭೆ!
ಕರ್ನಾಟಕ ಸರಕಾರದ ಅತಿದೊಡ್ಡ ಸಂಸ್ಥೆಯಾದ ಕರ್ನಾಟಕ ರಾಜ್ಯ ಔಕಾಫ್ ಮಂಡಳಿ ಇತ್ತೀಚಿನ ವರ್ಷಗಳ ವರೆಗೆ ಜನರಿಗೆ ಅಪರಿಚಿತ ವೆಂಬಂತೆ ಕಾರ್ಯಾಚರಣೆ ಮಾಡುವಾಗ ಪ್ರಸ್ತುತ ಸಂಸ್ಥೆಗೆ ನ್ಯಾಯ ನೀಡಿ ವಕ್ಫ್ ಸಂಸ್ಥೆಯಲ್ಲಿ ನಡೆದ ಎಲ್ಲಾ ರೀತಿಯ ಅಕ್ರಮ ಗಳನ್ನು ಪತ್ತೆ ಹಚ್ಚಿ ಸಾವಿರಾರು ಎಕರೆ ವಕ್ಫ್ ಭೂಮಿಯನ್ನು ಮರಳಿ ಪಡೆಯಲು ಹಗಲಿರುಳು ಶ್ರಮಿಸಿದ ಒಬ್ಬ ಧೀಮಂತ ನಾಯಕ!

ಶಾಫಿ ಸ‌ಅದಿ ಯವರ ಬಹುತೇಕ ಅವಧಿ ಬಿಜೆಪಿ ಸರಕಾರ ಇರುವಾಗ ಇದ್ದ ಕಾರಣ ಅವರಿಗೆ ಬಿಜೆಪಿ ಸರಕಾರದೊಂದಿಗೆ ಸಂಪರ್ಕ ಅನಿವಾರ್ಯವಾಗಿತ್ತು.
ಯಾಕೆಂದರೆ ಯಾವುದೇ ಒಂದು ಸರಕಾರಿ ಸಂಸ್ಥೆ ಅದು ಸರಕಾರ ನಡೆಸುವ ಪಕ್ಷಗಳ ಸಂಸ್ಥೆ ಅಲ್ಲ.
ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಕಾರ ಯಾವುದೇ ಒಂದು ಪಕ್ಷ ಅಧಿಕಾರ ವಹಿಸಿಕೊಂಡರೆ ಆ ಸರಕಾರದೊಂದಿಗೆ ಸೇರಿಯೇ ವಕ್ಫ್ ಸಹಿತ ಎಲ್ಲಾ ಸರಕಾರಿ ಸಂಸ್ಥೆಗಳ ನಿರ್ವಹಣೆ ಮಾಡಬೇಕು.
ಶಾಫಿ ಸ‌ಅದಿ ಬಿಜೆಪಿ, ಶಾಫಿ ಸ‌ಅದಿ ಕಾಂಗ್ರೆಸ್, ಶಾಫಿ ಸ‌ಅದಿ ಜೆಡಿಎಸ್ ಅಥವಾ ಇನ್ಯಾವುದೇ ಪಕ್ಷ ಎಂದು ಹೇಳಲು ಯಾವೊಬ್ಬನಿಗೂ ಅಧಿಕಾರವಿಲ್ಲ.

ಕಾನೂನಿನ ಬಗ್ಗೆ ಅರಿವಿಲ್ಲದವರು,ರಾಗದ್ವೇಷ ಇರುವವರು ಅಥವಾ ಕಾನೂನು ಗೊತ್ತಿದ್ದರೂ ಕೆಲವರೊಂದಿಗಿರುವ ದ್ವೇಷ ಕಾರಣ ಅವರಿಗೆ ವಿವಿಧ ರೀತಿಯ ಪಟ್ಟ ಕಟ್ಟಿ ಅವರನ್ನು ಸಾರ್ವಜನಿಕ ವಾಗಿ ತೇಜೋವಧೆ ಮಾಡಿ,ಅದನ್ನು ಕಂಡು ಸಮಾಜ ಕೂಡ ಅವರ ತೇಜೋವಧೆಗೆ ಟೊಂಕ ಕಟ್ಟಿ ನಿಂತಾಗ ಮರೆಯಲ್ಲಿ ನಿಂತು ವಿಕೃತ ಆನಂದ ಪಡುವ ಕೆಲವೊಂದು ವರ್ಗದ ಡೊಂಬರಾಟದ ಮಧ್ಯೆ ಶಾಫಿ ಸ‌ಅದಿ ಯವರಂಥಾ ಜನಸ್ನೇಹಿ ನಾಯಕರೊಬ್ಬರು ಹಲವರ ವಿರೋಧಕ್ಕೆ ಒಳಗಾಗಿರುವುದು ದುರದೃಷ್ಟಕರ.

ನಾನು ಶಾಫಿ ಸ‌ಅದಿ ಯವರನ್ನು ಯಾವತ್ತೂ ಸಂಶಯದ ದೃಷ್ಟಿಯಿಂದ ನೋಡಿಲ್ಲ.
ಅವರು ಸಣ್ಣ ಪ್ರಾಯದಲ್ಲೇ ಮುದರ್ರಿಸ್ ಆಗಿ,ಸಾಮಾಜಿಕ ಕಾರ್ಯಕರ್ತನಾಗಿ ಮುಸ್ಲಿಂ ಸಮುದಾಯದ ಸರ್ವತೋಮುಖ ಪ್ರಗತಿಗೆ ಶ್ರಮಿಸುವುದರೊಂದಿಗೆ ಹಿಂದೂ,ಕ್ರೈಸ್ತ ಸಹಿತ ಎಲ್ಲಾ ಸಮುದಾಯದವರ ಧ್ವನಿಯಾಗಿ ನೆಲೆ ನಿಂತ ಒಬ್ಬ ಯಶಸ್ವೀ ನಾಯಕನಾಗಿ ನಾನು ಅವರನ್ನು ಕಂಡಿದ್ದೇನೆ.

ನೂತನ ಸರಕಾರ ಶಾಫಿ ಸ‌ಅದಿ ಯವರ ವಕ್ಫ್ ಸದಸ್ಯತನ ರದ್ದುಗೊಳಿಸಿ ಆದೇಶ ನೀಡಿದಾಗ ಹಲವರು ಸಾಮಾಜಿಕ ತಾಣಗಳಲ್ಲಿ ಸಂಭ್ರಮಿಸುವುದನ್ನು ಕಂಡೆ!
ಇನ್ನು ಮುಂದೆ ಶಾಫಿ ಸ‌ಅದಿ ಇಲ್ಲದ ವಕ್ಫ್ ಮಂಡಳಿ ಯನ್ನು ಹೊಸದಾಗಿ ಬರುವವರು ಎಷ್ಟು ಸಮರ್ಥವಾಗಿ ನಿರ್ವಹಿಸುತ್ತಾರೆ ಎಂಬ ಯಾವುದೇ ತಿಳುವಳಿಕೆ ಯಾರಿಗೂ ಇಲ್ಲ.
ಆದರೂ ನಿಷ್ಕಳಂಕ ಸಮುದಾಯ ಸೇವಕರೊಬ್ಬರನ್ನು ಅವರ ಸೇವೆಯಿಂದ ಬಿಡುಗಡೆಗೊಳಿಸಿದಾಗ ಇನ್ನು ವಕ್ಫ್ ಮಂಡಳಿಗೆ ನ್ಯಾಯ ನೀಡುವವರಾರು ಎಂದು ಚಿಂತಿಸುವ ಬದಲು ಅವರ ಸ್ಥಾನ ನಷ್ಟವಾದದ್ದಕ್ಕೆ ಸಂತೋಷ ಪಟ್ಟು ಕೈ ತೊಳೆದ ಮಾತ್ರಕ್ಕೆ ನಮ್ಮ ಗುರಿ ಈಡೇರಿದಂತಾಗುತ್ತದಾ !?

ಏನೇ ಇರಲಿ.
ಶಾಫಿ ಸ‌ಅದಿ ಯವರು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಸದಸ್ಯ ಮತ್ತು ಅಧ್ಯಕ್ಷ ರಾದ ಬಳಿಕ ವಕ್ಫ್ ಮಂಡಳಿ ಗೆ ಒಂದು ಘನತೆ, ಗೌರವ ಬಂದಿದೆ ಎಂಬುದನ್ನು ಅಲ್ಲಗಳೆಯಲಾಗದು.
ಸಾರ್ವಜನಿಕ ಸೇವೆಯಲ್ಲಿರುವಾಗ ಅಧಿಕಾರದಲ್ಲಿರುವ ಸರಕಾರಗಳೊಂದಿಗೆ ಹತ್ತಿರದ ಸಂಬಂಧ ವಿಡಬೇಕಾಗುತ್ತದೆ.
ಅದರಲ್ಲಿ ಕಾಂಗ್ರೆಸ್, ಬಿಜೆಪಿ ಎಂಬ ತಾರತಮ್ಯ ವಿಲ್ಲ.
ಶಾಫಿ ಸ‌ಅದಿ ಮಾಡಿದ್ದು ಅದನ್ನು ಮಾತ್ರ.
ಒಬ್ಬರ ಬಗ್ಗೆ ಮತ್ತೊಬ್ಬರಿಗೆ ಯಾವ ಅಭಿಪ್ರಾಯ ಕೂಡಾ ಹೇಳಬಹುದು.
ಆದರೆ ನಾವು ಹೇಳುವ ಅಭಿಪ್ರಾಯ ವಸ್ತುನಿಷ್ಠ, ಮತ್ತು ನಿಷ್ಪಕ್ಷಪಾತ ವಾಗಿರಬೇಕಾದದ್ದು ಅನಿವಾರ್ಯ.

ಇಷ್ಟು ವರ್ಷಗಳ ಕಾಲ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಯನ್ನು ಉತ್ತಮವಾಗಿ ಮುನ್ನಡೆಸಿದ ಎನ್.ಕೆ.ಮುಹಮ್ಮದ್ ಶಾಫಿ ಸ‌ಅದಿ ನಂದಾವರ ಅವರಿಗೆ ಸಮಾಜಕ್ಕೆ ಇನ್ನಷ್ಟು ಸೇವೆಗಳನ್ನು ಸಲ್ಲಿಸಲು ಕರುಣಾಮಯಿ ಅಲ್ಲಾಹು ಅವಕಾಶಗಳನ್ನು ಸೃಷ್ಟಿಸಲಿ ಎಂದು ಮನದುಂಬಿ ಪ್ರಾರ್ಥಿಸುತ್ತಿದ್ದೇನೆ.

error: Content is protected !! Not allowed copy content from janadhvani.com