janadhvani

Kannada Online News Paper

ಶಾಲಾ ಫಲಿತಾಂಶವು ಭವಿಷ್ಯದ ಫಲಿತಾಂಶಕ್ಕೆ ಮುಳುವಾಗದಿರಲಿ

“ಕೋಪ ದಿಂದ ಕೊಯ್ದ ಮೂಗು ಮತ್ತೆ ಬಂದೀತೆ?”

*✍#ನಿಝಾಂ_ಮಂಚಿ*

ಶಾಲಾ ಜೀವನದಲ್ಲಿ ಸಾಮಾನ್ಯವಾಗಿ ಹೆಚ್ಚಿನ ವಿದ್ಯಾರ್ಥಿಗಳು ಸಣ್ಣ ಪುಟ್ಟ ವಿಷಯಕ್ಕೂ ಆತ್ಮಹತ್ಯೆ ಮಾಡಿ ಹೆತ್ತವರಿಗೆ ತಮ್ಮ ಮಕ್ಕಳ ಮೇಲಿರುವ ಉಜ್ವಳ ಭವಿಷ್ಯದ ಕನಸಿಗೆ ಮುಳ್ಳಿಡುತ್ತಾ ದೊಡ್ಡ ತಪ್ಪು ಮಾಡುತ್ತಾರೆ.

ಅಂಕ ಕಡಿಮೆ ಬಂತೆಂದು ಅಥವಾ ಅನುತ್ತೀರ್ಣನಾದೆ ಎಂಬ ಕಾರಣಕ್ಕಾಗಿ ಹೆತ್ತವರು ಹೊಡೆಯಬಹುದು, ರೇಗಿಸುವರು ಎಂದು ಭಯಪಟ್ಟು ಆತ್ಮಹತ್ಯೆ ಮಾಡಲು ಹೊರಡುವಿರಿ. ನೀವು ಆತ್ಮಹತ್ಯೆ ಮಾಡಿದ್ದೀರಿ ಎಂದ ತಕ್ಷಣ ಶಿಕ್ಷಣ ಇಲಾಖೆಯಿಂದ ಅಂಕ ಹೆಚ್ಚು ಸಿಗಲು ಸಾದ್ಯವಿಲ್ಲ ತಾನೇ! ಮತ್ತೇಕೆ ಇಂತಹ ಕೆಟ್ಟ ನಿರ್ಧಾರ ತೆಗೆದು ದುಡುಕಿಕೊಳ್ಳುತ್ತೀರಾ? ಫೇಲಾಗಿದ್ದೀವಿ ಅಥವಾ ತಾವು ನಿರೀಕ್ಷೆ ಇಟ್ಟ ಅಂಕ ಬಂದಿಲ್ಲದಿದ್ದರೆ ಬೇಸರವಾಗುತ್ತದೆ. ಹಾಗಂತ ಎಲ್ಲದಕ್ಕೂ ಆತ್ಮಹತ್ಯೆಯೇ ಪರಿಹಾರ ಅಲ್ಲ ನೆನಪಿರಲಿ.

ಎಸ್.ಎಸ್.ಎಲ್.ಸಿ ,ಪಿ.ಯು.ಸಿ ಅನುತ್ತೀರ್ಣನಾದೆ ಎಂದು ಧೃತಿಗೆಡದೆ ಎಷ್ಟೋ ಮಂದಿ ತಮ್ಮಲ್ಲಿ ಅಡಗಿಕೊಂಡಿದ್ದ ಪ್ರತಿಭೆಯನ್ನು ಹೊರ ಜಗತ್ತಿಗೆ ತೋರಿಸಿ ಮಾದರಿಯಾದ ಅದೆಷ್ಟೋ ವ್ಯಕ್ತಿಗಳು ನಮ್ಮ ಕಣ್ಣ ಮುಂದೆ ಇಲ್ಲವೇ. ಅವರೆಲ್ಲರೂ ಅಂದು ಆತ್ಮಹತ್ಯೆ ಮಾಡಿಕೊಂಡಿದ್ದರೆ ಸಮಾಜದಲ್ಲಿ ಇಂದು ಅವರು ಯಾರು ಎಂದು ಗುರುತಿಸಲು ಅಸಾಧ್ಯವಾಗಿರುತಿತ್ತು.

ಜೀವನ ಅಂದರೆ ಇಲ್ಲಿಗೆ ಮುಕ್ತಾಯ ಅಂದುಕೊಳ್ಳದಿರಿ. ಜೀವನದಲ್ಲಿ ಇನ್ನೂ ಹಲವು ಮೆಟ್ಟಿಲುಗಳನ್ನು ಹತ್ತಲು ಇವೆ. ಅಲ್ಲಿ ಉತ್ತೀರ್ಣ-ಅನುತ್ತೀರ್ಣ ಎಲ್ಲಾ ಅನುಭವ ಪಡೆಯಲಿಕ್ಕಿದೆ. ಎಲ್ಲವನ್ನೂ ಸಮಾನ ದೃಷ್ಟಿಯಲ್ಲಿ ನೋಡಿಕೊಂಡು ಎದುರಿಸಿದರೆ ಮಾತ್ರ ನಮ್ಮ ಗುರಿಯ ದಾರಿ ಯಶಸ್ವಿಯಾಗುವುದು.

ಫೇಲ್ ಅಥವಾ ನಿರೀಕ್ಷೆಗಿಂತ ಕಡಿಮೆ ಮಾರ್ಕ್ ಬಂದಿದೆ ಎಂದು ಬೇಸರಿಸುವವರು ಇನ್ನಾದರೂ ನಿರ್ಧಿಷ್ಟ ಗುರಿ ಇಡುವ ಮನಸ್ಥಿತಿ ಬೆಳೆಸಿ. ಇದೇ ಚಿಂತೆ ಇಟ್ಟು ನಿಮ್ಮ ಮೇಲೆ ಹೆತ್ತವರು ಇಟ್ಟ ಉಜ್ವಲ ಭವಿಷ್ಯ ಆಕಾಂಕ್ಷೆಯನ್ನು ಕೇವಲ ಕನಸಾಗಿಸದಿರಿ.

*ಆರಂಭದಲ್ಲಿ ರಾಜ್ಯ-ಜಿಲ್ಲೆ ಗಳ ಪರೀಕ್ಷೆಗಳಲ್ಲಿ ನಂಬರ್.1 ಬಂದ ವ್ಯಕ್ತಿಗಳು ಇಂದೇಕೆ ಇಂಜಿನಿಯರಿಂಗ್ ,ಡಾಕ್ಟರ್ ಪದವಿಯಲ್ಲಿ ನಂಬರ್ ಒನ್ ಪಟ್ಟಿಯಲ್ಲಿ ಅವರ ಹೆಸರು ಯಾಕಿಲ್ಲ!? ಎಂಬುವುದು ಚಿಂತನಾರ್ಹವಾಗಿದೆ.*

ಎಸ್.ಎಸ್.ಎಲ್.ಸಿ, ಪಿಯುಸಿಯಂತಹ ಪರೀಕ್ಷೆಯಲ್ಲಿ ಫೇಲಾಗಿ ಅದನ್ನು ಸವಾಲಾಗಿ ತೆಗೆದು ಎದುರಿಸಿ ಎಷ್ಟೋ ಮಂದಿ ಡಾಕ್ಟರ್ ,ಇಂಜಿನಿಯರಿಂಗ್ , ಬ್ಯುಸಿನೆಸ್ ಮ್ಯಾನ್ ಆಗಿರುವುದು ನಮ್ಮ ಮುಂದೆ ಇರುವ ಅದೆಷ್ಟೋ ಉದಾಹರಣೆಗಳಾಗಿವೆ.

ಇನ್ನೊಂದು ವಿಷಯವೇನಂದರೆ ಫಲಿತಾಂಶ ಸಮಯಗಳಲ್ಲಿ ಹೆತ್ತವರೂ ಜಾಗೃತರಾಗಿರಬೇಕಾಗಿದೆ. ಹೌದು ಅತಿಯಾಗಿ ವಿದ್ಯಾರ್ಥಿಗಳ ಫಲಿತಾಂಶಗಳ ಇಂತಹ ಸಮಯಗಳಲ್ಲಿ ಕೆಲವು ಹೆತ್ತವರು ಹೇಳುವ ಮಾತು. ತಾವು ನಿರೀಕ್ಷಿಸುವ ಅಂಕ ಸಿಗದಿದ್ದರೆ ಇನ್ಮುಂದೆ ನೀನು ಈ ಮನೆಯ ಹೊಸಿಲು ದಾಟಕೂಡದು. ಫಲಿತಾಂಶ ಬಂದ ನಂತರ ಅಂಕ ಕಡಿಮೆ ಬಂದರೆ ಅಥವಾ ಫೇಲಾದರೆ ,ಹೋಗಿ ಸಾಯಿ ನಿನ್ನಂತಹ ಮಗ/ಳು ನಮಗೆ ಅಗತ್ಯವಿಲ್ಲ!?ಎಂಬತಂಹ ಮಾತುಗಳು.
ಒಂದು ಕ್ಷಣ ಹೆತ್ತವರು ತಮ್ಮಲ್ಲಿರುವ ಸ್ವಾರ್ಥತೆಯಿಂದ ದುಡುಕಿ ಹೇಳುವ ಮಾತು , ಒಂದು ಗಾದೆ ಮಾತಿನಂತೆ “ಕೋಪ ದಿಂದ ಕೊಯ್ದ ಮೂಗು ಮತ್ತೆ ಬಂದೀತೆ”(?) ತಮ್ಮ ಮಕ್ಕಳಿಂದ ಊರಿಡೀ ನಮ್ಮ ಮಗ ಎಂಬ ಕೀರ್ತೀ ಸಿಗಬೇಕು ಎಂದು ಪರೀಕ್ಷೆ ಸಮಯದಲ್ಲಿ ಹೆಚ್ಚು ಒತ್ತಡ ಕೊಟ್ಟು ನಿಮ್ಮ ಮಕ್ಕಳನ್ನು ನೀವೇ ಕಳೆದುಕೊಳ್ಳಲು ಮುಂದಾಗುತ್ತಿದ್ದೀರಿ ನೆನಪಿರಲಿ. ಕಳೆಕೊಂಡ ನಂತರ ಮತ್ತೆ ಆಲೋಚಿಸಿ ಸಮಯ ಕೊಲ್ಲುವುದರಿಂದ ಏನು ಲಾಭವಿಲ್ಲ. ಕೇವಲ ಪರೀಕ್ಷೆಯಲ್ಲಿ ಫೇಲಾದರು ಅಥವಾ ಕಡಿಮೆ ಅಂಕ ಬಂತು ಎಂಬ ಕಾರಣದ ಹೆಸರಿನಲ್ಲಿ ಮನೆಯಿಂದ ಹೊರಗಡೆ ಹಾಕುವುದು ಅಥವಾ ಹಿಂಸೆ ನೀಡಿ ಅವರ ಭವಿಷ್ಯ ಹಾಳಾಗಲು ಮುಳ್ಳಾಗುವ ಹೆತ್ತವರೆ ,ನಿಮ್ಮಿಂದ ನಿಮ್ಮ ಮಕ್ಕಳಿಗೆ ಈ ತರ ಮಾಡಿ ಏನು ಸಾಧಿಸಲು ಸಾಧ್ಯವಿಲ್ಲ ಎಂಬುವುದು ಮರೆಯದಿರಿ. ಪ್ರಸ್ತುತ ದಿನಗಳಲ್ಲಿ ಹೇಳ ಬೇಕಾದರೆ ಫೇಲಾಗುವುದು ಎಂಬುವುದೇ ಕಷ್ಟ, ಪಾಸಾಗುವುದು ಸುಲಭ.!! ಒಂದು ವೇಳೆ ಫೇಲಾದರೂ ಸಾವು ಅಥವಾ ತಮ್ಮ ಆತ್ಮವನ್ನು ತಾವೆ ಕೊಲ್ಲುವುದು ಸರಿ ದಾರಿ ಅಲ್ಲ. ಹಲವು ದಾರಿ ,ವಿಧಾನಗಳನ್ನು ಬಳಸಿ ಮಕ್ಕಳು ಜೀವನದಲ್ಲಿ ಯಶಸ್ಸನ್ನು ಪಡೆಯುವ ನನಸಿನ ಹಾದಿಗೆ ನೀವು ದಾರಿ ದೀಪವಾಗಿರಬೇಕು.

ತಮ್ಮ ಮಕ್ಕಳು ಫೇಲಾದರೆಂದು ಅವರ ಮನಸ್ಸಿಗೆ ಹೆಚ್ಚು ಮಾನಸಿಕ ಒತ್ತಡ ನೀಡದೇ, ಸಮಧಾನ ಪಡಿಸಿ. ಭವಿಷ್ಯದ ಕುರಿತು ಧೈರ್ಯ ತುಂಬಿ ಮುಂದಿನ ದಿನದಲ್ಲಿ ಉತ್ತಮ ವ್ಯಕ್ತಿಯಾಗಿ ಊರಿಗೆ ಮಾದರಿಯಾಗುವಂತಹ ಮಗ/ಳು ಬೆಳೆಯುವಂತೆ ನಿಮ್ಮ ಪ್ರಯತ್ನದ ಕೈ ಬಲವಾಗಿರಲಿ. ಅವರಲ್ಲಿ ಅಡಗಿರುವ ಪ್ರತಿಭೆಗೆ ಪ್ರೊತ್ಸಾಹಿಸಿ ,ಸಲಹೆ ನೀಡಿ ಸಹಕರಿಸಿ. ಅವರನ್ನು ನಿರಾಶೆಗೊಳಿಸದಿರಿ ಭವಿಷ್ಯದ ಜೀವನದ ಬಗ್ಗೆ ಹೆಚ್ಚು ಅರಿವು ಮೂಡಿಸುವರಾಗಿರಿ.

ಇನ್ನೂ ನಿಮ್ಮ ಮಕ್ಕಳು ಉತ್ತಮ ಅಥವಾ ಕಡಿಮೆ ಅಂಕದೊಂದಿಗೆ ಉತ್ತೀರ್ಣರಾದೆ ಎಂಬ ಹೆಸರಿನಲ್ಲಿ ಅವರ ಭವಿಷ್ಯದ ಫಲಿತಾಂಶವನ್ನು ಇದರಲ್ಲಿ ನಿರ್ಧರಿಸದಿರಿ. ಅವರಲ್ಲಿರುವ ಪ್ರತಿಭೆ; ಮುಂದೆ ಯಾವ ವಿಷಯದಲ್ಲಿ ಅಧ್ಯಾಯನ ಮಾಡಿದರೆ ಒಳಿತು ಎನ್ನುವುದರ ಬಗ್ಗೆ ದಿಟ್ಟ ನಿರ್ಧಾರ ನಿಮ್ಮದಾಗಿರಬೇಕು. ಎಸ್ಸ್ಎಸ್ಸ್ಎಲ್ಸಿ ಪರೀಕ್ಷೆಯಲ್ಲಿ ಅಂಕ ಹೆಚ್ಚು ಬಂತೆಂದು ಪಿ.ಯು.ಸಿ. ಯಲ್ಲಿ ಅವರು ವಿಜ್ಞಾನ ವಿಭಾಗವೇ ಆರಿಸಿಕೊಳ್ಳಬೇಕೆಂದು ಅಥವಾ ಕಡಿಮೆ ಅಂಕ ಬಂತೆಂಬ ಕಾರಣಕ್ಕೆ ಕಲಾ ವಿಭಾಗವನ್ನೇ ಆಯ್ದುಕೊಳ್ಳಬೇಕೆಂಬ ಯಾವುದೇ ನಿಯಮವಿಲ್ಲ. . ನಿಮ್ಮ ಸ್ವಾರ್ಥ ಅಥವಾ ಅವಸರದ ನಿರ್ಧಾರದಿಂದ ನಿಮ್ಮ ಮಕ್ಕಳ ಭವಿಷ್ಯವನ್ನು ನೀವಾಗಿಯೇ ಕೊಲ್ಲುವಂತಾಗಬಾರದು. ಹಾಗಾಗಿ ಅವರಿಗೆ ಯಾವ ವಿಷಯದಲ್ಲಿ ಹೆಚ್ಚು ಆಸಕ್ತಿ ಇದೆಯೋ ಆ ವಿಷಯವನ್ನೇ ಆರಿಸಿಕೊಳ್ಳಲು ನಿಮ್ಮ ಸಂಪೂರ್ಣ ಪ್ರೋತ್ಸಾಹ ಅವರಿಗೆ ಪ್ರಧಾನವಾಗಿರುತ್ತದೆ.

ಎಲ್ಲಾ ವಿದ್ಯಾರ್ಥಿಗಳಿಗೂ ಶುಭವಾಗಲಿ..
ಮುಂದಿನ ಜೀವನವು ಯಶಸ್ವಿಯತ್ತ ಮುನ್ನುಗ್ಗಲಿ..

ನಿಮ್ಮ ಪ್ರೀತಿಯ ಸಹೋದರನಾಗಿ ವಿದ್ಯಾರ್ಥಿಗಳಿಗೂ ನಿಮ್ಮ ಮನೆಯ ಮಗನಾಗಿ ಪ್ರತೀ ಹೆತ್ತವರಿಗೂ ನನ್ನ ಪುಟ್ಟ ಅನಿಸಿಕೆ.!

error: Content is protected !! Not allowed copy content from janadhvani.com