ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆಯುವುದೇ ನಮ್ಮ ಗುರಿ: ಜಿಗ್ನೇಶ್ ಮೇವಾನಿ

ಚಿಕ್ಕಮಗಳೂರು(ಜನಧ್ವನಿ): ‘ಬಿಜೆಪಿ ಅಧಿಕಾರಕ್ಕೆ ಬರದಂತೆ, ಫ್ಯಾಸಿಸಂ ಹರಡದಂತೆ ಮಾಡುವುದೇ ನಮ್ಮೆಲ್ಲರ ಗುರಿಯಾಗಬೇಕು’ ಗುಜರಾತ್‌ನ ವಡ್‌ಗಾಂ ಕ್ಷೇತ್ರದ ಶಾಸಕ ಜಿಗ್ನೇಶ್‌ ಮೇವಾನಿ ಹೇಳಿದರು.ಕರ್ನಾಟಕ ಕೋಮು ಸೌಹಾರ್ದ ವೇದಿಕೆಗೆ 15 ವರ್ಷ ಸಂದ ನಿಮಿತ್ತ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಸೌಹಾರ್ದ ಮಂಟಪ: ಹಿಂದಣ ನೋಟ… ಮುಂದಣ ಹೆಜ್ಜೆ…’ ರಾಷ್ಟ್ರೀಯ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

‘ಪ್ರಧಾನಿ ಮೋದಿ ಆಡಳಿತ ವೈಖರಿಯನ್ನು ನಾವೆಲ್ಲರೂ ನೋಡಿದ್ದೇವೆ. ಈ ಸಂದರ್ಭದಲ್ಲಿ ನಾವೆಲ್ಲರೂ ಒಂದು ವಿಚಾರ ಸ್ಪಷ್ಟಮಾಡಿಕೊಳ್ಳಬೇಕು. ಎಲ್ಲ ರಾಜಕೀಯ ಪಕ್ಷಗಳು ಆ ಕಾಲದಿಂದ ಈವರೆಗೆ ನಮ್ಮನ್ನು ಶೋಷಣೆ ಮಾಡಿವೆ. ಕರ್ನಾಟಕಕ್ಕೆ ನಾನು ಪ್ರಚಾರಕ್ಕೆ ಬಂದರೆ ಅದರಿಂದ ಯಾರಿಗೆ ರಾಜಕೀಯ ಲಾಭ ಸಿಗುತ್ತದೆ ಎಂಬುದು ನನಗೆ ಮುಖ್ಯವಾಗುವುದಿಲ್ಲ. ಬಿಜೆಪಿ ಮತ್ತು ಫ್ಯಾಸಿಸ್ಟ್‌ ಶಕ್ತಿಗಳಿಗೆ ಎಲ್ಲ ರೀತಿಯಲ್ಲೂ ಪೆಟ್ಟು ಕೊಡುವುದು ಮುಖ್ಯವಾಗಿರುತ್ತದೆ’ ಎಂದರು.

‘ಪ್ರಧಾನಿ ಮೋದಿ ಅವರು ಮುದುಕರಾಗಿದ್ದಾರೆ. ಪೊಳ್ಳು ಭರವಸೆಗಳನ್ನು ನೀಡುತ್ತಾರೆ. ಅವರ ಮಾತುಗಳನ್ನು ಕೇಳುವುದನ್ನು ನಿಲ್ಲಿಸಬೇಕಿದೆ. ಕನ್ನಯ್ಯಕುಮಾರ್‌, ಅಲ್ಪೇಶ್‌ ಠಾಕೂರ್‌, ಹಾರ್ದಿಕ್‌ ಪಟೇಲ್‌ ಮಾತುಗಳನ್ನು ಕೇಳಬೇಕಿದೆ’ ಎಂದರು.

‘ಕೋಮುವಾದ ಪ್ರಚಾರಕ್ಕಾಗಿ ಅಮಿತ್‌ ಷಾ ರಾಜ್ಯಕ್ಕೆ ಬರುತ್ತಾರೆ. ಚುನಾವಣೆ ವೇದಿಕೆಗಳು ಕೋಮುವಾದದ ಚಿಂತನೆಗಳನ್ನು ಪಸರಿಸುತ್ತಿವೆ’ ಎಂದರು.

‘ಕರ್ನಾಟಕ ನಾಗರಿಕರ ಸಮಾಜ ಎಚ್ಚೆತ್ತಿದೆ, ಸಕ್ರಿಯವಾಗಿದೆ. ಇಲ್ಲಿ ಚಳವಳಿಗಳು ನಿರಂತರವಾಗಿ ಕಾರ್ಯಪ್ರವೃತವಾಗಿರುತ್ತವೆ. ಹೀಗಾಗಿ, ಕರ್ನಾಟಕ ಎಂದಿಗೂ ಗುಜರಾತ್‌ ಆಗುವುದಿಲ್ಲ ಎಂಬ ನಂಬಿಕೆ ಇದೆ. ಇಲ್ಲಿನ ಗುರುದತ್ತಾತ್ರೇಯ ಮತ್ತು ಬಾಬಾಬುಡನ್‌ ಸ್ವಾಮಿ ಇಬ್ಬರು ಕೂಡಿ ಬಾಳುವ ಪರಂಪರೆಯನ್ನು ಗುಜರಾತ್‌ಗೂ ಒಯ್ಯುವ ಕೆಲಸ ಆಗಬೇಕಿದೆ’ ಎಂದರು.

‘ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಇನ್ನು ಶಕ್ತಿಶಾಲಿಯಾಗಿ ಕಾರ್ಯ ನಿರ್ವಹಿಸಿದರೆ ಕೋಮುವಾದಿಗಳಿಗೆ ತಿರುಗೇಟು ನೀಡಬಹುದು.  ವಡಗಾಂನಲ್ಲಿ ಆಗಿರುವಂತೆ ಇಲ್ಲಿನ ದಲಿತರು, ಮುಸ್ಲಿಮರು, ಶೋಷಿತರು ಬಿಜೆಪಿ ಸೋಲಿಸುವ ಕೆಲಸ ಮಾಡಬೇಕು. ಬಿಜೆಪಿಯ ವಿರುದ್ಧದ ಹೋರಾಟಕ್ಕಾಗಿ ಸಿಪಿಐ, ಆಮ್‌ ಆದ್ಮಿ, ಬಿಎಸ್‌ಪಿ, ಸ್ವರಾಜ್‌ ಇಂಡಿಯಾ ಪಕ್ಷದವರು ನನಗೆ ಬೆಂಬಲ ನೀಡಿದರು’ ಎಂದು ಸ್ಮರಿಸಿದರು.

‘ಗೌರಿ ಲಂಕೇಶ್‌ ಹತ್ಯೆ, ವಿಜಯಪುರ ಜಿಲ್ಲೆಯ ದಲಿತ ವಿದ್ಯಾರ್ಥಿನಿ ಹತ್ಯೆ ಪ್ರಕರಣಗಳಲ್ಲಿ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಇಲ್ಲಿನ ರಾಜ್ಯ ಸರ್ಕಾರ ಗಟ್ಟಿ ನಿಲುವು ಪ್ರದರ್ಶಿಸಬೇಕು. ಇಲ್ಲದಿದರೆ ನಾವೂ ಸುಮ್ಮನಿರುವುದಿಲ್ಲ’ ಎಂದರು.

Leave a Reply

Your email address will not be published. Required fields are marked *

error: Content is protected !!