janadhvani

Kannada Online News Paper

ದೇಶದ ಘನತೆಯನ್ನು ಜಾಗತಿಕವಾಗಿ ಹರಾಜಿಗಿಟ್ಟ ನೂಪುರ್‌ ಶರ್ಮಾಗೆ ಪೋಲೀಸ್ ಭದ್ರತೆ

ನವದೆಹಲಿ: ಬಿಜೆಪಿಯ ರಾಷ್ಟ್ರೀಯ ವಕ್ತಾರೆ ನೂಪುರ್‌ ಶರ್ಮಾ ಅವರು ಪ್ರವಾದಿ ಮುಹಮ್ಮದ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ನಂತರ ವಿಶ್ವದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಹಲವಾರು ರಾಷ್ಟ್ರಗಳು ತಮ್ಮಲ್ಲಿನ ಭಾರತೀಯ ರಾಯಭಾರಿಗೆ ಸಮನ್ಸ್‌ ನೀಡಿ ಈ ಬಗ್ಗೆ ತಮ್ಮ ಆಕ್ಷೇಪ ವ್ಯಕ್ತಡಿಸಿವೆ. ಇದರ ನಂತರ ಬಿಜೆಪಿಯು ನೂಪುರ್‌ ಶರ್ಮಾ ಅವರನ್ನು ಅಮಾನತು ಮಾಡಿದ್ದು, ಅವರ ವಿರುದ್ಧ ಎಫ್‌ಐಆರ್ ಕೂಡಾ ದಾಖಲಾಗಿದೆ.

ಇದೀಗ ನೂಪುರ್ ಶರ್ಮಾಗೆ ಬೆದರಿಕೆಗಳು ಬಂದ ಹಿನ್ನಲೆಯಲ್ಲಿ ಅವರಿಗೆ ಮತ್ತು ಅವರ ಕುಟುಂಬಕ್ಕೆ ಭದ್ರತೆ ಒದಗಿಸಲಾಗಿದೆ ಎಂದು ದೆಹಲಿ ಪೊಲೀಸರು ಮಂಗಳವಾರ ಹೇಳಿದ್ದಾರೆ. ಸೋಮವಾರದಂದು ನೂಪುರ್ ಅವರು ತನಗೆ ಬೆದರಿಕೆಗಳು ಬರುತ್ತಿದೆ ಎಂದು ಆರೋಪಿಸಿ, ಭದ್ರತೆಯನ್ನು ಕೋರಿದ್ದರು. ಇದನ್ನು ಅನುಸರಿಸಿ ದೆಹಲಿ ಪೊಲೀಸರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

“ತನಗೆ ಬೆದರಿಕೆಗಳು ಬರುತ್ತಿದೆ ಎಂದು ನೂಪುರ್‌ ಆರೋಪಿಸಿದ್ದರಿಂದ ಅವರಿಗೆ ಮತ್ತು ಅವರ ಕುಟುಂಬಕ್ಕೆ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಟಿವಿ ಚಾನೆಲ್ ಚರ್ಚೆಯ ಸಂದರ್ಭದಲ್ಲಿ ನೂಪುರ್‌ ಶರ್ಮಾ ಅವರು ಪ್ರವಾದಿ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು. ಅವರ ಈ ಹೇಳಿಕೆ ಇರಾನ್, ಸೌದಿ ಅರೇಬಿಯಾ, ಕತಾರ್‌, ಯುಎಇ, ಇಂಡೋನೇಷ್ಯಾ, ಜೋರ್ಡಾನ್ ಸೇರಿದಂತೆ ಹಲವಾರು ರಾಷ್ಟ್ರಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಭಾರಿ ರಾಜತಾಂತ್ರಿಕ ಗದ್ದಲಕ್ಕೆ ಕಾರಣವಾಗಿತ್ತು.

ನೂಪುರ್‌ ಅವರ ಹೇಳಿಕೆಗಳಿಂದ ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ಮತ್ತು ಅವರ ಪಕ್ಷವಾದ ಬಿಜೆಪಿ ದೂರ ಉಳಿದಿವೆ. ಅವರ ವಿವಾದಾತ್ಮಕ ಹೇಳಿಕೆಗೆ ಅವರನ್ನು ಪಕ್ಷದಿಂದ ಭಾನುವಾರ ಅಮಾನತುಗೊಳಿಸಲಾಗಿದೆ. ಅವರನ್ನು ಮಾತ್ರವಲ್ಲದೆ, ಅದೇ ವಿವಾದದಲ್ಲಿ ಬಿಜೆಪಿ ದೆಹಲಿ ಘಟಕದ ಮಾಧ್ಯಮ ಮುಖ್ಯಸ್ಥ ನವೀನ್ ಕುಮಾರ್ ಜಿಂದಾಲ್ ಅವರನ್ನು ಆರು ವರ್ಷಗಳಿಗೆ ಪಕ್ಷದಿಂದ ಉಚ್ಚಾಟಿಸಿದೆ.

ಈ ಮಧ್ಯೆ ಬಿಜೆಪಿಯು ಎಲ್ಲಾ ಧರ್ಮಗಳನ್ನು ಗೌರವಿಸುತ್ತದೆ ಮತ್ತು ಯಾವುದೇ ಧಾರ್ಮಿಕ ವ್ಯಕ್ತಿತ್ವವನ್ನು ಅವಹೇಳನ ಮಾಡುವುದನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿಕೆ ನೀಡಿದೆ. ಇದರ ನಂತರ, ನೂಪುರ್‌ ಶರ್ಮಾ ಅವರು ತಮ್ಮ ವಿವಾದಾತ್ಮಕ ಹೇಳಿಕೆಯನ್ನು ಬೇಷರತ್ತಾಗಿ ಹಿಂತೆಗೆದುಕೊಂಡಿದ್ದಾರೆ.

ನೂಪುರ್‌ ಹೇಳಿಕೆಯನ್ನು ವಿರೋಧಿಸಿ ಜೂನ್ 3 ರಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದ್ದ ಬಂದ್‌‌ ವೇಳೆ ಹಿಂಸಾತ್ಮಕ ಘರ್ಷಣೆಗಳು ಭುಗಿಲೆದ್ದಿದ್ದವು. ಈ ಘರ್ಷನೆಯಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ.

error: Content is protected !! Not allowed copy content from janadhvani.com