janadhvani

Kannada Online News Paper

ಪ್ರವಾದಿ ನಿಂದನೆ: ಭಾರತೀಯ ರಾಯಭಾರಿಗೆ ಸಮನ್ಸ್ ಜಾರಿ ಮಾಡಿದ ಖತರ್

ಇಬ್ಬರನ್ನೂ ಪಕ್ಷದಿಂದ ಅಮಾನತುಗೊಳಿಸಲಾಗಿದ್ದು, ವಿಚ್ಛಿದ್ರಕಾರಿ ಶಕ್ತಿಗಳ ಅನಿಸಿಕೆಗಳನ್ನು ಭಾರತ ಎಂದಿಗೂ ಒಪ್ಪುವುದಿಲ್ಲ ಎಂದು ದೀಪಕ್ ಮಿತ್ತಲ್ ಉತ್ತರಿಸಿದ್ದಾರೆ

ದೋಹಾ: ಬಿಜೆಪಿ ವಕ್ತಾರರಿಬ್ಬರು ಪ್ರವಾದಿ ಮುಹಮ್ಮದ್ (ಸ.ಅ)ಅವರ ಬಗ್ಗೆ ನೀಡಿರುವ ಕೀಳು ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡುವಂತೆ ಖತಾರ್ ಸರ್ಕಾರ ಭಾರತೀಯ ರಾಯಭಾರಿಗೆ ಸಮನ್ಸ್ ಜಾರಿ ಮಾಡಿದೆ.

ಬಿಜೆಪಿ ವಕ್ತಾರರಾದ ನೂಪುರ್ ಶರ್ಮಾ ಮತ್ತು ನವೀನ ಕುಮಾರ್ ಜಿಂದಾಲ್ ಪ್ರವಾದಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಬಿಜೆಪಿ ನಾಯಕರ ಹೇಳಿಕೆಯು ಕಾನ್ಪುರ್‌ದಲ್ಲಿ ಗಲಭೆಗೆ ಕಾರಣವಾಗಿದ್ದು, ಭಾರೀ ಆಕ್ರೋಶ ಕೂಡ ವ್ಯಕ್ತವಾಗಿವೆ.ಇಬ್ಬರು ವಕ್ತಾರರನ್ನು ವಜಾಗೊಳಿಸಿದ ಬಳಿಕವೂ ಪ್ರಕರಣವನ್ನು ಬಿಜೆಪಿ ಮತ್ತು ಕೇಂದ್ರ ಸರಕಾರ ನಿರ್ವಹಿಸಿದ ರೀತಿಯ ಕುರಿತು ಸಾಮಾಜಿಕ ತಾಣದಲ್ಲಿ ವಿಶ್ವದಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ.

ಈ ಮಧ್ಯೆ ಪ್ರವಾದಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಬಗ್ಗೆ ಸ್ಪಷ್ಟನೆ ಬಯಿಸಿ, ಖತಾರ್ ಸರ್ಕಾರ ಭಾರತೀಯ ರಾಯಭಾರಿಗೆ ಸಮನ್ಸ್ ಜಾರಿ ಮಾಡಿದೆ.” ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಸರಕಾರವು ಸಾರ್ವಜನಿಕ ಕ್ಷಮೆ ಯಾಚಿಸಬೇಕು ಹಾಗೂ ಖಂಡನೆ ವ್ಯಕ್ತಪಡಿಸಬೇಕು” ಎಂದು ಖತರ್ ಆಗ್ರಹಿಸಿದೆ. ಜೊತೆಗೆ, ಇಬ್ಬರು ವಕ್ತಾರರನ್ನು ವಜಾಗೊಳಿಸಿದ್ದನ್ನು ಸ್ವಾಗತಿಸಿದೆ. ಇಂತಹಾ ಹೇಳಿಕೆಗಳು ಸಾಮಾಜಿಕ ಅಶಾಂತಿಗೆ ಕಾರಣವಾಗುತ್ತದೆ ಎಂದೂ ಅದು ತಿಳಿಸಿದೆ.

ಖತಾರ್ ಸರ್ಕಾರದ ಸಮನ್ಸ್‌ಗೆ ಉತ್ತರ ನೀಡಿರುವ ಭಾರತೀಯ ರಾಯಭಾರಿ ದೀಪಕ್ ಮಿತ್ತಲ್, ವಿವಾದಕ್ಕೆ ಕಾರಣವಾಗಿರುವ ನಾಯಕರ ಹೇಳಿಕೆಗಳು ಭಾರತ ಸರ್ಕಾರದ ಅನಿಸಿಕೆಯನ್ನು ಹೊರಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಿವಾದಾತ್ಮಕ ಹೇಳಿಕೆ ನೀಡಿದ ನಾಯಕರ ವಿರುದ್ಧ ಪಕ್ಷ ಕ್ರಮ ಕೈಗೊಂಡಿದೆ. ಇಬ್ಬರನ್ನೂ ಪಕ್ಷದಿಂದ ಅಮಾನತುಗೊಳಿಸಲಾಗಿದ್ದು, ವಿಚ್ಛಿದ್ರಕಾರಿ ಶಕ್ತಿಗಳ ಅನಿಸಿಕೆಗಳನ್ನು ಭಾರತ ಎಂದಿಗೂ ಒಪ್ಪುವುದಿಲ್ಲ ಎಂದು ದೀಪಕ್ ಮಿತ್ತಲ್ ಉತ್ತರಿಸಿದ್ದಾರೆ.

ನಮ್ಮ ನಾಗರಿಕ ಪರಂಪರೆ ಮತ್ತು ವೈವಿಧ್ಯತೆಯಲ್ಲಿ ಏಕತೆಯ ಬಲವಾದ ಸಾಂಸ್ಕೃತಿಕ ಸಂಪ್ರದಾಯಗಳಿಗೆ ಅನುಗುಣವಾಗಿ, ಭಾರತ ಸರ್ಕಾರವು ಎಲ್ಲಾ ಧರ್ಮಗಳಿಗೆ ಅತ್ಯುನ್ನತ ಗೌರವವನ್ನು ನೀಡುತ್ತದೆ. ಅವಹೇಳನಕಾರಿ ಹೇಳಿಕೆಗಳನ್ನು ನೀಡಿದವರ ವಿರುದ್ಧ ಈಗಾಗಲೇ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ದೀಪಕ್ ಮಿತ್ತಲ್ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

ಪ್ರವಾದಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದು ಅರಬ್ ರಾಷ್ಟ್ರಗಳ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದ್ದು, ಭಾರತೀಯ ಸರಕು ಮತ್ತು ಚಲನಚಿತ್ರಗಳನ್ನು ನಿಷೇಧಿಸುವ ಕುರಿತು ಅಲ್ಲಿನ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭವಾಗಿದೆ.

error: Content is protected !! Not allowed copy content from janadhvani.com