NEET- 60 ಸಾವಿರ ವೈದ್ಯಕೀಯ ಶಿಕ್ಷಣ ಸೀಟುಗಳಿಗೆ ಲಕ್ಷಾಂತರ ವಿದ್ಯಾರ್ಥಿಗಳ ಸಾಲು

ನವದೆಹಲಿ:- ಪ್ರತಿಭಾವಂತರಿಗೆ ಮಾತ್ರ ವೈದ್ಯಕೀಯ ಸೀಟು ದೊರಕಿಸಿಕೊಡುವ ಹಾಗೂ ಪ್ರತಿಭಾವಂತರಲ್ಲದವರನ್ನು ವೈದ್ಯಕೀಯ ಶಿಕ್ಷಣದಿಂದ ದೂರ ಇಡುವ ಉದ್ದೇಶದಿಂದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಡಿ ರೂಪಿಸಿದ್ದ ಪರ್ಸೇಂಟೈಲ್ ವ್ಯವಸ್ಥೆಯಡಿ ನಿರ್ಧರಿಸಿದ್ದ ಅಂಕ ಪಡೆದ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣವನ್ನು ಪಡೆದುಕೊಳ್ಳಲು ಯಶಸ್ವಿಯಾಗಿದ್ದಾರೆ.

ಈ ಪರ್ಸೇಂಟೈಲ್ ವ್ಯವಸ್ಥೆಯಿಂದಾಗಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಡಿ ಕಳೆದ ಬಾರಿ ಭೌತಶಾಸ್ತ್ರದಲ್ಲಿ ಶೇ.5 ರಸಾಯನ ಶಾಸ್ತ್ರದಲ್ಲಿ ಶೇ.10 ಜೀವ ಶಾಸ್ತ್ರದಲ್ಲಿ ಶೇ.20 ಅಂಕಗಳನ್ನು ಪಡೆದಿರುವವರೂ ಸಹ ಕಳೆದ 2 ವರ್ಷಗಳಲ್ಲಿ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಪಡೆದುಕೊಂಡಿರುವುದು ಬೆಳಕಿಗೆ ಬಂದಿದೆ.

2016ಕ್ಕೂ ಮೊದಲು ನೀಟ್ ಪರೀಕ್ಷೆಯಲ್ಲಿ ವೈದ್ಯಕೀಯ ಸೀಟುಗಳನ್ನು ಪಡೆಯಬೇಕಾದರೆ ನೀಟ್ ಪರೀಕ್ಷೆಗೆ ನಿಗಧಿಪಡಿಸಿದ್ದ ಗರಿಷ್ಠ 720 ಅಂಕಗಳಿಗೆ ಸಾಮಾನ್ಯ ವರ್ಗದವರು ಶೇ. 50 ಮತ್ತು ಮೀಸಲು ವರ್ಗದವರಿಗೆ ಶೇ.40 ಅಂಕಗಳನ್ನು ಕಡ್ಡಾಯವಾಗಿ ಪಡೆಯಬೇಕೆಂದು ನಿಯಮ ರೂಪಿಸಲಾಗಿತ್ತು. ಆದರೆ 2016ರ ನಂತರ ಈ ನಿಯಮವನ್ನು 50ನೇ ಮತ್ತು 40ನೇ ಪರ್ಸೇಂಟೈಲ್ ಎಂದು ನಿಯಮ ರೂಪಿಸಲಾಯಿತು. ಬದಲಾದ ಈ ಕ್ರಮದಿಂದ ನೀಟ್ ಪರೀಕ್ಷೆಯಲ್ಲಿ 18 ರಿಂದ 20 ಅಂಕ ಪಡೆದುಕೊಂಡ ವಿದ್ಯಾರ್ಥಿಗಳು ಸಹ ವೈದ್ಯಕೀಯ ಸೀಟುಗಳನ್ನು ಪಡೆದುಕೊಳ್ಳುವ ಅವಕಾಶ ಲಭ್ಯವಾಯಿತು.

ಏನಿದು ಪರ್ಸೇಂಟೈಲ್ ನಿಯಮ

2015 ರಲ್ಲಿ ಆರಂಭವಾದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ ಗರಿಷ್ಠ ಅಂಕ 720 ಅಂಕಗಳಿಗೆ ಪರೀಕ್ಷೆ ಎದುರಿಸಿದ ಸಾಮಾನ್ಯ ಅಭ್ಯರ್ಥಿಗಳು ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ಅರ್ಹತೆ ಪಡೆಯಲು ಶೇ. 50 ಅಂಕ ಹಾಗೂ ಮೀಸಲು ಅಭ್ಯರ್ಥಿಗಳು ಶೇ.40 ಅಂಕಗಳನ್ನು ಪಡೆದುಕೊಳ್ಳಬೇಕಾಯಿತು. ಆದರೆ 2016 ರಲ್ಲಿ ಈ ವ್ಯವಸ್ಥೆಯನ್ನು ಪರ್ಸೇಂಟೈಲ್ ಗೆ ಬದಲಾಯಿಸಲಾಯಿತು. ಪರ್ಸೇಂಟೈಲ್ ನಿಯಮದ ಅನ್ವಯ ನೀಟ್ ನ ಗರಿಷ್ಠ ಅಂಕ 720 ಅಂಕಗಳಿಗೆ 145 ಅಂಕಗಳನ್ನು ಪಡೆದರೆ ಸಾಕು ಎನ್ನುವ ನಿಯಮ ರೂಪಿಸಲಾಯಿತು. ಅಂದರೆ ಶೇ.20 ರಷ್ಟು ಅಂಕ ಪಡೆದವರೂ ಸಹ ವೈದ್ಯಕೀಯ ಪ್ರವೇಶಕ್ಕೆ ಅರ್ಹತೆಯನ್ನು ಗಳಿಸಿಕೊಂಡತಾಯಿತು.

ಈ ನಿಯಮದ ಅನ್ವಯ ಸಾಮಾನ್ಯ ವರ್ಗಕ್ಕೆ ಶೇ.18.2 ಪರಿಶಿಷ್ಟರಲ್ಲಿ ಶೇ.14.9 ಮತ್ತು ಅಂಗವಿಕಲರಲ್ಲಿ ಶೇ.16.4 ಅಂಕ ಪಡೆದವರೂ ಸಹ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದಿದ್ದಾರೆ. ಪ್ರಸಕ್ತ ಸಾಲಿನ ಮೇ ತಿಂಗಳಿನಲ್ಲಿ ನಡೆಯುವ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಇದೇ ನಿಯಮದಡಿ ಸೀಟು ಹಂಚಿಕೆ ಮಾಡಲಾಗುವುದು. ಇದರಿಂದ ನೀಟ್‌ನ ಗರಿಷ್ಠ ಅಂಕಗಳಿಗೆ ಶೇ.20 ರಷ್ಟು ಅಂಕಪಡೆದರೂ ಸಹ ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ಅರ್ಹತೆ ಪಡೆಯಬಹುದು.

ಪರ್ಸೇಂಟೈಲ್ ಎನ್ನುವುದು ಅಭ್ಯರ್ಥಿಗಳ ಅಂಕಗಳನ್ನು ಹೊರತುಪಡಿಸಿ ಅರ್ಹತೆ ಪಡೆದ ಒಟ್ಟು ಅಭ್ಯರ್ಥಿಗಳ ಪ್ರಮಾಣವನ್ನು ಪರಿಗಣಿಸಿ ನಿಗದಿಪಡಿಸಲಾಗುತ್ತದೆ.

ಉದಾಹರಣೆಗೆ 50 ಪರ್ಸೇಂಟೈಲ್ ಎಂದರೆ ಅಧಿಕ ಅಂಕ ಪಡೆದ ಅರ್ಧದಷ್ಟು ಅಭ್ಯರ್ಥಿಗಳು 90 ಪರ್ಸೇಂಟೈಲ್ ಎಂದರೆ ಒಟ್ಟು ಅಭ್ಯರ್ಥಿಗಳಲ್ಲಿ ಅಧಿಕ ಅಂಕ ಪಡೆದ ಶೇ. 90 ರಷ್ಟು ಅಭ್ಯರ್ಥಿಗಳು ಎನ್ನುವ ಅರ್ಥವನ್ನು ನೀಡುತ್ತದೆ.

ಈ ಕ್ರಮದಿಂದಾಗಿ ಕಡಿಮೆ ಅಂಕಪಡೆದಿರುವ ವಿದ್ಯಾರ್ಥಿಗಳು ಸಹ ವೈದ್ಯಕೀಯ ಪ್ರವೇಶವನ್ನು ಪಡೆದುಕೊಂಡಿದ್ದಾರೆ. ಇದರಿಂದ ಹಣವುಳ್ಳ ವಿದ್ಯಾರ್ಥಿಗಳು ಸೀಟುಗಳನ್ನು ಖರೀದಿಸಲು ಅವಕಾಶ ನೀಡಿದಂತಾಗಿದೆ. ಕಳೆದ ಬಾರಿ ನೀಟ್ ಪರೀಕ್ಷೆ ಬರೆದ 10.9 ಲಕ್ಷ ಅಭ್ಯರ್ಥಿಗಳ ಪೈಕಿ 6.1 ಲಕ್ಷ ಅಭ್ಯರ್ಥಿಗಳು ವೈದ್ಯಕೀಯ ಸೀಟು ಪಡೆದುಕೊಳ್ಳಬಹುದಾದ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ಅವುಗಳಲ್ಲಿ ಸಾಮಾನ್ಯ ಕೇಟಗರಿಯಿಂದ 5.4 ಲಕ್ಷ ಅಭ್ಯರ್ಥಿಗಳು ಅರ್ಹತೆ ಪಡೆದುಕೊಂಡಿದ್ದಾರೆ.

ದೇಶಾದಾದ್ಯಂತ ಲಭ್ಯವಿರುವ 60 ಸಾವಿರ ವೈದ್ಯಕೀಯ ಶಿಕ್ಷಣ ಸೀಟುಗಳನ್ನು ಪಡೆದುಕೊಳ್ಳಲು ಲಕ್ಷಾಂತರ ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ. ಅಂದರೆ ಪ್ರತಿ 1 ವೈದ್ಯಕೀಯ ಸೀಟುಗಳನ್ನು ಪಡೆದುಕೊಳ್ಳಲು ಸರಾಸರಿ 10 ವಿದ್ಯಾರ್ಥಿಗಳು ಅರ್ಹತೆ ಪಡೆದುಕೊಂಡಿದ್ದಾರೆ. ಕಡಿಮೆ ಅಂಕ ಪಡೆದಿರುವ ವಿದ್ಯಾರ್ಥಿಗಳು ಸೀಟುಗಳನ್ನು ಪಡೆದುಕೊಂಡಿದ್ದರೆ, ಮತ್ತೆ ಕೆಲ ಹೆಚ್ಚು ಅಂಕ ಪಡೆದಿರುವ ಬಡ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಶುಲ್ಕ ಭರಿಸಲು ಸಾಧ್ಯವಿಲ್ಲವೆಂದು ಪ್ರವೇಶವನ್ನು ನಿರಾಕರಿಸಿದ್ದಾರೆ.

ಕೃಪೆ: ಸಂಜೆವಾಣಿ

Leave a Reply

Your email address will not be published. Required fields are marked *

error: Content is protected !!