janadhvani

Kannada Online News Paper

ಉದ್ಘಾಟನೆಗೊಂಡ ಮೂರೇ ದಿನದಲ್ಲಿ ಮಲ್ಪೆ ತೂಗು ಸೇತುವೆ ಛಿದ್ರ

ರಾಜ್ಯದ ಮೊದಲ ತೇಲುವ ಸೇತುವೆ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದ ಈ ಬ್ರಿಡ್ಜ್‌ನ್ನು ನೋಡಲು ವೀಕೆಂಡ್‌ ಆಗಿದ್ದರಿಂದ ಶನಿವಾರ ಮತ್ತು ಭಾನುವಾರ ಸಾವಿರಾರು ಮಂದಿ ಪ್ರವಾಸಿಗರು ಬಂದಿದ್ದರು.

ಉಡುಪಿ,ಮೇ.9: ರಾಜ್ಯ ಮಾತ್ರವಲ್ಲದೇ ರಾಷ್ಟ್ರಾದ್ಯಂತ ಭಾರೀ ಸುದ್ದಿಯಾಗಿದ್ದ ಉಡುಪಿಯ ಸಮುದ್ರದಲ್ಲಿ ಅಳವಡಿಸಲಾಗಿದ್ದ ತೇಲುವ ಸೇತುವೆ ಉದ್ಘಾಟನೆಯಾದ ಮೂರೇ ದಿನಕ್ಕೆ ಕುಸಿದು ಬಿದ್ದಿದೆ.

ಉಡುಪಿಯ ಮಲ್ಪೆ ಬೀಚ್‌ನಲ್ಲಿ ಕಳೆದ ಶುಕ್ರವಾರ (ಮೇ 6) ಉಡುಪಿ ಶಾಸಕ ಕೆ.ರಘುಪತಿ ಭಟ್ ಮತ್ತು ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ಅವರ ಸಮ್ಮುಖದಲ್ಲಿ ಉದ್ಘಾಟನೆಗೊಂಡಿತ್ತು. ಆದರೆ ಇದೀಗ ಉದ್ಘಾಟನೆಗೊಂಡ ಕೇವಲ ಮೂರೇ ದಿನದಲ್ಲಿ ಅತ್ಯಂತ ಜನಾಕರ್ಷಣೆ ಹೊಂದಿದ್ದ ಈ ಸೇತುವೆ ಛಿದ್ರ ಛಿದ್ರವಾಗಿದೆ. ಭಾನುವಾರ ರಾತ್ರಿ ಕಡಲ ಅಬ್ಬರ ಹೆಚ್ಚಾಗಿದ್ದರಿಂದ ಅಲೆಯ ಆರ್ಭಟಕ್ಕೆ ಸಿಲುಕಿ ಸೇತುವೆ ಮುರಿದು ಬಿದ್ದಿದೆ.

ರಾಜ್ಯದ ಮೊದಲ ತೇಲುವ ಸೇತುವೆ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದ ಈ ಬ್ರಿಡ್ಜ್‌ನ್ನು ನೋಡಲು ವೀಕೆಂಡ್‌ ಆಗಿದ್ದರಿಂದ ಶನಿವಾರ ಮತ್ತು ಭಾನುವಾರ ಸಾವಿರಾರು ಮಂದಿ ಪ್ರವಾಸಿಗರು ಬಂದಿದ್ದರು. ಜಿಲ್ಲೆ ಮಾತ್ರವಲ್ಲದೆ ಹೊರಜಿಲ್ಲೆಗಳಿಂದಲೇ ಅಧಿಕ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡಿದ್ದರು. ನಿನ್ನೆ ಭಾನುವಾರ ಒಂದೇ ದಿನ ಮಲ್ಪೆ ಬೀಚ್‌ಗೆ 30 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದರು ಎಂದು ಹೇಳಲಾಗಿದೆ.

3.5 ಮೀಟರ್ ಅಗಲ ಮತ್ತು 100 ಮೀಟರ್ ಉದ್ದದ ಈ ತೇಲುವ ಸೇತುವೆಯನ್ನು ಸ್ಥಳೀಯ ಮೂವರು ಉದ್ಯಮಿಗಳು ಸುಮಾರು 80 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದರು. ಆಗಮಿಸುವ ಪ್ರವಾಸಿಗರಿಗೆ ಲೈಫ್ ಜಾಕೆಟ್, ಲೈಫ್ ಗಾರ್ಡ್‌ಗಳು ಸೇರಿದಂತೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿ ಪ್ರವಾಸಿಗರನ್ನು ಬಿಡಲಾಗಿತ್ತು.

ಸೇತುವೆ ಮುರಿಯಲು ‘ಅಸನಿ ಚಂಡಮಾರುತ’ ಕಾರಣ
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಅಸನಿ ಸೈಕ್ಲೋನ್ ಉಂಟಾದ ಹಿನ್ನೆಲೆ ನಿನ್ನೆ ಮಧ್ಯಾಹ್ನದಿಂದಲೇ ಕಡಲು ಪ್ರಕ್ಷುಬ್ದಗೊಂಡಿತ್ತು. ಬೃಹತ್ ಗಾತ್ರದ ಅಲೆಗಳು ಬಂದು ಅಪಾಯದ ಮುನ್ಸೂಚನೆ ಸಿಕ್ಕಿದ್ದವು. ಈ ಹಿನ್ನೆಲೆ ಭಾನುವಾರ (ನಿನ್ನೆ) ಸಂಜೆ ನಾಲ್ಕು ಗಂಟೆಯಿಂದಲೇ ವಾಟರ್ ಸ್ಪೋರ್ಟ್ಸ್ ಮತ್ತು ತೇಲುವ ಸೇತುವೆ ಪ್ರವೇಶವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ರಾತ್ರಿ ವೇಳೆಗೆ ಕಡಲು ಇನ್ನಷ್ಟು ಪ್ರಕ್ಷುಬ್ದಗೊಂಡು ರಕ್ಕಸ ಗಾತ್ರದ ಅಲೆಗಳು ಕಡಲತೀರಕ್ಕೆ ಅಪ್ಪಳಿಸಿದ ಪರಿಣಾಮ ತೇಲುವ ಸೇತುವೆಯು ಛಿದ್ರಗೊಂಡು ಅದರ ಬಿಡಿ ಭಾಗಗಳು ಸಮುದ್ರ ಪಾಲಾಗಿವೆ. ಮತ್ತೊಂದೆಡೆ ಸೇತುವೆಯನ್ನು ಮರುಜೋಡಿಸುವ ಪ್ರಕ್ರಿಯೆ ನಡೆಯುತ್ತಿದೆ.

ಅದೇನೇ ಇರಲಿ, ಭಾರೀ ಸದ್ದು ಮಾಡಿದ್ದ ರಾಜ್ಯದ ಮೊದಲ ತೇಲುವ ಸೇತುವೆ ಉದ್ಘಾಟನೆಗೊಂಡ ಕೇವಲ ಎರಡೇ ದಿನಕ್ಕೆ ಕುಸಿತ ಕಂಡಿರೋದು ನಿಜಕ್ಕೂ ವಿಪರ್ಯಾಸ ಮಾತ್ರವಲ್ಲದೇ, ಏನಾದ್ರು ಆಗಲಿ ಒಂದು ಸಲ ನಾವೂ ಸೇತುವೆಯ ಮೇಲೆ ಓಡಾಡಬೇಕು ಎಂದು ಕನಸು ಕಂಡಿದ್ದ ಪ್ರವಾಸಿಗರಿಗೆ ನಿರಾಸ ಉಂಟುಮಾಡಿದೆ.

error: Content is protected !! Not allowed copy content from janadhvani.com