ತ್ರಿವಳಿ ತಲಾಖ್‌ ನಿಷೇಧ ಕಾಯ್ದೆಗೆ ಅಂಗೀಕಾರ: ಕಾಂಗ್ರೆಸ್ ಬೆಂಬಲ, ಉವೈಸಿ ತೀವ್ರ ವಿರೋಧ

ನವದೆಹಲಿ(ಜನಧ್ವನಿ):ಮುಸ್ಲಿಮರ ಧಾರ್ಮಿಕ ಹಕ್ಕನ್ನು ಕಸಿದು ಕೊಳ್ಳುವ‘ಮುಸ್ಲಿಂ ಮಹಿಳೆಯರ ವೈವಾಹಿಕ ಹಕ್ಕುಗಳ ರಕ್ಷಣಾ ಮಸೂದೆ– 2017’ತ್ರಿವಳಿ ತಲಾಖ್‌ ನಿಷೇಧಿಸುವ ಕಾಯ್ದೆಯನ್ನು ಲೋಕಸಭೆಯಲ್ಲಿ ಗುರುವಾರ ಸಂಜೆ ಅಂಗೀಕರಿಸಲಾಯಿತು.

ತ್ರಿವಳಿ ತಲಾಖ್‌ ನೀಡಲು ಮುಂದಾದವರನ್ನು ಅಪರಾಧಿಗಳು ಎಂದು ಪರಿಗಣಿಸಿ, ಮೂರು ವರ್ಷಗಳ ಅವಧಿಯ ಜೈಲು ಶಿಕ್ಷೆ ವಿಧಿಸಲು ಅವಕಾಶ ಇರುವ ಈ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ವಿರೋಧ ಪಕ್ಷಗಳ ಕೆಲವು ಸದಸ್ಯರು, ಈ ಮಸೂದೆಯಲ್ಲಿ ದೋಷಯುಕ್ತ ಅಂಶಗಳು ಸೇರಿವೆ ಎಂದು ವಾದಿಸಿದರು.

ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್‌, ಮಸೂದೆಯನ್ನು ಬೆಂಬಲಿಸಿತಾದರೂ ನಿಯಂತ್ರಣರಹಿತವಾದ ದೋಷಯುಕ್ತ ಅಂಶಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ತಿದ್ದುಪಡಿಗೆ ಸೂಚಿಸಿತು.ಸಂಜೆ 4ರಿಂದ ಸತತ ಮೂರೂವರೆ ಗಂಟೆಗಳ ಕಾಲ ನಡೆದ ಚರ್ಚೆಯ ಬಳಿಕ ಯಾವುದೇ ತಿದ್ದುಪಡಿಗಳನ್ನು ಮಾಡದೆ ಮಸೂದೆಗೆ ಮತದಾನದ ಮೂಲಕ ಅನುಮೋದನೆ ನೀಡಲಾಯಿತು.

ಮಧ್ಯಾಹ್ನ ಮಸೂದೆ ಮಂಡಿಸಿದ ಕೇಂದ್ರದ ಕಾನೂನು ಸಚಿವ ರವಿಶಂಕರ ಪ್ರಸಾದ್‌, ‘ಇದೊಂದು ಐತಿಹಾಸಿಕ ದಿನ’ ಎಂದು ಬಣ್ಣಿಸಿದರು.ಆರ್‌ಜೆಡಿ, ಎಐಎಂಐಎಂ, ಆಲ್‌ ಇಂಡಿಯಾ ಮುಸ್ಲಿಂ ಲೀಗ್‌, ಬಿಜು ಜನತಾದಳ (ಬಿಜೆಡಿ) ಹಾಗೂ ಎಐಎಡಿಎಂಕೆ ಸದಸ್ಯರು ಮಸೂದೆಗೆ ವಿರೋಧ ವ್ಯಕ್ತಪಡಿಸಿದರು.

ಮಸೂದೆ ಕುರಿತ ನಿರ್ಧಾರವನ್ನು ಸ್ಥಾಯಿ ಸಮಿತಿಗೆ ವಹಿಸುವಂತೆ ಕಾಂಗ್ರೆಸ್‌ ಹಾಗೂ ಎಡ ಪಕ್ಷಗಳ ಸದಸ್ಯರು ಕೋರಿದರಲ್ಲದೆ, ಚರ್ಚೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕೋರಿದರು.ಈ ಬೇಡಿಕೆಯನ್ನು ತಳ್ಳಿಹಾಕಿದ ಸ್ಪೀಕರ್‌ ಸುಮಿತ್ರಾ ಮಹಾಜನ್‌, ನಿಯಮಾನುಸಾರ ಮುಂಚಿತವಾಗಿ ಸೂಚಿಸಿರುವವರಿಗೆ ಮಾತ್ರ ವಿಷಯದ ಕುರಿತು ಮಾತನಾಡಲು ಅವಕಾಶ ನೀಡಲಾಗುವುದು ಎಂದರು.

ಪ್ರಸ್ತಾವಿತ ಮಸೂದೆಯನ್ನು ವಿರೋಧಿಸಿದ ಬಿಜೆಡಿಯ ಭರ್ತೃಹರಿ ಮೆಹತಾಬ್‌, ಕಳೆದ ಆಗಸ್ಟ್‌ 22ರಂದು ಸುಪ್ರೀಂ ಕೋರ್ಟ್‌ ನೀಡಿರುವ ಆದೇಶವನ್ನು ತಪ್ಪಾಗಿ ಗ್ರಹಿಸಿರುವುದರಿಂದ ಮಸೂದೆಯಲ್ಲಿ ಕೆಲವು ವ್ಯತಿರಿಕ್ತ ಅಂಶಗಳು ಅಡಕವಾಗಿವೆ ಎಂದು ಹೇಳಿದರು.

‘ಮೌಖಿಕವಾಗಿ ತಲಾಖ್‌ ನೀಡುವುದು -ಜಾಮೀನುರಹಿತ ಅಪರಾಧ ಹೇಗಾಗಲಿದೆ’ ಎಂದು ಪ್ರಶ್ನಿಸಿದ ಅವರು, ವಿರೋಧಾಭಾಸಗಳಿಂದ ಕೂಡಿರುವ ಈ ಮಸೂದೆಯಿಂದ ವಾಸ್ತವವಾಗಿ ಮುಸ್ಲಿಂ ಮಹಿಳೆಯರಿಗೆ ಅನ್ಯಾಯ ಆಗಲಿದೆ. ಕೂಡಲೇ ಕೆಲವು ಅಂಶಗಳನ್ನು ಬದಲಿಸಬೇಕು ಎಂದು ಮನವಿ ಮಾಡಿದರು.

ಅಸದುದ್ದಿನ್‌ ಉವೈಸಿ ತೀವ್ರ ವಿರೋಧ: ‘ಈ ಮಸೂದೆ ಜಾರಿಯಾದಲ್ಲಿ ಮುಸ್ಲಿಂ ಮಹಿಳೆಯರಿಗೆ ತೀವ್ರ ಅನ್ಯಾಯವಾಗಲಿದೆ’ ಎಂದು ಅಭಿಪ್ರಾಯಪಟ್ಟ ಎಐಎಂಐಎಂ ಸದಸ್ಯ ಅಸಾದುದ್ದಿನ್‌ ಓವೈಸಿ, ‘ತಲಾಖ್‌ ನೀಡುವ ವ್ಯಕ್ತಿಯನ್ನು ಮೂರು ವರ್ಷಗಳ ಕಾಲ ಜೈಲಿಗೆ ಕಳುಹಿಸಿದರೆ, ಸಂತ್ರಸ್ತ ಮಹಿಳೆಗೆ ಪರಿಹಾರ ದೊರಕುವುದಾದರೂ ಹೇಗೆ’ ಎಂದು ಪ್ರಶ್ನಿಸಿದರು.

ತಲಾಖ್‌ ನೀಡುವ ಪ್ರಕ್ರಿಯೆಯನ್ನು ಅಪರಾಧ ಎಂದು ಪರಿಗಣಿಸುವ ಅಂಶವನ್ನು ಪ್ರಸ್ತಾಪಿಸಿರುವುದು ಸರಿಯಾದುದಲ್ಲ ಎಂದ ಅವರು, ಕುರಿತು ಈ ಮಸೂದೆಯ ಮೂಲಕ ತಾರತಮ್ಯ ಎದ್ದುಕಾಣುತ್ತಿದೆ ಎಂದು ದೂರಿದರು.

Leave a Reply

Your email address will not be published. Required fields are marked *

error: Content is protected !!