janadhvani

Kannada Online News Paper

ದಲಿತ ಮುಖಂಡ ಜಿಗ್ನೇಶ್ ಮೆವಾನಿ ಅವರನ್ನು ಬಂದಿಸಿದ ಅಸ್ಸಾಂ ಪೊಲೀಸ್- ಗೋಡ್ಸೆ ಬಗ್ಗೆ ಟ್ವೀಟ್ ಕಾರಣ ?

ಕೆಲವು ದಿನಗಳ ಹಿಂದೆ ಮೇವಾನಿ ಅವರು ನಾಥುರಾಮ್ ಗೋಡ್ಸೆ ಬಗ್ಗೆ ಮಾಡಿದ ಟ್ವೀಟ್ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಆದರೆ, ಟ್ವೀಟ್ ಅನ್ನು ಟ್ವಿಟರ್ ತಡೆಹಿಡಿದಿದೆ.

ಅಹಮದಾಬಾದ್: ಗುಜರಾತ್‌ ಶಾಸಕ, ದಲಿತ ಮುಖಂಡ ಜಿಗ್ನೇಶ್ ಮೇವಾನಿ ಅವರನ್ನು ಗುಜರಾತ್‌ನ ಪಾಲಂಪುರ್‌ನಲ್ಲಿನ ಸರ್ಕೀಟ್ ಹೌಸ್‌ನಲ್ಲಿ ಬುಧವಾರ ರಾತ್ರಿ ಅಸ್ಸಾಂ  ಪೊಲೀಸರು ಬಂಧಿಸಿದ್ದಾರೆ. ಅವರನ್ನು ರಾತ್ರಿ ಅಹಮದಾಬಾದ್‌ಗೆ ಕರೆದೊಯ್ಯಲಾಗಿದ್ದು, ಗುರುವಾರ ಅಸ್ಸಾಂಗೆ ಕರೆತರಲಾಗುತ್ತದೆ. ದಲಿತ ಮುಖಂಡರಾಗಿ ಗುರುತಿಸಿಕೊಂಡಿರುವ, ರಾಷ್ಟ್ರೀಯ ದಲಿತ ಅಧಿಕಾರ್ ಮೋರ್ಚಾ ರಾಜಕೀಯ ಪಕ್ಷದ ಸಂಚಾಲಕರೂ ಆಗಿರುವ ಜಿಗ್ನೇಶ್ ಮೇವಾನಿ  ಅವರ ಬಂಧನದ ಹಿಂದಿನ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಅಧಿಕಾರಿಗಳ ಮನವಿ ಮೇರೆಗೆ ಟ್ವಿಟ್ಟರ್ ಸಂಸ್ಥೆಯು ಅವರು ಮಾಡಿದ್ದ ಇತ್ತೀಚಿನ ಕೆಲವು ಟ್ವೀಟ್‌ಗಳನ್ನು ತಡೆಹಿಡಿದಿತ್ತು.

“ಅಸ್ಸಾಂ ಪೊಲೀಸ್ ಅಧಿಕಾರಿಗಳು ಹಂಚಿಕೊಂಡ ದಾಖಲೆಯ ಪ್ರಕಾರ, ಕೆಲವು ದಿನಗಳ ಹಿಂದೆ ಮೇವಾನಿ ಅವರು ನಾಥುರಾಮ್ ಗೋಡ್ಸೆ ಬಗ್ಗೆ ಮಾಡಿದ ಟ್ವೀಟ್ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಆದರೆ, ಟ್ವೀಟ್ ಅನ್ನು ಟ್ವಿಟರ್ ತಡೆಹಿಡಿದಿದೆ. ಮೇವಾನಿ ಅವರನ್ನು ಮೊದಲು ರಸ್ತೆಯ ಮೂಲಕ ಅಹಮದಾಬಾದ್‌ಗೆ ಕರೆತರಲಾಯಿತು. ನಂತರ ಇಂದು ಮುಂಜಾನೆ ವಿಮಾನದ ಮೂಲಕ ಅಸ್ಸಾಂಗೆ ಕರೆದೊಯ್ಯಲಾಯಿತು” ಎಂದು ಮೇವಾನಿ ಅವರ ಆಪ್ತ ಸುರೇಶ್ ಜಾಟ್ ಅವರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಬಂಧನದ ವಿಚಾರ ತಿಳಿಯುತ್ತಿದ್ದಂತೆ ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್ ಠಾಕೂರ್ ಮತ್ತು ಇತರ ಕಾಂಗ್ರೆಸ್ ನಾಯಕರು ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಧಾವಿಸಿ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಗುಜರಾತ್‌ನ ವಡ್ಗಾಮ್‌ನ ಶಾಸಕರಾಗಿರುವ ಜಿಗ್ನೇಶ್‌ ಮೇವಾನಿ ದಲಿತ ಹಕ್ಕುಗಳ ಹೋರಾಟಗಾರ ಮತ್ತು ರಾಷ್ಟ್ರೀಯ ದಲಿತ ಅಧಿಕಾರ ಮಂಚ್‌ನ ಸಂಚಾಲಕರೂ ಆಗಿದ್ದಾರೆ. ಅವರು ಕಳೆದ ವರ್ಷ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದರು.

ತಮಗೆ ಎಫ್‌ಐಆರ್ ಪ್ರತಿ ಅಥವಾ ಪೊಲೀಸ್ ಪ್ರಕರಣದ ಪ್ರತಿ ಇದುವರೆಗೂ ದೊರಕಿಲ್ಲ ಎಂದು ಮೇವಾನಿ ಅವರ ಸಹವರ್ತಿಗಳು ತಿಳಿಸಿದ್ದಾರೆ. ಅವರನ್ನು ಗುವಾಹಟಿಗೆ ಕರೆದೊಯ್ದ ಬಳಿಕ ಎಫ್‌ಐಆರ್ ಪ್ರತಿ ಲಭ್ಯವಾಗುವ ನಿರೀಕ್ಷೆ ಇದ್ದು, ಅವರ ಬಂಧನಕ್ಕೆ ಸ್ಪಷ್ಟ ಕಾರಣ ತಿಳಿಯಲಿದೆ. ಅವರ ವಿರುದ್ಧ ಅಸ್ಸಾಂನಲ್ಲಿ ಕೆಲವು ಪ್ರಕರಣಗಳು ದಾಖಲಾಗಿವೆ ಎಂದು ವರದಿಯಾಗಿದೆ. ಗುಜರಾತ್ ಮತ್ತು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ವಿರುದ್ಧ ಮೇವಾನಿ ಅವರು ನಿರಂತರ ವಾಗ್ದಾಳಿಗಳನ್ನು ನಡೆಸುತ್ತಿದ್ದರು. ಅಸ್ಸಾಂನ ಕೊಕ್ರಾಜಾರ್ ಜಿಲ್ಲೆಯ ಪೊಲೀಸರ ತಂಡವೊಂದು ರಾತ್ರಿ 11.30ರ ವೇಳೆಗೆ ಸರ್ಕೀಟ್ ಹೌಸ್‌ನಿಂದ ಬಂಧಿಸಲಾಗಿದೆ. 

ಗುಜರತ್‍ನಲ್ಲಿ ಬಿಜೆಪಿಗೆ ಸವಾಲು ಒಡ್ಡಿರುವ ಮೂವರು ಯುವ ಮುಖಂಡರಲ್ಲಿ ಜಿಗ್ನೇಶ್ ಒಬ್ಬರಾಗಿದ್ದು, ಸಂತ್ರಸ್ತ ದಲಿತ ಜನತೆಯ ಮುಖ ಎಂದೇ ಪ್ರಸಿದ್ಧರಾಗಿದ್ದಾರೆ. ಹಸುವಿನ ಚರ್ಮ ಸುಲಿದ ದಲಿತ ಕುಟುಂಬದ ಮೇಲೆ ಉನಾ ತಾಲೂಕಿನಲ್ಲಿ ನಡೆದ ಹಲ್ಲೆ ಪ್ರಕರಣವನ್ನು ಖಂಡಿಸಿ ಮೆವಾನಿ ನೀಡಿದ್ದ ಕರೆಗೆ ಲಕ್ಷಾಂತರ ದಲಿತರು ಸೇರಿದ್ದರು.

ದಲಿತ ಕುಟುಂಬದಲ್ಲಿ ಜನಿಸಿದ ಮೆವಾನಿ ಮುಂಬೈನಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದರು. ಇವರ ಉನಾ ರ‍್ಯಾಲಿ ರಾಷ್ಟ್ರದ ಗಮನ ಸೆಳದಿತ್ತು. 2017ರ ಚುನಾವಣೆಯಲ್ಲಿ, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮೆವಾನಿ ಅವರನ್ನು ಕಾಂಗ್ರೆಸ್ ಬೆಂಬಲಿಸಿತ್ತು. ಈ ಚುನಾವಣೆಯಲ್ಲಿ 84785 ಮತಗಳನ್ನು ಪಡೆದು ಅವರು ಜಯಶಾಲಿಯಾಗಿದ್ದರು.

ಬಾಲಿವುಡ್ ತಾರೆ ಸ್ವರ ಭಾಸ್ಕರ್, ಈ ಬಂಧನವನ್ನು ಖಂಡಿಸಿದ್ದು, ಎಫ್‍ಐಆರ್ ಪ್ರತಿಯನ್ನೂ ನೀಡದೇ ಬಂಧಿಸಲಾಗಿದೆ. ಅವರ ಫೋನ್ ನಿಷ್ಕ್ರಿಯಗೊಳಿಸಲಾಗಿದೆ. ಏನು ನಡೆಯುತ್ತಿದೆ ಎಂದು ಟ್ವಿಟ್ಟರ್‍ನಲ್ಲಿ ಪ್ರಶ್ನಿಸಿದ್ದಾರೆ.

error: Content is protected !! Not allowed copy content from janadhvani.com