janadhvani

Kannada Online News Paper

ಜನಾದೇಶವಿಲ್ಲದೆ ಬಿಜೆಪಿಗೆ ಗೆಲುವು: ಇದು ಇವಿಎಂ ದುರ್ಬಳಕೆ- ಸಂಘಟಿತ ಹೋರಾಟಕ್ಕೆ ಕಾಂಗ್ರೆಸ್‌ಗೆ ದೀದಿ ಆಹ್ವಾನ 

ಚುನಾವಣಾ ವ್ಯವಸ್ಥೆ ಮತ್ತು ಕೇಂದ್ರ ಪಡೆಗಳು ಹಾಗೂ ಸಂಸ್ಥೆಗಳನ್ನು ಬಳಸಿಕೊಂಡು ಬಿಜೆಪಿ ಚುನಾವಣೆಯಲ್ಲಿ ಗೆದ್ದಿದೆ.

ಕೋಲ್ಕತಾ: ವಿಧಾನಸಭೆ ಚುನಾವಣೆಗಳಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿಯ ಗೆಲುವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಜತೆಯಾಗಿ ಹೋರಾಟ ನಡೆಸುವ ವಿಚಾರದಲ್ಲಿ ಕಾಂಗ್ರೆಸ್‌ಗೆ ಆಹ್ವಾನ ನೀಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಅನ್ನು ಹೊರತುಪಡಿಸಿ ಉಳಿದ ಪಕ್ಷಗಳ ಜತೆಗೂಡಿ ಮೈತ್ರಿಕೂಟ ರಚಿಸುವ ಉದ್ದೇಶವನ್ನು ಕೈಬಿಡುವ ಸೂಚನೆ ನೀಡಿದ್ದಾರೆ.

ಐದು ರಾಜ್ಯಗಳಲ್ಲಿಯೂ ಹೀನಾಯ ಸೋಲು ಅನುಭವಿಸಿರುವ ದೇಶದ ಅತ್ಯಂತ ಹಳೆಯ ಪಕ್ಷವಾದ ಕಾಂಗ್ರೆಸ್‌ಗೆ ಮಮತಾ ಬ್ಯಾನರ್ಜಿ ಅವರ ಆಹ್ವಾನ ಸಮಾಧಾನ ಮೂಡಿಸುವಂತೆ ಇದೆ.

“ಕಾಂಗ್ರೆಸ್ ಬಯಸಿದರೆ ನಾವೆರಲ್ಲರೂ ಜತೆಯಾಗಿ ಹೋರಾಟ ನಡೆಸಬಹುದು (2024ರ ಲೋಕಸಭೆ ಚುನಾವಣೆಯಲ್ಲಿ). ಈಗ ಆಕ್ರಮಣಕಾರಿಯಾಗಬೇಡಿ. ಸಕಾರಾತ್ಮಕವಾಗಿರಿ. ಈ ಗೆಲುವು (4 ರಾಜ್ಯಗಳ ಚುನಾವಣೆಯಲ್ಲಿ) ಬಿಜೆಪಿಗೆ ದೊಡ್ಡ ನಷ್ಟವಾಗಲಿದೆ” ಎಂದು ಮಮತಾ ಹೇಳಿದರು.

2022ರ ವಿಧಾನಸಭೆ ಚುನಾವಣೆಯ ಫಲಿತಾಂಶವು 2024ರ ಲೋಕಸಭೆ ಚುನಾವಣೆಯ ಹಣೆಬರಹ ನಿರ್ಧರಿಸಲಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಕಾರ್ಯಸಾಧುವಲ್ಲ ಎಂದು ತಿರಸ್ಕರಿಸಿದರು. ಬಿಜೆಪಿಗೆ ಜನಪ್ರಿಯ ಜನಾದೇಶ ಬಂದಿಲ್ಲ. ಅಲ್ಲಿ ಮತಗಳ ಲೂಟಿ ನಡೆದಿದೆ ಎಂದು ಅವರು ಇವಿಎಂ ದುರ್ಬಳಕೆ ಬಗ್ಗೆ ಮತ್ತೆ ಆರೋಪಿಸಿದರು.

ಈ ಸೋಲಿನಿಂದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕುಗ್ಗಬಾರದು. ಚುನಾವಣಾ ಆಯೋಗದ ಅಧಿಕಾರಿಗಳು ಕೊಂಡೊಯ್ದಿದ್ದರು ಎನ್ನಲಾದ ಇವಿಎಂ ಯಂತ್ರಗಳ ವಿಧಿ ವಿಜ್ಞಾನ ಪರೀಕ್ಷೆಗಳನ್ನು ನಡೆಸಬೇಕು. ಅಖಿಲೇಶ್ ಯಾದವ್ ಅವರ ಮತಗಳ ಶೇಕಡಾವಾರು ಪ್ರಮಾಣ ಶೇ 20 ರಿಂದ ಶೇ 37ಕ್ಕೆ ಏರಿಕೆಯಾಗಿದೆ. ಇದರ ಅರ್ಥ ಸಮಾಜವಾದಿ ಪಕ್ಷವು ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿದೆ ಎಂದರು.

“ಇವಿಎಂ ತೆರವುಗೊಳಿಸಿದ್ದಕ್ಕೆ ವಾರಾಣಸಿ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ರನ್ನು ಅಮಾನತು ಮಾಡಿದರೆ ದೊಡ್ಡ ವಿಚಾರ. ಅಖಿಲೇಶ್ ಅವರನ್ನು ಸೋಲುವಂತೆ ಮಾಡಲಾಗಿದೆ ಎಂದು ಅನಿಸುತ್ತಿದೆ. ಅಲ್ಲಿ ಲೂಟಿ ಮಾಡಲಾಗಿದೆ. ಇದರಿಂದ ಅಖಿಲೇಶ್ ಹತಾಶರಾಗಬಾರದು ಮತ್ತು ಬೇಸರಪಡಬಾರದು. ಅವರು ಜನರ ಬಳಿಗೆ ಹೋಗಬೇಕು. ಇದನ್ನು ಪ್ರಶ್ನಿಸಬೇಕು” ಎಂದು ಸಲಹೆ ನೀಡಿದರು.

“ಚುನಾವಣಾ ವ್ಯವಸ್ಥೆ ಮತ್ತು ಕೇಂದ್ರ ಪಡೆಗಳು ಹಾಗೂ ಸಂಸ್ಥೆಗಳನ್ನು ಬಳಸಿಕೊಂಡು ಬಿಜೆಪಿ ಚುನಾವಣೆಯಲ್ಲಿ ಗೆದ್ದಿದೆ. ಕೆಲವು ರಾಜ್ಯಗಳಲ್ಲಿ ಗೆದ್ದಿದ್ದಕ್ಕೇ ಅವರು ಕುಣಿದಾಡುತ್ತಿದ್ದಾರೆ. ಅವರು ನಗಾರಿ ಬಾರಿಸಬಹುದು. ಆದರೆ ಅವರಿಗೆ ಸಂಗೀತ ನುಡಿಸಲು ಬರುವುದಿಲ್ಲ. ಸಂಗೀತಕ್ಕೆ ನಿಮಗೆ ಹಾರ್ಮೋನಿಯಂ ಬೇಕು” ಎಂದು ವ್ಯಂಗ್ಯವಾಡಿದರು.

“ಬಿಜೆಪಿ ವಿರುದ್ಧ ಹೋರಾಡಲು ಜತೆಯಾಗಿ ನಡೆಯಬೇಕು ಎಂದು ಎಲ್ಲ ರಾಜಕೀಯ ಪಕ್ಷಗಳು ಬಯಸಿವೆ. ಕಾಂಗ್ರೆಸ್ ತನ್ನ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿದೆ. ಕಾಂಗ್ರೆಸ್ ಮೇಲೆ ಅವಲಂಬಿತರಾಗಲು ಸಾಧ್ಯವಿಲ್ಲ. 2024ರಲ್ಲಿ ಬಿಜೆಪಿಯನ್ನು ಕಾಂಗ್ರೆಸ್ ಸೋಲಿಸುತ್ತದೆ ಎಂದು ಲೆಕ್ಕ ಹಾಕುವುದರಲ್ಲಿ ಅರ್ಥವಿಲ್ಲ” ಎಂದು ಇದೇ ವೇಳೆ ಅವರು ಕೈ ಪಕ್ಷವನ್ನು ತಿವಿದರು.

“ಕಾಂಗ್ರೆಸ್ ಈ ಮೊದಲು ಇಡೀ ದೇಶವನ್ನು ತನ್ನ ಸಂಘಟನೆ ಮೂಲಕ ಹಿಡಿದಿಟ್ಟುಕೊಳ್ಳುತ್ತಿತ್ತು. ಆದರೆ ಅವರಿಗೆ ಈಗ ಉತ್ಸಾಹ ಉಳಿದಿಲ್ಲ. ಅವರು ತಮ್ಮ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿದ್ದಾರೆ. ಈಗ ಅನೇಕ ಪ್ರಾದೇಶಿಕ ಪಕ್ಷಗಳಿವೆ. ಎಲ್ಲರೂ ಜತೆಗೂಡಿ ಕೆಲಸ ಮಾಡಬೇಕು. ಇದರ ಮೇಲೆ ಖಂಡಿತಾ ನಿರ್ಧಾರ ತೆಗೆದುಕೊಳ್ಳಬಹುದು” ಎಂದರು. ಗೋವಾದಲ್ಲಿ ಪಕ್ಷ ಸ್ಥಾಪನೆ ಮಾಡಿದ ಮೂರು ತಿಂಗಳಲ್ಲಿಯೇ ಟಿಎಂಸಿ ಶೇ 6ರಷ್ಟು ಮತಗಳನ್ನು ಪಡೆದುಕೊಂಡಿದೆ. ಇಷ್ಟು ಸಾಕು ಎಂದು ಹೇಳಿದರು.

error: Content is protected !! Not allowed copy content from janadhvani.com