janadhvani

Kannada Online News Paper

ಉಡುಪಿ ಸ್ಕಾರ್ಫ್ ವಿವಾದ- ಸುನ್ನೀ ಸಂಘಟನೆಗಳ ಒಕ್ಕೂಟದಿಂದ ಶಾಸಕರ ಭೇಟಿ

ಉಡುಪಿ,ಜ.26: ಉಡುಪಿ ಸರಕಾರಿ ಪಿಯು ಬಾಲಕಿಯರ ಕಾಲೇಜಿನಲ್ಲಿ ಸುಮಾರು ಒಂದು ತಿಂಗಳಿನಿಂದ ಮುಸ್ಲಿಂ ವಿದ್ಯಾರ್ಥಿನಿಗಳಿಗೆ ತರಗತಿ ಪ್ರವೇಶವನ್ನು ನಿರ್ಬಂಧಿಸಲ್ಪಟ್ಟ ಸ್ಕಾರ್ಫ್ ವಿವಾದಕ್ಕೆ ಸಂಬಂಧಿಸಿದಂತೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವಂತೆ ಸುನ್ನೀ ಸಂಘಟನೆಗಳ ಒಕ್ಕೂಟವು ಶಾಸಕರನ್ನು ಭೇಟಿಮಾಡಿದೆ.

ಸ್ಕಾರ್ಫ್ ವಿವಾದವನ್ನು ಆಯಾಯ ಧರ್ಮದ ಸಂಸ್ಕೃತಿಗಳಿಗೆ ಚ್ಯುತಿ ಬಾರದಂತೆ ಆದಷ್ಟು ಶೀಘ್ರದಲ್ಲಿ ಶಾಂತಿಯುತವಾದ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ವಿದ್ಯಾರ್ಥಿನಿಯರ ವಿದ್ಯಾಭ್ಯಾಸಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ
ಶಾಶ್ವತ ಪರಿಹಾರ ಮಾಡಬೇಕು. ಈ ಸಮಸ್ಯೆ ಆಗಬಾರದಿತ್ತು, ಆಗಿದೆ. ಮರುಕಳಿಸದಂತೆ ನಿಗಾ ವಹಿಸಬೇಕು ಎಂದು ಉಡುಪಿ ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟವು ಸ್ಥಳೀಯ ಶಾಸಕರಾದ ಶ್ರೀ ಕೆ ರಘುಪತಿ ಭಟ್ ರವರನ್ನು ಬೇಟಿ ನೀಡಿ ವಿಚಾರ ವಿನಿಮಯ ನಡೆಸಿ, ಉಡುಪಿ ಜಿಲ್ಲಾ ಸಹಾಯಕ ಖಾಝಿ, ಸುನ್ನೀ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ಅಲ್ಹಾಜ್ ಬಿ ಕೆ ಅಬ್ದುರ್ರಹ್ಮಾನ್ ಮದನಿ ಮೂಳೂರು ರವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

ಜಿಲ್ಲಾ ಸಂಘಟನೆಗಳ ಕಾರ್ಯದರ್ಶಿ ಕೆ ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಸುನ್ನೀ ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಪಿ ಅಬೂಬಕ್ಕರ್ ನೇಜಾರು, ಕರ್ನಾಟಕ ಮುಸ್ಲಿಂ ಜಮಾಅತ್ ಜಿಲ್ಲಾಧ್ಯಕ್ಷ ಬಿ ಎಸ್ ಎಫ್ ರಫೀಕ್ ಗಂಗೊಳ್ಳಿ, ಜಿಲ್ಲಾ ವಕ್ಫ್ ಸಲಹಾ ಸಮಿತಿ ನಿಕಟ ಪೂರ್ವ ಅಧ್ಯಕ್ಷ ಹಾಜಿ ಕೆ ಪಿ ಇಬ್ರಾಹಿಂ ಮಟಪಾಡಿ, ಮದ್ರಸ ಮ್ಯಾನೇಜ್ ಮೆಂಟ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಮುಹಮ್ಮದ್ ಮನ್ಸೂರ್ ಕೋಡಿ, ಎಸ್ ಡಿ ಐ ಜಿಲ್ಲಾ ನಾಯಕ ಸುಬ್ಹಾನ್ ಅಹ್ಮದ್ ಹೊನ್ನಾಳ ಹಾಗೂ ಸಂಯುಕ್ತ ಜಮಾಅತ್ ಪ್ರಧಾನ ಕಾರ್ಯದರ್ಶಿ ಹಾಜಿ ಎಮ್ ಎ ಬಾವು ಮೂಳೂರು ನಿಯೋಗದಲ್ಲಿದ್ದರು.

error: Content is protected !! Not allowed copy content from janadhvani.com