ವಿಶ್ವದ ಶ್ರೇಷ್ಠ ಸಂವಿಧಾನವಾಗಿದೆ ಡಾ. ಅಂಬೇಡ್ಕರ್ ಅವರು ರಚಿಸಿರುವುದು-ಮುಖ್ಯಮಂತ್ರಿ

ಬೆಂಗಳೂರು, ಡಿ.31:-ವಿಶ್ವದ ಶ್ರೇಷ್ಠ ಸಂವಿಧಾನವಾಗಿದೆ ಡಾ. ಅಂಬೇಡ್ಕರ್ ಅವರು ರಚಿಸಿರುವುದು. ಇದರ ವಿರುದ್ಧ ಮಾತನಾಡುವವರು ಜನಪ್ರತಿನಿಧಿಗಳಾಗಲು, ಸಾರ್ವಜನಿಕ ಜೀವನದಲ್ಲಿ ಇರಲು ಲಾಯಕ್ಕಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಪ್ರೆಸ್‍ಕ್ಲಬ್‍ನಲ್ಲಿಂದು ನಡೆದ ಪ್ರಶಸ್ತಿ ಪ್ರದಾನ ಹಾಗೂ ಡೈರಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರು ಇಲ್ಲಿ ಜಾತಿ, ಪದ್ಧತಿ, ಆಚಾರ ವಿಚಾರಗಳನ್ನು ಅಧ್ಯಯನ ಮಾಡಿ ಸಂವಿಧಾನ ರಚನೆ ಮಾಡಿದ್ದಾರೆ. ಇದಕ್ಕಿಂತ ಉತ್ತಮಸಂವಿಧಾನ ಇರಲು ಸಾಧ್ಯವಿಲ್ಲ. ಇದನ್ನು ಯಥಾವತ್ತಾಗಿ ಅನುಸರಿಸಬೇಕು. ಇದರ ವಿರುದ್ಧ ಮಾತನಾಡುವವರು ಜನಪ್ರತಿನಿಧಿಗಳಾಗಲು ಲಾಯಕ್ಕಲ್ಲ ಎಂದು ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗಡೆ ವಿರುದ್ಧ ವಾಗ್ದಾಳಿ ನಡೆಸಿದರು.

ಯಾವುದೇ ಜನಪ್ರತಿನಿಧಿಗಳು ಪ್ರಾಮಾಣ ಸ್ವೀಕರಿಸುವುದು ಸಂವಿಧಾನ ಆಧಾರದ ಮೇಲೆ. ಸಂವಿಧಾನ ಹೊರತುಪಡಿಸಿ ವೈಯಕ್ತಿವಾಗಿ ಯಾವ ಅಜಂಡಗಳು ಇರಲು ಸಾಧ್ಯವಿಲ್ಲ. ಇರಲೂ ಬಾರದು. ಪ್ರತಿಯೊಬ್ಬರೂ ಜಾತ್ಯಾತೀತರಾಗಿರಲೇಬೇಕು. ಜಾತಿ ವಾದ ಮಾಡಿದರೆ ಅದು ಸಂವಿಧಾನಕ್ಕೆ ಮಾಡುವ ಅಪಚಾರ. ಈ ಮೂಲ ಭೂತ ವಿಷಯಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಅದರಲ್ಲೂ ಜನಪ್ರತಿನಿಧಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು. ಶತ ಶತಮಾನಗಳಿಂದ ಅಕ್ಷರ ವಂಚಿತರಾಗಿ ಧ್ವನಿ ಇಲ್ಲದ ಜನರಿಗೆ ಮಾಧ್ಯಮಗಳು ಧ್ವನಿಯಾಗಬೇಕು. ಸಮಾಜದಲ್ಲಿ ಅಸಮಾನತೆ ಇರುವುದರಿಂದ ನಿರಂತರವಾಗಿ ಶೋಷಣೆ ನಡೆಯುತ್ತಿದೆ.

ಸಮಾನತೆ ನಿರ್ಮಾಣವಾಗುವವರೆಗೂ ಶೋಷಣೆ ನಿಲ್ಲುವುದಿಲ್ಲ. ಈ ನಿಟ್ಟಿನಲ್ಲಿ ಮಾಧ್ಯಮಗಳು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕು.ಮಾಧ್ಯಮಗಳು ನಮ್ಮ ಸರ್ಕಾರವನ್ನು ವಿಮರ್ಶೆಗೆ ಒಳಪಡಿಸಲು ವಿರೋಧವಿಲ್ಲ. ಆದರೆ ವಾಸ್ತವದ ನೆಲೆಗಟ್ಟಿನ ಮೇಲೆ ವಿಮರ್ಶೆಗಳು ನಡೆಯಲಿ ಎಂದರು.

Leave a Reply

Your email address will not be published. Required fields are marked *

error: Content is protected !!