janadhvani

Kannada Online News Paper

ಚಿನ್ನರು ಮರಳಿ ಶಾಲೆಯತ್ತ- ಅ.25 ರಿಂದ ಎಲ್ಲ ಶಾಲೆಗಳಲ್ಲಿ 1ರಿಂದ 5 ತರಗತಿಗಳು ಆರಂಭ

ಕೋವಿಡ್‌ ಮಾರ್ಗಸೂಚಿ ಮತ್ತು ಇಲಾಖೆ ಹೊರಡಿಸಲಿರುವ ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್ಒಪಿ) ಕಟ್ಟುನಿಟ್ಟಾಗಿ ಪಾಲಿಸಿ ತರಗತಿಗಳನ್ನು ಆರಂಭಿಸಲಾಗುವುದು

ಬೆಂಗಳೂರು,ಅ.19: ಕೋವಿಡ್‌ ಕಾರಣಕ್ಕೆ 20 ತಿಂಗಳುಗಳಿಂದ ದೂರ ಉಳಿದಿದ್ದ ಚಿಣ್ಣರು ಮರಳಿ ಶಾಲೆಯತ್ತ ಬರಲು ಮುಹೂರ್ತ ನಿಗದಿಯಾಗಿದೆ. ರಾಜ್ಯದ ಎಲ್ಲ ಶಾಲೆಗಳಲ್ಲಿ ಇದೇ 25ರಿಂದ ಪ್ರಾಥಮಿಕ ಹಂತದಿಂದಲೇ (1ರಿಂದ 5) ಭೌತಿಕ ತರಗತಿಗಳನ್ನು ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ರಾಜ್ಯದಲ್ಲಿನ ಸದ್ಯದ ಕೋವಿಡ್‌ ಪರಿಸ್ಥಿತಿ ಅವಲೋಕಿಸಿದ ತಾಂತ್ರಿಕ ಸಲಹಾ ಸಮಿತಿ, ಸೋಂಕು ದೃಢ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಕೆ ಆಗಿರುವುದರಿಂದ ಒಂದನೇ ತರಗತಿಯಿಂದಲೇ ಶಾಲೆಗಳನ್ನು ಆರಂಭಿಸಲು ಒಪ್ಪಿಗೆ ನೀಡಿದೆ.

‘ಕೋವಿಡ್‌ ಮಾರ್ಗಸೂಚಿ ಮತ್ತು ಇಲಾಖೆ ಹೊರಡಿಸಲಿರುವ ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್ಒಪಿ) ಕಟ್ಟುನಿಟ್ಟಾಗಿ ಪಾಲಿಸಿ ತರಗತಿಗಳನ್ನು ಆರಂಭಿಸಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಹಲವು ತಾಲ್ಲೂಕುಗಳಲ್ಲಿ ಕೋವಿಡ್‌ ದೃಢ ಪ್ರಮಾಣ ಶೂನ್ಯವಿದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಪ್ರಾಥಮಿಕ ಹಂತದಿಂದ ಶಾಲೆಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಈಗಾಗಲೇ ದಿನ ಬಿಟ್ಟು ದಿನ ಅಂಗನವಾಡಿಗಳು ನಡೆಯುತ್ತಿವೆ. ಅದೇ ಮಾದರಿಯಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು (ಎಲ್‌ಕೆಜಿ, ಯುಕೆಜಿ) ಆರಂಭಿಸಲು ಚಿಂತನೆ ನಡೆದಿದೆ’

‘20 ತಿಂಗಳಿಗೂ ಹೆಚ್ಚು ಅವಧಿಯಿಂದ ಮಕ್ಕಳು ಭೌತಿಕ ತರಗತಿಗಳಿಂದ ದೂರ ಉಳಿದಿದ್ದಾರೆ. ಅವರಿಗೆ ರೂಢಿಯಾಗಲೆಂದು ಮೊದಲ ಒಂದು ವಾರ ಮಧ್ಯಾಹ್ನದವರೆಗೆ ಮಾತ್ರ ತರಗತಿಗಳನ್ನು ನಡೆಸಲಾಗುವುದು. ನಂತರ ಪೂರ್ಣ ಪ್ರಮಾಣದಲ್ಲಿ ಆರಂಭಿಸಲಾಗುವುದು.

ಕೋವಿಡ್ ಸುರಕ್ಷತಾ ಕ್ರಮಗಳನ್ನು ಮಕ್ಕಳು ಪಾಲಿಸುವಂತೆ ನೋಡಿಕೊಳ್ಳಲು ಡಿಡಿಪಿಐಗಳು, ಬಿಇಒಗಳು, ಶಿಕ್ಷಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಮಕ್ಕಳಲ್ಲಿ ಕೋವಿಡ್ ಕುರಿತು ಜಾಗೃತಿ ಮೂಡಿಸಲು ಕೋವಿಡ್ ಸೋಂಕಿನ ಕುರಿತು ತರಗತಿ ಅವಧಿಯಲ್ಲಿ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ’ ಎಂದು ತಿಳಿಸಿದರು.

‘ಅಂತರ ಕಾಪಾಡಿಕೊಳ್ಳುವ ದೃಷ್ಟಿಯಿಂದ ತರಗತಿಗಳಲ್ಲಿ ಶೇ 50 ರಷ್ಟು ಹಾಜರಾತಿಗೆ ತಾಂತ್ರಿಕ ಸಲಹಾ ಸಮಿತಿ ಸೂಚಿಸಿದೆ. ಕೊಠಡಿಯಲ್ಲಿ ಅಂತರ ಕಾಪಾಡಿಕೊಳ್ಳಲು ಸಾಕಷ್ಟು ಜಾಗ, ಮೂಲಸೌಕರ್ಯ ಇರುವ ಶಾಲೆಗಳಲ್ಲಿ ಶೇ 50ಕ್ಕಿಂತ ಹೆಚ್ಚು ಮಕ್ಕಳು ಹಾಜರಾಗಲು ಯಾವುದೇ ಸಮಸ್ಯೆ ಇಲ್ಲ. ತರಗತಿಗಳನ್ನು ಆರಂಭಿಸುವ ಮೊದಲು ಶಾಲೆಗಳು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಎರಡು ದಿನಗಳಲ್ಲಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗುವುದು’ ಎಂದರು.

‘ಇದೇ 21 ರಿಂದ 6 ರಿಂದ 10ನೇ ತರಗತಿಗಳ ವಿದ್ಯಾರ್ಥಿಗಳಿಗೆ, ನ. 2ರಿಂದ ಎಲ್ಲ ತರಗತಿಗಳ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಆರಂಭಿಸಲಾಗುವುದು’ ಎಂದರು.

‘ಪಠ್ಯಕ್ರಮವನ್ನು ಕಡಿತಗೊಳಿಸುವ ಪ್ರಸ್ತಾಪ ಇಲ್ಲ. ನಿಗದಿತ ಅವಧಿಯಲ್ಲಿ ಪಠ್ಯವನ್ನು ಯಾವ ರೀತಿ ಪೂರ್ಣಗೊಳಿಸಬೇಕು ಎಂಬ ಕುರಿತು ಶಿಕ್ಷಕರು, ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಮುಂದಿನ ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಆನ್‌ಲೈನ್ ತರಗತಿಗಳಿಂದ ವಿದ್ಯಾರ್ಥಿಗಳ ಕಲಿಕೆಯಲ್ಲಿ ಹಿನ್ನೆಡೆಯಾಗಿರುವ ಕಾರಣ, ಅಂಥ ಮಕ್ಕಳಿಗೆ ‘ಸೇತು ಬಂಧ’ ವಿಶೇಷ ತರಗತಿಗಳ ಮೂಲಕ ಪಾಠ ಹೇಳಿಕೊಡಲಾಗುವುದು’ ಎಂದು ಸಚಿವರು ವಿವರಿಸಿದರು.

‘ನ. 2 ರಿಂದ ಶನಿವಾರ ಕೂಡ ತರಗತಿಗಳನ್ನು ನಡೆಸಲಾಗುವುದು. ತರಗತಿಗಳಿಗೆ ವಿದ್ಯಾರ್ಥಿಗಳ ಭೌತಿಕ ಹಾಜರಾತಿ ಕಡ್ಡಾಯ ಇಲ್ಲ. ಆನ್‌ಲೈನ್ ತರಗತಿಗಳನ್ನು ಮುಂದುವರೆಸಬಹುದು. ಆದರೆ, ಬಹುತೇಕ ಶಾಲೆಗಳಲ್ಲಿ ಭೌತಿಕ ಹಾಜರಾತಿಗೆ ಮಕ್ಕಳು ಮತ್ತು ಪಾಲಕರು ಆಸಕ್ತಿ ತೋರಿಸುತ್ತಿದ್ದಾರೆ’ ಎಂದೂ ಅವರು ಹೇಳಿದರು.

ಷರತ್ತುಗೇಳೇನು ?

  • ಪೋಷಕರ ಅನುಮತಿ ಪತ್ರ ಕಡ್ಡಾಯ
  • ಶಾಲಾ ಪ್ರವೇಶ ಬಳಿ ಕೋವಿಡ್‌ ಲಕ್ಷಣ ಪರಿಶೀಲನೆ ಅಗತ್ಯ
  • ಕೊಠಡಿಯಲ್ಲಿ ಶೇ 50ರಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ
  • ಶಿಕ್ಷಕರು, ಸಿಬ್ಬಂದಿ ಎರಡೂ ಡೋಸ್‌ ಲಸಿಕೆ ಪಡೆದಿರಬೇಕು
  • 50 ವರ್ಷ ದಾಟಿದ ಶಿಕ್ಷಕರು ಹೆಚ್ಚುವರಿ ಫೇಸ್‌ ಶೀಲ್ಡ್ ಬಳಸಬೇಕು
  • ಸ್ಯಾನಿಟೈಸರ್‌, ಪರಸ್ಪರ ಕನಿಷ್ಠ 1 ಮೀಟರ್‌ ಅಂತರ ಪಾಲಿಸಬೇಕು
  • ವಿದ್ಯಾರ್ಥಿಗಳು ಗುಂಪುಗೂಡಲು ಅವಕಾಶ ಇಲ್ಲ
  • ಕೊಠಡಿಗಳನ್ನು ನಿತ್ಯ ಸ್ವಚ್ಚಗೊಳಿಸಬೇಕು

ಪಠ್ಯ ಕಡಿತ ಮಾಡಬೇಕು’

‘20 ತಿಂಗಳುಗಳಿಂದ ಭೌತಿಕ ತರಗತಿಗಳು ನಡೆಯದೆ ಮಕ್ಕಳು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಪೋಷಕರೂ ಆತಂಕಕ್ಕೀಡಾಗಿದ್ದರು. ಹೀಗಾಗಿ, ಶಾಲೆ ಆರಂಭಿಸುವ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಆದರೆ, ಈವರೆಗೆ ನಷ್ಟವಾದ ಕಲಿಕೆಯನ್ನು ತುಂಬಲು ಪುನರಾವರ್ತಿತ ತರಗತಿಗಳನ್ನು ನಡೆಸಬೇಕಿದೆ. ಆ ತರಗತಿಗಳಿಗೆ ದಿನಗಳನ್ನು ಮೀಸಲಿಟ್ಟರೆ ಪಠ್ಯವನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ. ಹೀಗಾಗಿ, ಪಠ್ಯ ಕಡಿತಗೊಳಿಸುವುದು ಸೂಕ್ತ’ ಎಂದು ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ (ರುಪ್ಸಾ) ಒಕ್ಕೂಟದ ಅಧ್ಯಕ್ಷ ಲೋಕೇಶ್‌ ತಾಳಿಕಟ್ಟೆ ಹೇಳಿದರು.

ಶಿಕ್ಷಕರ ವರ್ಗಾವಣೆ: ತಡೆಯಾಜ್ಞೆ ತೆರವು

ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ (2020–21) ವರ್ಗಾವಣೆ ಪ್ರಕ್ರಿಯೆಗೆ ನೀಡಿದ್ದ ತಡೆಯಾಜ್ಞೆಯನ್ನು ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ತೆರವುಗೊಳಿಸಿದೆ. ಕೆಎಟಿ ಆದೇಶದ ಪ್ರತಿ ಪಡೆದು ವಾರದೊಳಗೆ ಪರಿಷ್ಕೃತ ವರ್ಗಾವಣೆ ಅಧಿಸೂಚನೆ ಹೊರಡಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

‘ಶಿಕ್ಷಕರ ವರ್ಗಾವಣೆ ಕಾಯ್ದೆ–2020’ ಗೆ ತಿದ್ದುಪಡಿ ತಂದು, 2019–20ನೇ ಸಾಲಿನಲ್ಲಿ ಕಡ್ಡಾಯ ಮತ್ತು ಹೆಚ್ಚುವರಿ ವರ್ಗಾವಣೆಗೆ ಒಳಗಾದವರಿಗೆ ಕೌನ್ಸೆಲಿಂಗ್‌ ವೇಳೆ ವಿಶೇಷ ಆದ್ಯತೆ ನೀಡಿ ಜೂನ್‌ 30 ರಂದು ಪರಿಷ್ಕೃತ ವರ್ಗಾವಣೆ ಅಧಿಸೂಚನೆ ಹೊರಡಿಸಲಾಗಿತ್ತು. ಅದನ್ನು ಪ್ರಶ್ನಿಸಿ 2016–17ನೇ ಸಾಲಿನಲ್ಲಿ ಕಡ್ಡಾಯ ಮತ್ತು ಹೆಚ್ಚುವರಿ ವರ್ಗಾವಣೆಗೆ ಒಳಗಾಗಿದ್ದ ಶಿಕ್ಷಕರು ಕೆಎಟಿ ಮೆಟ್ಟಿಲೇರಿದ್ದರು. ‘ತಮಗೂ ವಿಶೇಷ ಆದ್ಯತೆ ನೀಡಬೇಕು’ ಎಂದು ಮನವಿ ಮಾಡಿದ್ದರು. ಅರ್ಜಿಯನ್ನು ಪರಿಗಣಿಸಿದ್ದ ನ್ಯಾಯಮಂಡಳಿ, ವರ್ಗಾವಣೆ ಪ್ರಕ್ರಿಯೆಗೆ ತಡೆ ನೀಡಿತ್ತು. ಸೋಮವಾರ ಪ್ರಕರಣದ ವಾದ ಆಲಿಸಿದ ಕೆಎಟಿ, ತಡೆಯಾಜ್ಞೆ ತಂದಿರುವ ಶಿಕ್ಷಕರ ಪ್ರಕರಣಗಳನ್ನು ಬಾಕಿ ಇಟ್ಟು, ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ ಆರಂಭಿಸಲು ನಿರ್ದೇಶನ ನೀಡಿದೆ. ವರ್ಗಾವಣೆ ಬಯಸಿ 75 ಸಾವಿರಕ್ಕೂ ಹೆಚ್ಚು ಶಿಕ್ಷಕರು ಅರ್ಜಿ ಸಲ್ಲಿಸಿದ್ದಾರೆ.

error: Content is protected !! Not allowed copy content from janadhvani.com