janadhvani

Kannada Online News Paper

ಮಹಾತ್ಮಾ ಗಾಂಧಿ ಹತ್ಯೆಯನ್ನು ಬಹಿರಂಗವಾಗಿ ಒಪ್ಪಿಕೊಂಡವರ ವಿರುದ್ಧ ದೇಶದ್ರೋಹ ಕೇಸು ದಾಖಲಿಸಿ, ಗಲ್ಲಿಗೇರಿಸಿ- ಎಸ್ಡಿಪಿಐ

ಬೆಳ್ತಂಗಡಿ, ಸೆ 20: ನಂಜನಗೂಡಿನಲ್ಲಿ ಬಿಜೆಪಿ ಸರ್ಕಾರದ ಆದೇಶದಂತೆ ದೇವಸ್ಥಾನ ಕೆಡವಿದ ವಿಚಾರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತಾನಾಡುವ ಸಂದರ್ಭದಲ್ಲಿ ಹಿಂದೂ ಮಹಾಸಭಾದ ನಾಯಕ ಧರ್ಮೇಂಧ್ರ ಎನ್ನುವವರು ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಕೃತ್ಯವಾದ ರಾಷ್ಟ್ರಪಿತ ಮಹಾತ್ಮ ಗಾಂಧಿಯ ಹತ್ಯೆಯನ್ನು ಸಮರ್ಥಿಸಿ ಆ ಹತ್ಯೆಯನ್ನು ನಾವೇ ಮಾಡಿದ್ದು ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.

ಅಲ್ಲದೆ, ಹಿಂದುತ್ವದ ವಿರುದ್ಧವಾಗಿ ನಡೆದಿದ್ದಲ್ಲಿ ರಾಜ್ಯದ ಮುಖ್ಯಮಂತ್ರಿಯನ್ನು ಕೂಡ ನಾವು ಬಿಡುವವರಲ್ಲ ಎಂದು ಬೆದರಿಕೆಯೊಡ್ಡಿದ ಹಿಂದೂ ಮಹಾಸಭಾದ ಕಾರ್ಯದರ್ಶಿ ಧರ್ಮೇಂದ್ರ ಹಾಗೂ ಅನುಯಾಯಿಗಳ ವಿರುದ್ಧ ಪೋಲಿಸರು ದೇಶದ್ರೋಹದ ಅಡಿಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಬೇಕು ಹಾಗೂ ಈ ಕೂಡಲೇ ಕೇಂದ್ರ ಸರಕಾರ ಎನ್. ಐ. ಎ ತನಿಖೆಗೆ ಆದೇಶ ನೀಡುವ ಮೂಲಕ ಸತ್ಯಾಸತ್ಯತೆಯನ್ನು ಬಯಲಿಗೆಳೆಯಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವತಿಯಿಂದ ಪ್ರತಿಭಟನೆಯ ಮೂಲಕ ರಾಜ್ಯಪಾಲರೊಂದಿಗೆ ಆಗ್ರಹಿಸಲಾಯಿತು.

ಪ್ರತಿಭಟನೆಯ ನೇತೃತ್ವವನ್ನು ಎಸ್. ಡಿ. ಪಿ. ಐ ವಿಧಾನ ಸಭಾಧ್ಯಕ್ಷ ನಿಸಾರ್ ಕುದ್ರಡ್ಕ ವಹಿಸಿದ್ದರು.
ವಿಧಾನಸಭಾ ಸದಸ್ಯ ನವಾಜ್ ಕಟ್ಟೆ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದರು
ಎಸ್. ಡಿ. ಪಿ. ಐ. ಜಿಲ್ಲಾ ಸಮಿತಿ ಸದಸ್ಯ ಅಕ್ಬರ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ಜಿಲ್ಲಾಧ್ಯಕ್ಷ ಮುಸ್ತಫಾ ಜಿ. ಕೆ, ಎಸ್. ಡಿ. ಪಿ. ಐ ಬೆಳ್ತಂಗಡಿ ವಿಧಾನ ಸಭಾ ಉಪಾಧ್ಯಕ್ಷ ಹನೀಫ್ ಪುಂಜಾಲಕಟ್ಟೆ, ಸಾಲಿ ಮದ್ದಡ್ಕ,ಸಾದಿಕ್ ಲಾಯ್ಲಾ, ಸದಸ್ಯರಾದ ಇನಾಸ್ ರೋಡ್ರಿಗಸ್, ಅಬ್ದುಲ್ ಅಜೀಜ್ ಝುಹ್ರಿ, ಟಿ. ಎಸ್. ಹನೀಫ್, ಹೈದರ್ ನೀರ್ಸಾಲ್ ಉಪಸ್ಥಿತರಿದ್ದರು.
ಕಾರ್ಯದರ್ಶಿ ನಿಜಾಮ್ ಗೇರುಕಟ್ಟೆ ಸ್ವಾಗತಿಸಿ, ಫಝಲ್ ರಹ್ಮಾನ್ ವಂದಿಸಿದರು.

error: Content is protected !! Not allowed copy content from janadhvani.com