janadhvani

Kannada Online News Paper

ನಾವು ಹಠದಿಂದ 10ನೇ ತರಗತಿ ಪರೀಕ್ಷೆ ನಡೆಸುತ್ತಿಲ್ಲ- ಶಿಕ್ಷಣ ಸಚಿವ

ಬೆಂಗಳೂರು, ಜುಲೈ 09: ಕೊರೋನಾ ಕಾರಣಕ್ಕೆ ಮಕ್ಕಳ ರಕ್ಷಣೆಗೆ ಒತ್ತು ನೀಡಿ ಅನೇಕ ರಾಜ್ಯಗಳಲ್ಲಿ SSLC ಮತ್ತು PUC ಪರೀಕ್ಷೆಗಳನ್ನು ನಡೆಸದೆ ಎಲ್ಲಾ ವಿದ್ಯಾರ್ಥಿಗಳನ್ನೂ ಪಾಸ್ ಮಾಡಲಾಗಿದೆ. ಮುಂದಿನ ತರಗತಿಗಳಿಗೆ ಕಳುಹಿಸಲಾಗಿದೆ. ಆದರೆ, ಕರ್ನಾಟಕದಲ್ಲಿ ಮಾತ್ರ ರಾಜ್ಯ ಸರ್ಕಾರ ಪಿಯುಸಿ ವಿದ್ಯಾರ್ಥಿಗಳನ್ನು ಪರೀಕ್ಷೆ ನಡೆಸದೆ ಪಾಸು ಮಾಡುವ ನಿರ್ಧಾರಕ್ಕೆ ಮುಂದಾಗಿದೆ. ಆದರೆ, 10ನೇ ತರಗತಿಗೆ ಮಾತ್ರ ಪರೀಕ್ಷೆ ಕಡ್ಡಾಯವಾಗಿ ನಡೆಸಲಾಗುವುದು ಎಂದು ತಿಳಿಸಿದೆ.

ಸರ್ಕಾರದ ಈ ನಿರ್ಧಾರ ವಿದ್ಯಾರ್ಥಿಗಳ ಯೋಗಕ್ಷೇಮದ ದೃಷ್ಟಿಯಿಂದ ಸರಿಯಲ್ಲ ಎಂದು ಅನೇಕರು ಕಿಡಿಕಾರಿದ್ದಾರೆ. ಅಲ್ಲದೆ, ಪರೀಕ್ಷೆ ಇಲ್ಲದೆ ವಿದ್ಯಾರ್ಥಿಗಳನ್ನು ಪಾಸು ಮಾಡುವಂತೆ ಒತ್ತಾಯಿಸಿದ್ದಾರೆ. ಆದರೆ, ಈ ಬಗ್ಗೆ ಕೊನೆಗೂ ಮೌನ ಮುರಿದಿರುವ ಸಚಿವ ಸುರೇಶ್ ಕುಮಾರ್, “ನಾವು ಹಠಕ್ಕಾಗಿ ಪರೀಕ್ಷೆ ನಡೆಸುತ್ತಿಲ್ಲ” ಎಂದು ತಿಳಿಸಿದ್ದಾರೆ.

10ನೇ ತರಗತಿ ಪರೀಕ್ಷೆ ನಡೆಸುವ ಸಂಬಂಧ ಇಂದು ಮಾತನಾಡಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್, “ನಾವು ಹಠದಿಂದ 10ನೇ ತರಗತಿ ಪರೀಕ್ಷೆ ನಡೆಸುತ್ತಿಲ್ಲ. ಭಾವನೆ , ಅಭಿಪ್ರಾಯ ಅರಿತು ಪರೀಕ್ಷೆ ನಡೆಸುತ್ತಿದ್ದೇವೆ. PUC ಹಾಗೂ SSLC ಗೆ ವ್ಯತ್ಯಾಸ ಇದೆ. PUC ಯಲ್ಲಿ 19 ದಿನ ಪರೀಕ್ಷೆ ನಡೆಸಬೇಕು. ಪಿಯುಸಿ ಪಾಸ್ ಮಾಡಲು ಆಧಾರ ಇದೆ. ಆದರೆ, SSLC ಪರೀಕ್ಷೆ ಪಾಸ್ ಮಾಡಲು ಸರ್ಕಾರಕ್ಕೆ ಯಾವುದೇ ಆಧಾರ ಸಿಕ್ಕಿಲ್ಲ.

ಪರೀಕ್ಷೆ ನೇರ ಹಾಗೂ ಸರಳವಾಗಿ ಇರುತ್ತೆ. ಪರೀಕ್ಷೆ ಮಾಡೋದ್ರದಲ್ಲಿ ರಹಸ್ಯ ಕಾರ್ಯಸೂಚಿ ಇಲ್ಲ. ರಾಜ್ಯದ ಆರೋಗ್ಯ ಇಲಾಖೆಯ ಸಮ್ಮತಿ ಪಡೆದು ಪರೀಕ್ಷೆ ನಡೆಸಲಾಗುವುದು. ಅನೇಕ ಶಿಕ್ಷಕರು , ಪೋಷಕರ ಅಭಿಪ್ರಾಯ ಪಡೆದಿದ್ದೇವೆ.ಕೇವಲ 10 ದಿನ ಮಾತ್ರ ಪರೀಕ್ಷೆ ಗೆ ಸಮಯ ಇದೆ. ಈ 10 ದಿನದಲ್ಲಿ ಪರೀಕ್ಷೆ ಇರುವಾಗ ಗೊಂದಲ ಉಂಟು ಮಾಡುವುದು ಸರಿಯಲ್ಲ” ಎಂದು ತಿಳಿಸಿದ್ದಾರೆ.

ಕಳೆದ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯುಸಿಯ ಎಲ್ಲಾ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ತೇರ್ಗಡೆ ಮಾಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಈಗ ನಿರೀಕ್ಷೆಯಂತೆ ಪಿಯುಸಿ ಪುನಾವರ್ತಿತ (Repeaters) ವಿದ್ಯಾರ್ಥಿಗಳಿಗೂ ಅದೇ ಸಿಹಿ ಸುದ್ದಿ ಇದೆ. ಎಲ್ಲಾ ರಿಪೀಟರ್ಸ್ ವಿದ್ಯಾರ್ಥಿಗಳನ್ನು ಪಾಸ್ ಮಾಡುವುದಾಗಿ ಸರ್ಕಾರ ಹೇಳಿದೆ. ದ್ವಿತೀಯ ಪಿಯುಸಿ ಖಾಸಗಿ ವಿದ್ಯಾರ್ಥಿ ಗಳಿಗೆ (Private Students) ಮುಂದಿನ ತಿಂಗಳು ಪರೀಕ್ಷೆ ನಡೆಸಲಾಗುತ್ತದೆ. ಆಗಸ್ಟ್ ತಿಂಗಳಲ್ಲಿ 17,477 ಪ್ರೈವೇಟ್ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯ ಲಿದ್ದಾರೆ.

ಆಗಸ್ಟ್ 31ರೊಳಗೆ ಇವರಿಗೆ ಪರೀಕ್ಷೆ ಆಯೋಜಿಸುವಂತೆ ಸರ್ಕಾರಕ್ಕೆ ಹೈ ಕೋರ್ಟ್ ನಿರ್ದೇಶನ ನೀಡಿದೆ. ಪರೀಕ್ಷೆ ದಿನಾಂಕವನ್ನು ಸದ್ಯದಲ್ಲೇ ಶಿಕ್ಷಣ ಇಲಾಖೆ ಪ್ರಕಟಿಸುವ ನಿರೀಕ್ಷೆ ಇದೆ. ಈ ನಡುವೆ ಪಿಯುಸಿ ವಿದ್ಯಾರ್ಥಿಗಳನ್ನು ಪಾಸ್ ಮಾಡಿದ್ದರೂ ಸಹ ಫಲಿತಾಂಶ ಮತ್ತು ಅಂಕಕ್ಕೆ ಅನೇಕ ಮಾನದಂಡಗಳಿದ್ದು, ಜುಲೈ 20ರ ಒಳಗೆ ಫಲಿತಾಂಶ ನೀಡುವುದಾಗಿ ಪಿಯು ಬೋರ್ಡ್ ತಿಳಿಸಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದು ಹೇಳಲಾಗುತ್ತಿದೆ.

ಎಸ್ಸೆಸ್ಸೆಲ್ಸಿ, ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿ ಅಸೆಸ್ಮೆಂಟ್ ಸಂಯೋಗದಲ್ಲಿ ಅಂಕ ನೀಡಲಾಗುವುದು ಎಂದು ತಿಳಿದುಬಂದಿದೆ. ಎಸ್ ಎಸ್ ಎಲ್ ಸಿಯಲ್ಲಿ ಪಡೆದ ಅಂಕಗಳ ಶೇ. 45, ಪ್ರಥಮ ಪಿಯುಸಿಯ ಶೇ. 45 ಅಂಕ ಹಾಗೂ ದ್ವಿತೀಯ ಪಿಯುಸಿಯ ಅಸೆಸ್ಮೆಂಟ್ ಅಂಕ ಶೇ. 10ರಷ್ಟು ಪರಿಗಣನೆ ಮಾಡಿ ಅಂಕಗಳನ್ನ ನೀಡಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಜುಲೈ 20ರೊಳಗೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಫಲಿತಾಂಶ ಸಿಗಲಿದೆ ಎನ್ನಲಾಗಿದೆ. ಇನ್ನು, ದ್ವಿತೀಯ ಪಿಯುಸಿ ರಿಪೀಟರ್ಸ್ ವಿದ್ಯಾರ್ಥಿಗಳಿಗೆ ಕನಿಷ್ಠ ಶೇ. 35 ಅಂಕದ ಜೊತೆಗೆ ಶೇ. 5ರಷ್ಟು ಗ್ರೇಸ್ ಅಂಕಗಳನ್ನ ನೀಡಲಾಗುತ್ತದೆ ಎಂದು ಉಚ್ಚ ನ್ಯಾಯಾಲಯಕ್ಕೆ ಸರ್ಕಾರ ಸ್ಪಷ್ಟಪಡಿಸಿದೆ.

error: Content is protected !! Not allowed copy content from janadhvani.com