janadhvani

Kannada Online News Paper

ಸುಬ್ರಹ್ಮಣ್ಯಕ್ಕೆ ಭಕ್ತರ ದಂಡು : ಸೀಲ್ ಡೌನ್ ಜಾರಿಗೆ ಅಡ್ಡಿ- ಪೋಲೀಸರಿಗೆ ತಲೆನೋವು

ಕಡಬ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೊರೊನಾ ಲಾಕ್ ಡೌನ್ ನಿಯಮದಲ್ಲಿ ಸಡಿಲಿಕೆ ಮಾಡಲಾಗಿದ್ದು, ದಕ್ಷಿಣಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ‌. ಜಿಲ್ಲೆಯಲ್ಲಿ ಪ್ರತಿನಿತ್ಯ 500 ರಷ್ಟು ಕೊರೊನಾ ಪಾಸಿಟೀವ್ ಪ್ರಕರಣಗಳು ವರದಿಯಾಗುತ್ತಿರುವುದು ಜಿಲ್ಲಾಡಳಿತಕ್ಕೆ ಲಾಕ್ ಡೌನ್ ನಿಯಮದಲ್ಲಿ ಸಡಿಲಿಕೆ ಮಾಡುವುದಕ್ಕೆ ಅಡ್ಡಿಯಾಗುತ್ತಿದೆ.

ಈ ಹಿನ್ನಲೆಯಲ್ಲಿ ಕೊರೊನಾ ಪಾಸಿಟೀವ್ ಪ್ರಕರಣಗಳು ಹೆಚ್ಚಾಗುತ್ತಿರುವ 17 ಗ್ರಾಮಗಳನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಮಂಗಳೂರು ತಾಲೂಕಿನ ಕೊಣಾಜೆ ಮತ್ತು ನೀರುಮಾರ್ಗ, ಬೆಳ್ತಂಗಡಿ ತಾಲೂಕಿನ ನಾರಾವಿ,ಕೊಯ್ಯೂರು, ಮಿತ್ತಬಾಗಿಲು, ಮಾಲಾರಿ , ನೆರಿಯ, ಲಾಯಿಲಾ, ಉಜಿರೆ, ಚಾರ್ಮಾಡಿ , ಸುಳ್ಯ ತಾಲೂಕಿನ ಅಮರ ಮುಡ್ನೂರು, ಐವರ್ನಾಡು, ಕೊಲ್ಲಮೊಗ್ರು, ಅರಂತೋಡು. ಕಡಬ ತಾಲೂಕಿನ ಸುಬ್ರಹ್ಮಣ್ಯ ಮತ್ತು ಸವಣೂರು ಹೀಗೆ ಹದಿನೇಳು ಗ್ರಾಮಗಳಲ್ಲಿ ಸಂಪೂರ್ಣ ಸೀಲ್ ಡೌನ್ ನಿಯಮ ಜಾರಿಯಲ್ಲಿದೆ.

ಆದರೆ ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರವಿರುವ ಸುಬ್ರಹ್ಮಣ್ಯ ಗ್ರಾಮದಲ್ಲಿ ಕೂಡಾ ಸೀಲ್ ಡೌನ್ ಜಾರಿಯಲ್ಲಿದ್ದು,ಆದರೆ ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದು ಸುಬ್ರಹ್ಮಣ್ಯ ಗ್ರಾಮಪಂಚಾಯತ್ ಹಾಗೂ ಪೋಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೊರೊನಾ ಲಾಕ್ ಡೌನ್ ಸಡಿಲಿಕೆ ಮಾಡಿರುವ ಕಾರಣ ಭಕ್ತಾಧಿಗಳ ತಂಡ ಇದೀಗ ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಆಗಮಿಸುತ್ತಿದೆ.

ಕುಕ್ಕೆ ಸುಬ್ರಹ್ಮಣ್ಯ ಸಂಪರ್ಕಿಸುವ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಪೋಲೀಸರು ಚೆಕ್ ಪೋಸ್ಟ್ ಅಳವಡಿಸಿದ್ದು, ಭಕ್ತಾಧಿಗಳು ಕಳ್ಳ ಮಾರ್ಗದ ಮೂಲಕವೂ ದೇವಸ್ಥಾನದ ರಥಬೀದಿಗೆ ಆಗಮಿಸುತ್ತಿದ್ದು, ಇವರನ್ನು ನಿಯಂತ್ರಿಸುವುದೇ ಕಷ್ಟಸಾಧ್ಯವಾಗುತ್ತಿದೆ. ಕುಕ್ಕೆ ಕ್ಷೇತ್ರಕ್ಕೆ ಭಕ್ತರ ಭೇಟಿಗೆ ನಿಶೇಧವಿದ್ದರೂ, ಧರ್ಮಸ್ಥಳ ಕ್ಷೇತ್ರಕ್ಕೆ ಬರುವ ಭಕ್ತಾಧಿಗಳು ಸುಬ್ರಹ್ಮಣ್ಯ ಕ್ಕೂ ಬರುತ್ತಿರುವುದು ಸ್ಥಳೀಯ ಪಂಚಾಯತ್ ಹಾಗೂ ಪೋಲೀಸರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಪೋಲೀಸರು ಭಕ್ತಾಧಿಗಳ ವಾಹನಕ್ಕೆ ದಂಡ ವಿಧಿಸಿ‌ ಕಳುಹಿಸುತ್ತಿದ್ದರೂ, ದಿನಕ್ಕೆ ನೂರಾರು‌ ವಾಹನಗಳು ಬರುತ್ತಿರುವುದು ಸೀಲ್ ಡೌನ್ ನಿಯಮ ಪಾಲನೆಗೂ ಕಷ್ಟವಾಗುತ್ತಿದೆ.

ಈ ಹಿನ್ನಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳ ಸಂಪರ್ಕಿಸುವ ರಸ್ತೆ ಮಧ್ಯೆಯೇ ಭಕ್ತಾಧಿಗಳ ವಾಹನಗಳನ್ನು ತಡೆಯಬೇಕು ಎನ್ನುವ ಅಭಿಪ್ರಾಯಗಳೂ ಕೇಳಿ ಬರಲಾರಂಭಿಸಿದೆ‌. ಸುಬ್ರಹ್ಮಣ್ಯ ಸೀಲ್ ಡೌನ್ ಆಗಿರುವ ಮಾಹಿತಿ ಇದ್ದರೂ, ರಾಜ್ಯದ ವಿವಿಧ ಕಡೆಗಳಿಂದ ಆಗಮಿಸುತ್ತಿರುವ ಭಕ್ತಾಧಿಗಳು ಸುಬ್ರಹ್ಮಣ್ಯ ಕ್ಕೆ ಬೇಟಿ ನೀಡುತ್ತಿರುವುದು ಸ್ಥಳೀಯರ ಆಕ್ರೋಶಕ್ಕೂ ಕಾರಣವಾಗಿದೆ. ಸುಬ್ರಹ್ಮಣ್ಯ ದಲ್ಲಿ ಈ ಹಿಂದೆ ಕೊರೊನಾ‌ಲಾಕ್ ಡೌನ್ ಜಾರಿಯಲ್ಲಿದ್ದ ಸಂದರ್ಭದಲ್ಲೂ ಬೇರೆ ಊರುಗಳಿಂದ ಭಕ್ತಾಧಿಗಳು ಕ್ಷೇತ್ರಕ್ಕೆ ಆಗಮಿಸಿದ ಪರಿಣಾಮ ಈ ಭಾಗದಲ್ಲಿ ಕೊರೊನಾ ಪಾಸಿಟೀವ್ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ ಎನ್ನಲಾಗುತ್ತಿದೆ.

ಇದೀಗ ಮತ್ತೆ ಬೇರೆ ಊರುಗಳಿಂದ ಭಕ್ತಾಧಿಗಳು ಪೋಲೀಸ್ ಕಣ್ಣು ತಪ್ಪಿಸಿ ಕ್ಷೇತ್ರ‌ ಪರಿಸರಕ್ಕೆ ಆಗಮಿಸುತ್ತಿದ್ದಾರೆ. ವಾಹನಗಳಲ್ಲಿ ಬರುವ ಭಕ್ತಾಧಿಗಳು ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿ ಸುಬ್ರಹ್ಮಣ್ಯ ಕ್ಕೆ ಬರುವುದು ಸಾಮಾನ್ಯವಾಗಿದ್ದು, ಇದೇ ರೀತಿಯ ಪ್ರಕ್ರಿಯೆ ಸೀಲ್ ಡೌನ್ ಜಾರಿಯ ಈ ಸಂದರ್ಭದಲ್ಲೂ ನಡೆಯುತ್ತಿದೆ. ಧರ್ಮಸ್ಥಳದಿಂದ ಸುಬ್ರಹ್ಮಣ್ಯ ತಲುಪಿದ ಸಂದರ್ಭದಲ್ಲಿ ಪೋಲೀಸರ ತಪಾಸಣೆ ಆರಂಭವಾಗುತ್ತಿದ್ದು, ಈ ವಿಚಾರವಾಗಿ ಪೋಲೀಸ್ ಹಾಗೂ ಭಕ್ತಾಧಿಗಳ ನಡುವೆ ಚರ್ಚೆಗಳಿಗೂ ಅವಕಾಶ ನೀಡುತ್ತಿದೆ.

ಸುಬ್ರಹ್ಮಣ್ಯ ಪರಿಸರದಲ್ಲಿ ಭಕ್ತಾಧಿಗಳನ್ನು ತಡೆಹಿಡಿಯುವ ಬದಲು, ಸುಬ್ರಹ್ಮಣ್ಯ ಕ್ಕೆ ಸಂಪರ್ಕ ಕಲ್ಪಿಸುವ ಇಚ್ಲಂಪಾಡಿ, ಗುಂಡ್ಯಾ ಹಾಗೂ ಕಡಬ ಮೂಲಕ ಬರುವ ಎಲ್ಲಾ ವಾಹನಗಳನ್ನು ತಪಾಸಣೆ ನಡೆಸಬೇಕಿದೆ. ಈ‌ ಮೂಲಕ ಸೀಲ್ ಡೌನ್ ಬಗ್ಗೆ ಮಾಹಿತಿ ಇಲ್ಲದ ಭಕ್ತಾಧಿಗಳಿಗೆ ಅಲ್ಲಿಯೇ ಮಾಹಿತಿ ನೀಡುವ ಕೆಲಸವೂ ನಡೆಯಬೇಕಿದೆ. ಈ ಮೂಲಕ ಸುಬ್ರಹ್ಮಣ್ಯದ‌ ಪೋಲೀಸ್‌ ಹಾಗೂ ಗ್ರಾಮಪಂಚಾಯತ್ ಸಿಬ್ಬಂದಿಗಳ ಮೇಲಿನ ಒತ್ತಡವನ್ನೂ ಕಡಿಮೆ ಮಾಡಬೇಕಿದೆ.

error: Content is protected !! Not allowed copy content from janadhvani.com