janadhvani

Kannada Online News Paper

ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಇನ್ನಿಲ್ಲ

ಬೆಂಗಳೂರು: ನಟ ಸಂಚಾರಿ ವಿಜಯ್ ಅವರು ಶನಿವಾರ ತಡರಾತ್ರಿ (ಜೂನ್ 12) ನಡೆದ ಅಪಘಾತದಿಂದಾಗಿ ನಿಧನರಾಗಿದ್ದಾರೆ. ಅಪಘಾತ ಆದತಕ್ಷಣ ವಿಜಯ್ ಅವರನ್ನು ಆಸ್ಪತ್ರೆಗೆ ಕರೆತರಲಾಗಿತ್ತು, ಆಪರೇಶನ್ ಕೂಡ ಮಾಡಲಾಗಿತ್ತು. ಆದರೆ ಚಿಕಿತ್ಸಗೆ ಸ್ಪಂದಿಸಿರಲಿಲ್ಲ. ವಿಜಯ್ ಅವರು ಮೆದುಳು ನಿಷ್ಕ್ರಿಯವಾಗಿತ್ತು. ವಿಜಯ್‌ಗೆ 38 ವರ್ಷ ವಯಸ್ಸಾಗಿತ್ತು. ಅಪೋಲೋ ಆಸ್ಪತ್ರೆ ವೈದ್ಯರಿಂದ ಅಧಿಕೃತ ಘೋಷಣೆಯಾಗಿದೆ.

ಆಸ್ಪತ್ರೆಗೆ ಕರೆತಂದಾಗಲೇ ವಿಜಯ್ ಸ್ಥಿತಿ ತುಂಬ ಹದಗೆಟ್ಟಿತ್ತು. ತಕ್ಷಣ ಅವರಿಗೆ ಆಪರೇಶನ್ ಕೂಡ ಮಾಡಲಾಗಿತ್ತು. ಆಪರೇಶನ್ ಆದ 36 ಗಂಟೆ ಕೂಡ ಅವರು ಚಿಕಿತ್ಸೆಗೆ ಸ್ಪಂದಿಸಿರಲಿಲ್ಲ. ಬಹು ಮುಖ್ಯವಾಗಿ ಅವರ ಮೆದುಳಿಗೆ ಭಾರೀ ಪೆಟ್ಟಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು, ಆದರೆ ಅವರಿಗೆ ಪ್ರಜ್ಞೆ ಬಂದಿರಲಿಲ್ಲ.

ಸಂಚಾರಿ ವಿಜಯ್ ಅವರು ಗೆಳೆಯ ನವೀನ್ ಜೊತೆ ಜೂನ್ 12ರಂದು ರಾತ್ರಿ 11.45ರ ಸುಮಾರಿಗೆ ಬೈಕ್‌ನಲ್ಲಿ ಹೋಗುವಾಗ ರಸ್ತೆ ಅಪಘಾತವಾಗಿತ್ತು. ವಿದ್ಯುತ್ ಕಂಬಕ್ಕೆ ಹೋಗಿ ಬೈಕ್ ಗುದ್ದಿತ್ತು ಎನ್ನಲಾಗಿದೆ. ತಕ್ಷಣವೇ ಅವರನ್ನು ಬನ್ನೇರುಘಟ್ಟದ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಆರೋಗ್ಯ ಸ್ಥಿತಿ ತುಂಬ ಗಂಭೀರವಾಗಿತ್ತು. ಸಿ.ಟಿ. ಸ್ಕ್ಯಾನ್ ಮಾಡಿದ ನಂತರದಲ್ಲಿ ವಿಜಯ್ ಮೆದುಳಿಗೆ ತೀವ್ರ ಗಾಯವಾಗಿ ರಕ್ತಸ್ರಾವವಾಗಿರೋದು ವೈದ್ಯರಿಗೆ ಗೊತ್ತಾಗಿತ್ತು. ಮೆದುಳಿನ ರಕ್ತಸ್ರಾವವನ್ನು ತಡೆಯಲು ತಕ್ಷಣವೇ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು.

ನ್ಯೂರೋ ಐಸಿಯುನಲ್ಲಿ ಇಟ್ಟು ಚಿಕಿತ್ಸೆ ನೀಡಿದ್ದರೂ ಕೂಡ ವಿಜಯ್ ಅವರು ಚಿಕಿತ್ಸೆಗೆ ಸ್ಪಂದಿಸಿರಲಿಲ್ಲ. ಅವರ ಆರೋಗ್ಯ ಸ್ಥಿತಿ ತುಂಬ ಗಂಭೀರವಾಗಿದೆ, ಏನೂ ಹೇಳಲಾಗಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದರು. ಕುಟುಂಬಸ್ಥರು ವಿಜಯ್ ಅವರ ಅಂಗಾಂಗ ದಾನ ಮಾಡಲು ನಿರ್ಧಾರ ಮಾಡಿದ್ದಾರೆ. ನಟನೆ ಜೊತೆಗೆ ಸಾಮಾಜಿಕ ಕೆಲಸ ಮಾಡೋದರಲ್ಲಿ ಸಂಚಾರಿ ವಿಜಯ್ ಅವರು ಹೆಚ್ಚು ಗುರುತಿಸಿಕೊಂಡಿದ್ದರು.

ವಿಜಯ್ ನಿಧನದ ಸುದ್ದಿ ಸ್ಯಾಂಡಲ್‌ವುಡ್ ಮಂದಿ ಕಣ್ಣೀರು ಹಾಕಿದ್ದಾರೆ. ನಟ ನೀನಾಸಂ ಸತೀಶ್ ಅವರು “ವಿಜಯ್ ಇಲ್ಲ ಅನ್ನುವ ಸುದ್ದಿ ನಂಬಲು ಆಗುತ್ತಿಲ್ಲ” ಎಂದು ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳು ಸೇರಿದಂತೆ ಸಾಕಷ್ಟು ಜನರು ವಿಜಯ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಆ ನಂತರದಲ್ಲಿ ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿಧಿ ವಿಧಾನಗಳ ಮೂಲಕ ವಿಜಯ್ ಹುಟ್ಟೂರು ಪಂಚಮನಹಳ್ಳಿಯಲ್ಲಿ ಅಂತ್ಯಸಂಸ್ಕಾರ ಮಾಡಲಾಗುವುದು.

ಹೆಲ್ಮೆಟ್ ಧರಿಸಿದ್ದರೆ ಗಾಯದ ತೀವ್ರತೆ ತಗ್ಗುತ್ತಿತ್ತು

ಅಪಘಾತ ವೇಳೆ ಸಂಚಾರಿ ವಿಜಯ್ ತಲೆಗೆ ಹಾಗೂ ತೊಡೆಗೆ ಗಂಭೀರ ಗಾಯಗಳಾಗಿವೆ. ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿ ಪ್ರಾಣಕ್ಕೆ ಕುತ್ತು ತಂದಿದೆ. ಅಪಘಾತದ ಈ ಮಾಹಿತಿ ಕೇಳಿದ ಎಲ್ಲರಿಗೂ ಕಾಡುವ ಪ್ರಶ್ನೆ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಸಂಚಾರಿ ವಿಜಯ್ ಏಕೆ ಹೆಲ್ಮೆಟ್ ಧರಿಸಿರಲಿಲ್ಲವೆಂದು. ಹೆಲ್ಮೆಟ್ ಧರಿಸಿದ್ದರೆ ಗಾಯದ ತೀವ್ರತೆ ತಗ್ಗುತ್ತಿತ್ತು. ಅಪಘಾತದಿಂದ ತಲೆಗೆ ಪೆಟ್ಟಾಗುವುದು ತಪ್ಪುತ್ತಿತ್ತು. ಬೈಕ್ ಏರುವ ಕೊನೆ ಘಳಿಗೆಯಲ್ಲಿ ವಿಜಯ್ ಮಾಡಿದ ಒಂದು ತಪ್ಪು ಇಂದು ಅವರನ್ನು ಕಳಕೊಳ್ಳುವಂತೆ ಮಾಡಿದೆ. ರಸ್ತೆ ಅಪಘಾತಗಳ ಬಗ್ಗೆ ಅರಿವು ಮೂಡಿಸುವ ಸೆಲೆಬ್ರೆಟಿಗಳೇ ಸಂಚಾರಿ ನಿಯಮಗಳನ್ನು ಕಡೆಗಣಿಸಿದರಾ ಎಂಬ ಪ್ರಶ್ನೆ ಕಾಡುತ್ತೆ.

error: Content is protected !! Not allowed copy content from janadhvani.com