janadhvani

Kannada Online News Paper

ಕೊರೋನಾದಿಂದ ಮೃತಪಟ್ಟವರ ಕುಟುಂಬಕ್ಕೆ 1 ಲಕ್ಷ ಪರಿಹಾರ- ಸಿಎಂ ಘೋಷಣೆ

ಬೆಂಗಳೂರು: ಕೊರೊನಾ ವಾರಿಯರ್ಸ್ ಹೊರತಾಗಿಯೂ ಸೋಂಕಿನಿಂದ ಮೃತಪಟ್ಟ ಜನಸಾಮಾನ್ಯರ ಕುಟುಂಬಕ್ಕೆ ಪರಿಹಾರ ನೀಡುವ ಯೋಜನೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದರು. ದೇಶದಲ್ಲಿ ಪ್ರಥಮ ಬಾರಿಗೆ ಕರ್ನಾಟಕ ಸರ್ಕಾರ ಕೊರೊನಾಗೆ ಬಲಿಯಾದ ಜನಸಾಮಾನ್ಯರಿಗೆ ಪರಿಹಾರ ನೀಡಲು ಮುಂದಾಗಿದೆ. ಕೊರೊನಾದಿಂದ ಮೃತಪಟ್ಟ ಬಿಪಿಎಲ್ ಕಾರ್ಡುದಾರರಿಗೆ ಈ ಯೋಜನೆ ಅನ್ವಯಿಸಲಿದೆ. ಹಲವು ಕುಟುಂಬಗಳಲ್ಲಿ ಒಬ್ಬರಿಗಿಂತ ಹೆಚ್ಚು ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಆದರೆ ಒಂದು ಕುಟುಂಬದಲ್ಲಿ ಎಷ್ಟೇ ಮಂದಿ ಕೊರೊನಾದಿಂದ ಸತ್ತಿದ್ದರು ಒಬ್ಬರ ಸಾವಿಗೆ ಮಾತ್ರ ಪರಿಹಾರ ನೀಡಲಾಗುತ್ತೆ.

ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 32,913 ಮಂದಿ (ಜೂ.13ರವರೆಗೆ) ಮೃತಪಟ್ಟಿದ್ದಾರೆ. ಇದರಲ್ಲಿ BPL ಕಾರ್ಡ್ ಹೊಂದಿರುವ ಕುಟುಂಬದಲ್ಲಿ ಒಬ್ಬರ ಸಾವಿಗೆ ಪರಿಹಾರ ನೀಡಲಾಗುವುದು. ಇದಕ್ಕಾಗಿ ರಾಜ್ಯ ಸರ್ಕಾರ 250ರಿಂದ 300 ಕೋಟಿಗಳಷ್ಟು ಹಣವನ್ನು ಮೀಸಲಿಟ್ಟಿದೆ. ಈ ಹಣ ಸುಮಾರು 25 ಸಾವಿರ ಬಿಪಿಎಲ್ ಕುಟುಂಬ ವರ್ಗದವರಿಗೆ ಪರಿಹಾರ ಸಿಗಲಿದೆ.

ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿ ಮಾತನಾಡಿದ ಸಿಎಂ ಯಡಿಯೂರಪ್ಪ, ರಾಜ್ಯದ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿದೆ. ಇವತ್ತು ಹಣಕಾಸಿನ‌ ಅಧಿಕಾರಿಗಳ ಜೊತೆಯೂ ಚರ್ಚೆ ಮಾಡಿದ್ದೇನೆ. ಈಗ ಬಿಪಿಎಲ್ ಕುಟುಂಬಕ್ಕೆ ಪರಿಹಾರ ಕೊಡ್ತಾ ಇದ್ದೇವೆ ಎಂದರೆ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿದೆ ಎಂಬುದು ಗೊತ್ತಾಗುತ್ತೆ. ಕೊರೊನಾದಿಂದ ಮೃತಪಟ್ಟವರ ಪರಿಹಾರ ಯೋಜನೆಗೆ 250-300 ಕೋಟಿ ಹಣ ವೆಚ್ಚವಾಗುತ್ತೆ.

ಡಿಸಿಎಂ ಗೋವಿಂದ ಕಾರಜೋಳ ಮಾತನಾಡಿ ಈ ಪರಿಹಾರ ಯೋಜನೆ ಕೊರೊನಾ ಎರಡು ಅಲೆಗಳಲ್ಲಿ ಸತ್ತವರಿಗೆ ಅನ್ವಯ ಆಗಲಿದೆ. ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ 1ಲಕ್ಷ ಪರಿಹಾರ ಸಿಗಲಿದೆ. ಕೋವಿಡ್ ನಿಂದ ಮೃತಪಟ್ಟ ಎಲ್ಲರಿಗೂ ಪರಿಹಾರ ಇಲ್ಲ. ಒಂದು ಕುಟುಂಬದಲ್ಲಿ ಎಷ್ಟೇ ಜನ ಮೃತಪಟ್ಟಿದ್ದರೂ ಒಬ್ಬರಿಗೆ ಮಾತ್ರ ಪರಿಹಾರ. ಅದು ದುಡಿಯುವ ವ್ಯಕ್ತಿಗೆ ( ವಯಸ್ಕ) ಮಾತ್ರ ಪರಿಹಾರ ಸಿಗಲಿದೆ. ವಯಸ್ಸಾದವರೂ, ಚಿಕ್ಕಮಕ್ಕಳು ಸತ್ತಿದ್ದರೆ ಪರಿಹಾರ ಸಿಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.

ಒಂದು ವೇಳೆ ಅಪ್ಪ-ಅಮ್ಮ ಇಬ್ಬರೂ ತೀರಿಕೊಂಡರು ಅವರ ಖಾತೆಗೆ ಹಣ ಜಮಾವಣೆ ಮಾಡಲಾಗುವುದು. ಯಾವ ರೀತಿ ಪರಿಹಾರ ಪಡೆಯಬಹುದು ಎಂಬುದರ‌ ಬಗ್ಗೆ ಇಂದು ಸಂಜೆ ಅಥವಾ ನಾಳೆ ಒಳಗೆ ಮಾರ್ಗಸೂಚಿ ಪ್ರಕಟಿಸಲಾಗುವುದು ಎಂದು ತಿಳಿಸಿದರು.

ತಂದೆ-ತಾಯಿ ಇಬ್ಬರು ಕೊರೊನಾಗೆ ಬಲಿಯಾಗಿದ್ದ ಅವರ ಮಕ್ಕಳಿಗೂ ಈ ಪರಿಹಾರ ಮೊತ್ತ ಸಿಗಲಿದೆ. ಪ್ರಧಾನಿ ಮೋದಿ ಘೋಷಿಸಿರುವಂತೆ 10 ಲಕ್ಷದ ಪರಿಹಾರದ ಜೊತೆ ರಾಜ್ಯ ಸರ್ಕಾರದ 1 ಲಕ್ಷವೂ ಸೇರಲಿದೆ. ಕೊರೊನಾದಿಂದ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡಿರುವ ಮಕ್ಕಳಿಗೆ ತಲಾ 10 ಲಕ್ಷ ಪರಿಹಾರವನ್ನು ಕೇಂದ್ರ ಸರ್ಕಾರ ಈಗಾಗಲೇ ಘೋಷಿಸಿದೆ.

error: Content is protected !! Not allowed copy content from janadhvani.com