janadhvani

Kannada Online News Paper

ಕೊರೋನಾ ಹಬ್ಬಲು ಚುನಾವಣಾ ಆಯೋಗವೇ ಏಕೈಕ ಕಾರಣ- ಮದ್ರಾಸ್ ಹೈಕೋರ್ಟ್

ಚೆನ್ನೈ: ದೇಶದಲ್ಲಿ ಕೋವಿಡ್ –19 ಎರಡನೇ ಅಲೆಯು ಇಷ್ಟೊಂದು ವೇಗವಾಗಿ ಹಬ್ಬಲು ಚುನಾವಣಾ ಆಯೋಗವೇ ಏಕೈಕ ಕಾರಣ ಎಂದು ಮದ್ರಾಸ್‌ ಹೈಕೋರ್ಟ್‌ ಸೋಮವಾರ ತರಾಟೆಗೆ ತೆಗೆದುಕೊಂಡಿದೆ. ಚುನಾವಣಾ ಆಯೋಗವು ಇತ್ತೀಚೆಗೆ ‘ಅತ್ಯಂತ ಬೇಜವಾಬ್ದಾರಿ ಸಂಸ್ಥೆ’ಯಾಗಿದೆ. ಅದರ ಅಧಿಕಾರಿಗಳ ವಿರುದ್ಧ ಕೊಲೆ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಳ್ಳಬಹುದು ಎಂದೂ ಹೇಳಿದೆ.

ರ್‍ಯಾಲಿ ಮತ್ತು ಸಭೆಗಳನ್ನು ನಡೆಸಲು ರಾಜಕೀಯ ಪಕ್ಷಗಳಿಗೆ ಅನುಮತಿ ನೀಡುವ ಮೂಲಕ ಸೋಂಕು ಹರಡಲು ಆಯೋಗವು ಕಾರಣವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಸಂಜೀವ್‌ ಬ್ಯಾನರ್ಜಿ ಅವರ ಪೀಠವು ಹೇಳಿದೆ. ಮೇ 2ರಂದು ಮತ ಎಣಿಕೆ ನಡೆಸುವಾಗ ಕೋವಿಡ್‌ ತಡೆ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ತಮಿಳುನಾಡಿನ ಸಾರಿಗೆ ಸಚಿವ ಮತ್ತು ಕರೂರ್‌ ಕ್ಷೇತ್ರದ ಎಐಎಡಿಎಂಕೆ ಅಭ್ಯರ್ಥಿ ಎಂ.ಆರ್‌. ವಿಜಯಭಾಸ್ಕರ್‌ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಪೀಠವು ನಡೆಸಿತು.

ಎಣಿಕೆ ಕೇಂದ್ರದಲ್ಲಿ ಎಲ್ಲ ಮುನ್ನೆಚ್ಚರಿಕೆಯನ್ನೂ ವಹಿಸಲಾಗುವುದು ಎಂದು ಆಯೋಗದ ವಕೀಲರು ಹೇಳಿದ್ದು ಮುಖ್ಯ ನ್ಯಾಯಮೂರ್ತಿಯವರ ಆಕ್ರೋಶಕ್ಕೆ ಕಾರಣವಾಯಿತು. ‘ರ್‍ಯಾಲಿ ಮತ್ತು ಸಭೆಗಳು ನಡೆಯುವಾಗ ನೀವು ಈ ಲೋಕದಲ್ಲಿ ಇರಲಿಲ್ಲವೇ? ಸಾರ್ವಜನಿಕ ಆರೋಗ್ಯವೇ ಅತ್ಯಂತ ಮುಖ್ಯ. ಪ್ರಜಾಪ್ರಭುತ್ವವು ಖಾತರಿಪಡಿಸುವ ಹಕ್ಕುಗಳನ್ನು ಚಲಾಯಿಸಲು ವ್ಯಕ್ತಿಯು ಬದುಕಿದ್ದರೆ ಮಾತ್ರ ಸಾಧ್ಯ’ ಎಂದು ಪೀಠ ಹೇಳಿದೆ.

ಕೋವಿಡ್‌ ತಡೆ ಮಾರ್ಗಸೂಚಿ ಪಾಲನೆಗೆ ಸಂಬಂಧಿಸಿ ಕಲ್ಕತ್ತಾ ಹೈಕೋರ್ಟ್‌ ಕೂಡ ಆಯೋಗದ ನಡೆಯ ಬಗ್ಗೆ ಈ ಹಿಂದೆ ಅಸಮಾಧಾನ ವ್ಯಕ್ತಪಡಿಸಿತ್ತು. ಕೋವಿಡ್‌ ತಡೆಗೆ ಸುತ್ತೋಲೆ ಹೊರಡಿಸಿ, ಸಭೆಗಳನ್ನು ನಡೆಸಿದರೆ ಸಾಲದು ಎಂದು ಮುಖ್ಯನ್ಯಾಯಮೂರ್ತಿ ಟಿ.ಬಿ.ಎನ್‌. ರಾಧಾಕೃಷ್ಣನ್‌ ಹೇಳಿದ್ದರು.

‘ಎಣಿಕೆ ತಡೆಗೆ ಹಿಂಜರಿಯುವುದಿಲ್ಲ’
ಮತ ಎಣಿಕೆ ಕೇಂದ್ರಗಳಲ್ಲಿ ಕೋವಿಡ್‌ ತಡೆ ಮಾರ್ಗಸೂಚಿ ಪಾಲನೆಗೆ ಯಾವ ಯೋಜನೆ ರೂಪಿಸಲಾಗಿದೆ ಎಂಬುದನ್ನು ಶುಕ್ರವಾರದ ಒಳಗೆ ಕೋರ್ಟ್‌ಗೆ ತಿಳಿಸಬೇಕು. ಇಂತಹ ಯೋಜನೆ ಸಿದ್ಧವಾಗದೇ ಇದ್ದರೆ, ಮೇ 2ರಂದು ನಡೆಯಲಿರುವ ಮತ ಎಣಿಕೆಗೆ ತಡೆ ನೀಡಲು ಹಿಂಜರಿಯವುದಿಲ್ಲ ಎಂದೂ ಕೋರ್ಟ್‌ ಮೌಖಿಕ ಎಚ್ಚರಿಕೆ ನೀಡಿದೆ.

error: Content is protected !! Not allowed copy content from janadhvani.com