janadhvani

Kannada Online News Paper

ಸಿಎಎ ಜಾರಿ ಮಾಡುವುದಿಲ್ಲ- ಅಮಿತ್ ಶಾ ಮತ್ತು ಕೇಂದ್ರಕ್ಕೆ ಕೇರಳದ ಸ್ಪಷ್ಟ ಉತ್ತರ

ಕೊಚ್ಚಿ: ಫೆ.14: ತಮ್ಮ ರಾಜ್ಯದಲ್ಲಿ ಸಿಎಎ ಕಾನೂನನ್ನು ಜಾರಿ ಮಾಡುವುದಿಲ್ಲ ಎಂದು ಕೇರಳ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅಮಿತ್ ಶಾ ಮತ್ತು ಕೇಂದ್ರ ಸರ್ಕಾರಕ್ಕೆ ಸ್ಪಷ್ಟ ಉತ್ತರ ನೀಡಿದ್ದಾರೆ. ಲೋಕಸಭಾ ಅಧಿವೇಶನದಲ್ಲಿ ಇಂದು ಮತ್ತೆ ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆ) ಕುರಿತು ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, “ಕೊರೋನಾ ಲಸಿಕಾ ಅಭಿಯಾನ ಮುಗಿದ ನಂತರ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯನ್ನು ಜಾರಿ ಮಾಡುತ್ತೇವೆ” ಎಂದು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಕೇರಳ ಮುಖ್ಯಮಂತ್ರಿಯಿಂದ ಈ ಪ್ರತಿಕ್ರಿಯೆ ಬಂದಿದೆ.

ಈ ಕುರಿತು ವಿಧಾನಸಭಾ ಚುನಾವಣಾ ಪ್ರಚಾರದಲ್ಲೇ ಸ್ಪಷ್ಟ ಉತ್ತರ ನೀಡಿರುವ ಕೇರಳ ಸಿಎಂ ಪಿಣರಾಯಿ ವಿಜಯನ್, “ಕೋವಿಡ್ ಲಸಿಕೆ ಅಭಿಯಾನ ಮುಗಿದ ನಂತರ ಸಿಎಎ ಕಾನೂನನ್ನು ಜಾರಿಗೆ ತರುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಆದರೆ, ಈಗಾಗಲೇ ಕೇರಳ ಈ ಕುರಿತು ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಕೇರಳದಲ್ಲಿ ಈ ಅನಾಹುತವನ್ನು ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಅನುಮತಿಸುವುದಿಲ್ಲ” ಎಂದು ತಿಳಿಸಿದ್ದಾರೆ.

ಸಿಎಎ ಜಾರಿಯನ್ನು ವಿರೋಧಿಸಿ 2019 ರಲ್ಲಿ ದೇಶದಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದವು. ಸಿಎಎ ಜಾರಿಯನ್ನು ಕಾನೂನಾತ್ಮಕವಾಗಿ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿದ ಮೊದಲ ರಾಜ್ಯ ಕೇರಳ.

error: Content is protected !! Not allowed copy content from janadhvani.com