janadhvani

Kannada Online News Paper

ಅಮೆರಿಕಾದ 46 ನೇ ಅಧ್ಯಕ್ಷರಾಗಿ ಜೋ ಬಿಡೆನ್ ಪ್ರಮಾಣ ವಚನ ಸ್ವೀಕಾರ

ವಾಷಿಂಗ್ಟನ್: ಜೋ ಬಿಡನ್ ಅವರು ಅಮೆರಿಕಾದ 46 ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು.ಜಮೈಕಾ ಮತ್ತು ಭಾರತ ಮೂಲದ ಕಮಲಾ ಹ್ಯಾರಿಸ್ ಅವರು ಬುಧವಾರ ಕ್ಯಾಪಿಟಲ್‌ನಲ್ಲಿ ನೂತನ ಉಪಾಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು.ಕಮಲಾ ಹ್ಯಾರಿಸ್ ಅವರು ಈ ಸ್ಥಾನಕ್ಕೆ ಏರಿದ ಮೊದಲ ಮಹಿಳೆ ಮತ್ತು ಮೊದಲ ಏಷ್ಯನ್ ಅಮೆರಿಕನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿ ಮಾತನಾಡಿದ ಜೋ ಬಿಡನ್, ಪ್ರಜಾಪ್ರಭುತ್ವ ಅಮೂಲ್ಯವಾದುದು ಎಂದು ಅಮೆರಿಕ ಸಾಬೀತುಪಡಿಸಿದೆ. ಪ್ರಜಾಪ್ರಭುತ್ವ ಮಾತ್ರ ನೆಲೆ ನಿಲ್ಲಲಿದೆ.ಅಮೆರಿಕದ ಪ್ರಜಾಪ್ರಭುತ್ವ ವಿಶ್ವಕ್ಕೆ ಮಾದರಿಯಾಗಿದ್ದು, ನಾವು ಈ ಪ್ರಜಾಪ್ರಭುತ್ವದ ಆತ್ಮವನ್ನು ಸರಿಪಡಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದೇವೆ ಎಂದು ಜೋ ಬಿಡೆನ್ ಹೇಳಿದರು.

ನಾನು ಎಲ್ಲ ಅಮೆರಿಕನ್ನರ ಅಧ್ಯಕ್ಷ ಎಂದು ಘೋಷಿಸಿದ ಜೋ ಬಿಡೆನ್, ತಮ್ಮ ಆಡಳಿತದಲ್ಲಿ ಎಲ್ಲರೂ ಸಮಾನರು ಎಂದು ನುಡಿದರು. ನಾವೆಲ್ಲರೂ ಸೇರಿ ಈ ದೇಶವನ್ನು ಮುನ್ನಡಸೋಣ ಎಂದು ಜೋ ಬಿಡೆನ್ ಅಮೆರಿಕನ್ನರಿಗೆ ಕರೆ ನೀಡಿದರು.

ಅಮೆರಿಕ ಕಳೆದ ನಾಲ್ಕು ವರ್ಷಗಳಲ್ಲಿ ಅತ್ಯಂತ ಘಾತಕ ಕ್ಷಣಗಳನ್ನು ಎದುರಿಸಿದೆ. ನಮ್ಮ ಪ್ರಜಾಪ್ರಭುತ್ವ ಮೌಲ್ಯಗಳ ಮೇಲೆ ನಡೆದ ದಾಳಿಯನ್ನು ನಾವು ದಿಟ್ಟತನದಿಂದ ಎದುರಿಸಿದ್ದೇವೆ ಎಂದು ಜೋ ಬಿಡೆನ್ ಹೇಳಿದರು.
ಅಮೆರಿಕದ ಪ್ರಜಾಪ್ರಭುತ್ವ ಮೌಲ್ಯಗಳನ್ನು ಯಾರಿಂದಲೂ ಕಸಿಯಲು ಸಾಧ್ಯವಿಲ್ಲ. ಈ ಮೌಲ್ಯಗಳ ಆಧಾರದ ಮೇಲೆಯೇ ನಾವು ಮುನ್ನೆಡೆಯಲಿದ್ದೇವೆ ಎಂದು ಜೋ ಬಿಡೆನ್ ಹೇಳಿದರು.

ಕೋವಿಡ್ ಅನೇಕ ಜೀವಗಳನ್ನು ತೆಗೆದುಕೊಂಡಿದೆ. ಹಲವರು ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಸವಾಲುಗಳನ್ನು ಎದುರಿಸಲು ದೇಶ ಸಿದ್ಧವಾಗಿದೆ. ವರ್ಣಭೇದ ನೀತಿ ಮತ್ತು ದೇಶೀಯ ಭಯೋತ್ಪಾದನೆ ವಿರುದ್ಧ ನಾವು ಒಗ್ಗಟ್ಟಾಗಿ ನಿಲ್ಲಬೇಕು ಎಂದು ಬಿಡೆನ್ ಹೇಳಿದರು.

ಬುಧವಾರ ನಿಯೋಜಿತ ಪ್ರಥಮ ಮಹಿಳೆ ಜಿಲ್ ಬಿಡೆನ್ ಅವರೊಂದಿಗೆ ಸೇಂಟ್ ಮ್ಯಾಥ್ಯೂ ದಿ ಅಪೊಸ್ತಲ್ನ ವಾಷಿಂಗ್ಟನ್ ಕ್ಯಾಥೆಡ್ರಲ್ನಲ್ಲಿ ಸೇವೆಗೆ ಹಾಜರಾದರು.’ಇದು ಅಮೆರಿಕದಲ್ಲಿ ಹೊಸ ದಿನ ಎಂದು ಅವರು ಟ್ವೀಟ್ ಮಾಡಿದ್ದರು.78 ರ ಹರೆಯದ ಬಿಡೆನ್ ವಾಷಿಂಗ್ಟನ್‌ನಲ್ಲಿ ನಡೆದ ಸ್ಕೇಲ್-ಬ್ಯಾಕ್ ಸಮಾರಂಭದಲ್ಲಿ ಅಮೆರಿಕಾದ ಇತಿಹಾಸದಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಅತ್ಯಂತ್ಯ ಹಿರಿಯ ವ್ಯಕ್ತಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

error: Content is protected !! Not allowed copy content from janadhvani.com