janadhvani

Kannada Online News Paper

ಅತ್ಯಾಚಾರ: ಉಳ್ಳಾಲ ಎಸ್ಡಿಪಿಐ ಅಧ್ಯಕ್ಷನ ವಿರುದ್ಧ ಪೋಕ್ಸೊ ಕೇಸ್

ಮಂಗಳೂರು: ಇಲ್ಲಿನ ಹೊರವಲಯದ ಉಳ್ಳಾಲದಲ್ಲಿ ಮಹಿಳೆಯ ಮೇಲೆ ನಿರಂತರ ಅತ್ಯಾಚಾರ ಮತ್ತು ಕಿರುಕುಳ ನೀಡಿರುವುದಾಗಿ ಆರೋಪ ಕೇಳಿ ಬಂದಿದ್ದು SDPI ಮುಖಂಡ ಸಿದ್ದೀಖ್ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪೋಕ್ಸೊ ಕೇಸ್ ದಾಖಲಾಗಿದೆ.

ಉಳ್ಳಾಲ ಕ್ಷೇತ್ರ ಸಮಿತಿಯ ಅಧ್ಯಕ್ಷನಾಗಿರುವ ಸಿದ್ದೀಖ್ನಿಂದ ಕಿರುಕುಳಕ್ಕೆ ಒಳಗಾದ ಮಹಿಳೆ,ಗಂಡನಿಂದ ಹಾಗೂ ಮನೆಯಿಂದ ಹೊರ ಹಾಕಲ್ಪಟ್ಟಿದ್ದಳು. ಹೀಗಾಗಿ ಮಹಿಳೆಗೆ ಸಹಾಯ ಮಾಡುವ ನೆಪದಲ್ಲಿ ಸಿದ್ದೀಖ್, ಮಹಿಳೆಯನ್ನು ಪರಿಚಯ ಮಾಡಿಕೊಂಡಿದ್ದ. ಬಳಿಕ ಆಕೆ ಮೇಲೆ ನಿರಂತರ ಅತ್ಯಾಚಾರವೆಸಗಿದ್ದಾನೆ.

ಆಕೆಯ 9ಮತ್ತು 6ವರ್ಷದ ಇಬ್ಬರು ಹೆಣ್ಣುಮಕ್ಕಳಿಗೂ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಸಿದ್ದೀಖ್ ವಿರುದ್ಧ ಅತ್ಯಾಚಾರ, ಪೋಕ್ಸೊ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದಾನೆ. ಪೊಲೀಸರು ಸಿದ್ದೀಖ್ಗಾಗಿ ಬಲೆ ಬೀಸಿದ್ದಾರೆ.

ತಪ್ಪಿತಸ್ಥನಿಗೆ ತಕ್ಕ ಶಿಕ್ಷೆಯಾಗಲಿ – ಎಸ್ಡಿಪಿಐ

ಮಂಗಳೂರು: ಉಳ್ಳಾಲದಲ್ಲಿ ಮಹಿಳೆಗೆ ಎಸ್‌ಡಿಪಿಐ ಅಧ್ಯಕ್ಷ ಸಿದ್ದೀಕ್ ಎಂಬಾತ ಕಿರುಕುಳ ನೀಡಿದ್ದಾನೆಂದು ಪತ್ರಿಕೆಗಳಲ್ಲಿ ವರದಿಯಾಗುತ್ತಿದ್ದು ಸಿದ್ದೀಕ್ ಎಂಬಾತ ಎಸ್‌ಡಿಪಿಐಯ ಅಧ್ಯಕ್ಷನಲ್ಲ ಆತ ಸಾಮಾನ್ಯ ಕಾರ್ಯಕರ್ತನಾಗಿದ್ದಾನೆ, ಎ.ಆರ್.ಅಬ್ಬಾಸ್ ಎಂಬವರು ಉಳ್ಳಾಲ ನಗರ ಸಮಿತಿಯ ಅಧ್ಯಕ್ಷರಾಗಿದ್ದಾರೆ.

ಇದರ ಬಗ್ಗೆ ಪಕ್ಷದ ಆಂತರಿಕ ತನಿಖೆ ನಡೆಸಲು ಸಮಿತಿಯನ್ನು ರಚಿಸಲಾಗಿದ್ದು, ವಾಸ್ತವಾಂಶ ತಿಳಿಯಲು ಆತ ಇದುವರೆಗೂ ನಮ್ಮ ಸಂಪರ್ಕಕ್ಕೆ ಲಭ್ಯವಾಗಿಲ್ಲ,ಒಂದು ವೇಳೆ ಆತ ತಪ್ಪಿತಸ್ಥನಾಗಿದ್ದರೆ ಆತ ನಮ್ಮ ಕಾರ್ಯಕರ್ತ ಎಂದುಕೊಂಡು ಯಾವುದೇ ಕಾರಣಕ್ಕೂ ಆತನನ್ನು ನಮ್ಮ ಪಕ್ಷ ಬೆಂಬಲಿಸುವುದಿಲ್ಲ, ಹಾಗೂ ಯಾವುದೇ ರೀತಿಯ ಸಹಾಯವನ್ನು ಮಾಡುವುದಿಲ್ಲ ಹಾಗೂ ಪೋಲಿಸ್ ಇಲಾಖೆ ಆತನ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇವೆ.

ಅದೇ ರೀತಿ ಪೋಲಿಸ್ ಇಲಾಖೆ ಕೂಡ ಎರಡೂ ಕಡೆಯಿಂದಲೂ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಹಿಳೆಯರನ್ನು ಉಪಯೋಗಿಸಿಕೊಂಡು ಹನಿಟ್ರಾಪ್ ಮತ್ತು ಯುವಕರ ಫೋಟೋ ತೆಗೆದು ಬ್ಲಾಕ್ ಮೇಲ್ ನಡೆಸಲಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆ ದೃಷ್ಟಿಕೋನವನ್ನು ಇಟ್ಟುಕೊಂಡು ಕೂಡ ಪೋಲಿಸ್ ಇಲಾಖೆ ತನಿಖೆ ನಡೆಸಬೇಕು. ಅಂತಹ ಷಡ್ಯಂತರಕ್ಕೆ ಈತ ಬಲಿಯಾಗಿದ್ದಾನೆಯೇ ಎಂದು ತನಿಖೆಯಿಂದ ಗೊತ್ತಾಗಬೇಕಿದೆ ಎಂದು ಎಸ್‌ಡಿಪಿಐ ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಅಬ್ಬಾಸ್ ಕಿನ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com