janadhvani

Kannada Online News Paper

ಟ್ರಂಪ್‌ ವಿದಾಯ ಭಾಷಣ- ಹೊಸ ಸರ್ಕಾರಕ್ಕೆ ಶುಭ ಹಾರೈಕೆ

ವಾಷಿಂಗ್ಟನ್‌: ಅಮೆರಿಕ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಮಂಗಳವಾರ ವಿದಾಯ ಭಾಷಣ ಮಾಡಿದ್ದು, ಭಾವಿ ಅಧ್ಯಕ್ಷರಿಗೆ ಶುಭ ಕೋರಿದ್ದಾರೆ. ಆದರೆ ಎಲ್ಲೂ ಜೋ ಬಿಡೆನ್‌ ಅವರ ಹೆಸರು ಪ್ರಸ್ತಾಪ ಮಾಡಲಿಲ್ಲ.

ರೆಕಾರ್ಡ್‌ ಮಾಡಲಾದ ಅವರ ಭಾಷಣವನ್ನು ಶ್ವೇತ ಭವನ ಬಿಡುಗಡೆ ಮಾಡಿದೆ. ಈ ವಾರ ದೇಶದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬರಲಿದೆ. ಅವರಿಗೆ ನಾನು ಶುಭ ಕೋರುತ್ತೇನೆ. ಸುರಕ್ಷಿತ ಹಾಗೂ ಅಭಿವೃದ್ಧಿಯಾಗುತ್ತಿರುವ ಅಮೆರಿಕವನ್ನು ಮುಂದುವರಿಸಿಕೊಂಡು ಹೋಗಲಿ ಎಂದು ಹಾರೈಸುತ್ತೇನೆ ಎಂದು ಹೇಳಿದ್ದಾರೆ.

ಇದೇ ವೇಳೆ ತಮ್ಮದೇ ರಿಪಬ್ಲಿಕನ್‌ ಪಕ್ಷದ ಸದಸ್ಯರೇ ತಮ್ಮ ವಿರುದ್ಧ ವಾಗ್ದಂಡನೆ ನಿರ್ಣಯದಲ್ಲಿ ಪಾಲ್ಗೊಂಡಿದ್ದಕ್ಕೆ ಬೇಸರ ವ್ಯಕ್ತ ಪಡಿಸಿರುವ ಅವರು, ನಮ್ಮವರ ನಂಬಿಕೆಯನ್ನು ಕಳೆದುಕೊಳ್ಳುವುದೇ ದೊಡ್ಡ ಅಪಾಯ ಎಂದು ಹೇಳಿದ್ದಾರೆ.

ತಮ್ಮ ಅಧಿಕಾರವಧಿಯಲ್ಲಿ ತೆಗೆದುಕೊಂಡಿರುವ ನಿರ್ಣಯಗಳನ್ನು ಸಮರ್ಥಿಸಿಕೊಂಡಿರುವ ಅವರು, ನಾನು ಏನು ಮಾಡಬೇಕೆಂದಿದ್ದೇವೋ ಅದಕ್ಕಿಂತ ಹೆಚ್ಚಿನದ್ದೇ ಮಾಡಿದ್ದೇವೆ. ಕಠಿಣ ವೇಳೆಯಲ್ಲಿ ನಾನು ಅಧಿಕಾರ ಸ್ವೀಕರಿಸಿದೆ. ಯುದ್ಧ ಸನ್ನಿವೇಶ ಇತ್ತು. ಇವೆಲ್ಲವನ್ನೂ ನಿಭಾಯಿಸಿಲೆಂದೇ ನನ್ನನ್ನು ಆಯ್ಕೆ ಮಾಡಿದ್ದೀರಿ. ನಾನು ಅದನ್ನು ಮಾಡಿದ್ದೇನೆ ಎಂದರು.

ನಮ್ಮ ಸ್ನೇಹಿತ ರಾಷ್ಟ್ರಗಳೊಂದಿಗಿನ ಸಂಬಂಧವನ್ನು ನನ್ನ ಅವಧಿಯಲ್ಲಿ ಮತ್ತೆ ಪುನಶ್ಚೇತನಗೊಳಿಸಲಾಯ್ತು. ಈ ಹಿಂದಿನಕ್ಕಿಂತ ಹೆಚ್ಚಾಗಿ ಚೀನಾವನ್ನು ನಿಯಂತ್ರಿಸಲಾಯ್ತು. ಒಂದೂ ಯುದ್ಧವಿಲ್ಲದೇ ಅಧಿಕಾರ ಮುಗಿಸಿದ ಅಧ್ಯಕ್ಷ ಎಂಬ ಹೆಮ್ಮೆ ನನಗಿದೆ ಎಂಟು ಟ್ರಂಪ್‌ ಹೇಳಿದ್ದಾರೆ.

ಅಲ್ಲದೇ ತಮ್ಮ ಬೆಂಬಲಿಗರು ಅಮೆರಿಕ ಸಂಸತ್‌ ಕ್ಯಾಪಿಟಲ್‌ ಹಿಲ್‌ ಮೇಲೆ ನಡೆಸಿದದ ದಾಳಿಯನ್ನು ಖಂಡಿಸಿರುವ ಅವರು, ಆ ದಾಳಿ ಎಲ್ಲಾ ಅಮೆರಿಕನ್ನರಲ್ಲಿ ದಿಗ್ಭ್ರಮೆ ಹುಟ್ಟಿಸಿದೆ. ಇಂಥ ರಾಜಕೀಯ ದಾಳಿಯನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.

ಬುಧವಾರ ಮಧ್ಯಾಹ್ನ ನಾನು ಅಧಿಕಾರ ಹಸ್ತಾಂತರಿಸಲಿದ್ದೇನೆ.ಈ ಚಳುವಳಿ ಈಗ ಪ್ರಾರಂಭ ಅಷ್ಟೇ. ನಾನು ಶ್ವೇತ ಭವನದಿಂದ ಸಂತೋಷ ಹಾಗೂ ಹೊಸ ಉತ್ಸಾಹದೊಂದಿಗೆ ನಿರ್ಗಮಿಸುತ್ತಿದ್ದೇನೆ ಎಂದು ಹೇಳಿದ್ದಾರೆ

error: Content is protected !! Not allowed copy content from janadhvani.com