janadhvani

Kannada Online News Paper

ಪಾಕ್ ಪರ ಘೋಷಣೆ: ನೈಜ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಬೃಹತ್ ಪ್ರತಿಭಟನೆ- ಮುಸ್ಲಿಂ ಒಕ್ಕೂಟ

ಮಂಗಳೂರು: ಉಜಿರೆಯಲ್ಲಿ ಇತ್ತೀಚೆಗೆ ಮತ ಎಣಿಕೆ ಸಂದರ್ಭದಲ್ಲಿ ಸಂಭ್ರಮಿಸಿದ ಬಿಜೆಪಿ ಪಕ್ಷದ ಕಾರ್ಯಕರ್ತರು ಪಾಕಿಸ್ತಾನ ಜಿಂದಾಬಾದ್ ಎಂಬ ದೇಶ ವಿರೋಧಿ ಘೋಷಣೆ ಕೂಗಿದ್ದು, ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಮುಸ್ಲಿಂ ಒಕ್ಕೂಟ ಆಗ್ರಹಿಸಿದೆ.

ಈ ಆರೋಪವನ್ನು ಪ್ರಾದೇಶಿಕ ಪಕ್ಷವೊಂದರ ಕಾರ್ಯಕರ್ತರ ಮೇಲೆ ಕಟ್ಟಿ,ಮೂವರು ಅಮಾಯಕ ಯುವಕರ ಮೇಲೆ ಪೊಲೀಸರು ದೇಶ ದ್ರೋಹ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲು ಕಾರಣರಾಗಿದ್ದು, ಯಸ್.ಡಿ.ಪಿ.ಐ ಪಕ್ಷದ ಕಾರ್ಯಕರ್ತರು ಮುಸ್ಲಿಮ್ ಎಂಬ ಕಾರಣಕ್ಕಾಗಿ ಪೊಲೀಸರು ಯಾವುದೇ ತನಿಖೆ ನಡೆಸದೆ ತಮ್ಮ ಕೋಮು ಮನಸ್ಥಿತಿಯನ್ನು ತೋರಿರುತ್ತಾರೆ.

ಮುಸ್ಲಿಮರು ಹುಟ್ಟು ದೇಶಪ್ರೇಮಿಗಳು. ಈ ದೇಶದ ಸ್ವಾತಂತ್ರ್ಯಕ್ಕಾಗಿ ಸಾವಿರಾರು ಮುಸ್ಲಿಮರು ಪ್ರಾಣ ಕೊಟ್ಟಿದ್ದಾರೆ. ಮುಸ್ಲಿಮರ ದೇಶಪ್ರೇಮವನ್ನು ಪರೀಕ್ಷಿಸುವ ಅಗತ್ಯ ಪೋಲೀಸರಿಗಿಲ್ಲ. ಪ್ರಸ್ತುತ ಉಜಿರೆಯಲ್ಲಿ ಸಂಭವಿಸಿದ ನೈಜ ಘಟನೆಯ ಬಗ್ಗೆ ವಿಡಿಯೋ ವೈರಲಾಗುತ್ತಿದ್ದರೂ ಪೊಲೀಸರು ಮೌನ ವಹಿಸಿರುವುದು ಹಲವಾರು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.

ತಕ್ಷಣ ಪೊಲೀಸರು ನೈಜ ದೇಶದ್ರೋಹಿ ಘೋಷಣಾಕಾರರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು.ಅದಕ್ಕೆ ಮುಂದಾಗದೆ ಮೃದು ಧೋರಣೆ ತೋರುವುದಾದಲ್ಲಿ, ಇದು ಪೊಲೀಸರ ಭಾಗಿದಾರಿಕೆಯಿಂದಲೇ ನಡೆದ ಪೂರ್ವ ಯೋಜಿತವಾದ ಕೃತ್ಯ ಎಂದು ಪರಿಗಣಿಸಬೇಕಾಗುತ್ತದೆ.

ಉನ್ನತ ಪೊಲೀಸ್ ಅಧಿಕಾರಿಗಳು ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಲು ಮುಂದಾಗಬೇಕಿದೆ. ಇಲ್ಲವಾದಲ್ಲಿ ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ಜಿಲ್ಲಾಧ್ಯಕ್ಷರಾದ ಕೆ.ಅಶ್ರಫ್ ( ಮಾಜಿ ಮೇಯರ್) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com