ಯೋಗಿ ಭದ್ರಕೋಟೆ ಛಿದ್ರ; ಗೋರಖ್​ಪುರ ಸಮಾಜವಾದಿ ಪಕ್ಷಕ್ಕೆ

ನವದೆಹಲಿ: ಉತ್ತರ ಪ್ರದೇಶ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿಗೆ ತೀವ್ರ ಮುಖಭಂಗವಾಗಿದ್ದು ಗೋರಖ್​ಪುರ ಹಾಗೂ ಫುಲ್​ಪುರಗಳಲ್ಲಿ ಗೆಲುವು ಸಮಾಜವಾದಿ ಪಕ್ಷದ ಪಾಲಾಗಿದೆ.

19 ವರ್ಷಗಳಿಂದ ಬಿಜೆಪಿ ವಶದಲ್ಲಿದ್ದ, ಯೋಗಿ ಆದಿತ್ಯನಾಥ ಅವರ ಭದ್ರಕೋಟೆ ಎನಿಸಿದ್ದ ಗೋರಖ್​ಪುರ ಸಮಾಜವಾದಿ ಪಕ್ಷಕ್ಕೆ ಸೇರಿದೆ. ಸಮಾಜವಾದಿ ಪಕ್ಷ (ಎಸ್​ಪಿ) ಹಾಗೂ ಬಹುಜನ ಸಮಾಜ ಪಕ್ಷ (ಬಿಎಸ್​ಪಿ)ದ ರಾಜಕೀಯ ಸಮೀಕರಣದ ಮೈತ್ರಿಯಿಂದಾಗಿ ಬಿಜೆಪಿಗೆ ಸೋಲಾಗಿದೆ.

ಗೋರಖ್​ಪುರದಲ್ಲಿ 25ನೇ ಸುತ್ತಿನ ಮತ ಎಣಿಕೆ ಹೊತ್ತಿಗೆ ಸಮಾಜವಾದಿ ಪಕ್ಷದ ಪ್ರವೀಣ್​ಕುಮಾರ್​ ನಿಶಾದ್​ ಬಿಜೆಪಿಯ ಉಪೇಂದ್ರ ದತ್ತ ಶುಕ್ಲಾ ವಿರುದ್ಧ 22, 594 ಮತಗಳ ಅಂತರದಿಂದ ಮುನ್ನಡೆ ಸಾಧಿಸಿ 3, 77, 146 ಮತ ಗಳಿಸಿದ್ದಾರೆ. ಇನ್ನು ಉಪೇಂದ್ರ ದತ್ತ 3,54,192 ಮತಗಳನ್ನು ಪಡೆದಿದ್ದರು.

ಇನ್ನು ಫುಲ್​ಪುರದಲ್ಲಿ 28ನೇ ಸುತ್ತಿನ ಮತ ಎಣಿಕೆ ಹೊತ್ತಿಗೆ ಸಮಾಜವಾದಿಯ ಪ್ರತಾಪ್​ ಸಿಂಗ್​ ಪಟೇಲ್​ ಬಿಜೆಪಿಯ ಕೌಶಲೇಂದ್ರ ಸಿಂಗ್​ ಪಟೇಲ್​ ಅವರನ್ನು 47, 351 ಮತಗಳ ಅಂತರದಿಂದ ಮಣಿಸಿ 3, 05, 172 ವೋಟುಗಳನ್ನು ಹೊಂದಿದ್ದರು. ಕೌಶಲೇಂದ್ರ ಸಿಂಗ್​ ಪಟೇಲ್​ ಅವರು 2, 57, 821 ಮತ ಗಳಿಸಿದ್ದರು. ಎರಡೂ ಕ್ಷೇತ್ರದ ಗೆಲುವಿನ ನಂತರ ಸಮಾಜವಾದಿ ಪಕ್ಷದ ಮುಖಂಡರು ಭರ್ಜರಿ ವಿಜಯೋತ್ಸವ ಆಚರಿಸಿದ್ದಾರೆ.

2014ರ ಲೋಕಸಭಾ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ ಅವರು ಮೂರು ಲಕ್ಷಕ್ಕಿಂತಲೂ ಹೆಚ್ಚು ಮತ ಪಡೆದು ಗೆಲುವು ಸಾಧಿಸಿದ ಕ್ಷೇತ್ರವಾಗಿದೆ ಗೋರಖಪುರ. ಉಪ ಮುಖ್ಯಮಂತ್ರಿಯಾಗಿದ್ದ ಕೇಶವ್ ಪ್ರಸಾದ್ ಮೌರ್ಯ  ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕಾರಣ ಫುಲ್‌‍ಪುರ್‍‍ನಲ್ಲಿ ಉಪ ಚುನಾವಣೆ ನಡೆದಿತ್ತು.

ಮಾಧ್ಯಮದವರಿಗೆ ತಡೆ
ಗೋರಖಪುರ ವಿಶ್ವವಿದ್ಯಾನಿಲಯದ ಕಾಮರ್ಸ್ ವಿಭಾಗ ಕಟ್ಟಡದಲ್ಲಿ ಮತ ಎಣಿಕೆ ನಡೆಯುತ್ತಿದೆ. ಆದರೆ ಇಲ್ಲಿ ಆಸುಪಾಸು ಮಾಧ್ಯಮದವರಿಗೆ ಪ್ರವೇಶಾನುಮತಿ ಇಲ್ಲ.  ವಿಶೇಷ ಚುನಾವಣಾ ಆಯೋಗದ ಗುರುತಿನ ಚೀಟಿ ಹೊಂದಿದ ಮಾಧ್ಯಮದವರು ಮತ ಎಣಿಕೆ ಸುದ್ದಿಯನ್ನು ವರದಿ ಮಾಡಬಹುದಾದರೂ ಮತ ಎಣಿಕೆ ಪ್ರದೇಶದಿಂದ 15 ಅಡಿ ದೂರದಲ್ಲಿರುವಂತೆ ಮಾಧ್ಯಮದವರಿಗೆ ಸೂಚಿಸಲಾಗಿದೆ. ಇಷ್ಟು ದೂರದಿಂದ ಮತ ಎಣಿಕೆ ಪ್ರಕ್ರಿಯೆ ಸರಿಯಾಗಿ ಕಾಣಿಸುವುದಿಲ್ಲ. ಅಷ್ಟೇ ಅಲ್ಲದೆ ಪರದೆಗಳನ್ನು ಹಾಕಿ ಮಾಧ್ಯಮದವರಿಗೆ ಏನೂ ಕಾಣದಂತೆ ತಡೆಯೊಡ್ಡವಾಗಿದೆ.

Leave a Reply

Your email address will not be published. Required fields are marked *

error: Content is protected !!