janadhvani

Kannada Online News Paper

ಮೊದಲ ಹಂತದ ಗ್ರಾಮ ಪಂಚಾಯ್ತಿ ಚುನಾವಣೆ- ಬಹುತೇಕ ಶಾಂತಿಯುತ

ಬೆಂಗಳೂರು,ಡಿ.22- ಕೋವಿಡ್ ಆತಂಕದ ನಡುವೆ ರಾಜ್ಯದಲ್ಲಿ ಗ್ರಾಮ ಪಂಚಾಯ್ತಿಗಳ ಮೊದಲ ಹಂತದ ಚುನಾವಣೆಯ ಮತದಾನ ಇಂದು ಬಿರುಸಾಗಿತ್ತು. ಅಲ್ಲಲ್ಲಿ ಮಾತಿನ ಚಕಮಕಿ, ಅಭ್ಯರ್ಥಿಗಳ ನಡುವೆ ಪರಸ್ಪರ ಆರೋಪ, ಪ್ರತ್ಯಾರೋಪ, ತಳ್ಳಾಟ-ನೂಕಾಟ, ಮತಪತ್ರಗಳ ದೋಷದಿಂದ ಹಲವೆಡೆ ಮತದಾನ ಸ್ಥಗಿತ, ಗುಂಪು ಚದುರಿಸಲು ಪೊಲೀಸರಿಂದ ಲಘು ಲಾಠಿ ಪ್ರಹಾರದಂತಹ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ 30 ಜಿಲ್ಲೆಗಳ 117 ತಾಲ್ಲೂಕುಗಳ 3,019 ಗ್ರಾಪಂಚಾಯ್ತಿಗಳಿಗೆ ನಡೆದ ಮತದಾನ ಬಹುತೇಕ ಶಾಂತಿಯುತವಾಗಿತ್ತು.

ಗ್ರಾಮಪಂಚಾಯ್ತಿಗಳ 43,238 ಸ್ಥಾನಗಳಿಗೆ ಸ್ಪರ್ಧಿಸಿದ್ದ 1,17,383 ಅಭ್ಯರ್ಥಿಗಳ ಹಣೆಬರಹವನ್ನು ಮತದಾರರು ತಮ್ಮ ಹಕ್ಕು ಚಲಾಯಿಸುವ ಮೂಲಕ ನಿರ್ಧಾರ ಮಾಡಿದ್ದಾರೆ. ಇಂದು ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಆರಂಭಗೊಂಡಿದ್ದು, ಮತಗಟ್ಟೆಗಳ ಬಳಿ ಮತದಾರರು ಸರತಿಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದ ದೃಶ್ಯ ಬಹಳಷ್ಟು ಕಡೆ ಕಂಡುಬಂದಿತು.

ಕೆಲವೆಡೆ ಮತದಾರರ ಉತ್ಸಾಹವಿಲ್ಲದೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಕಂಡುಬಂದಿತು. ದೈನಂದಿನ ಕೃಷಿ ಕೆಲಸಕ್ಕೆ ಹಾಗೂ ಇತರೆ ಉದ್ಯೋಗಗಳಿಗೆ ತೆರಳುವವರು ಬೆಳಗ್ಗೆ ಮತಗಟ್ಟೆಗಳಿಗೆ ಬಂದು ಮತದಾನ ಚಲಾಯಿಸುತ್ತಿದ್ದರು. ಸಂಸದರು, ಶಾಸಕರು, ಮಾಜಿ ಶಾಸಕರು, ವಿಧಾನಪರಿಷತ್ ಸದಸ್ಯರು, ಜನಪ್ರತಿನಿಧಿಗಳು, ಮಠಾಧೀಶರು ಸೇರಿದಂತೆ ಗಣ್ಯರು ಕೂಡ ಇಂದು ಮತ ಚಲಾಯಿಸಿದರು.

ಮೊದಲ ಹಂತದಲ್ಲಿ 1,64,550 ನಾಮಪತ್ರ ಸಲ್ಲಿಕೆಯಾಗಿದ್ದವು. 40,352 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಹಿಂದಕ್ಕೆ ಪಡೆದಿದ್ದರು. 432 ಸ್ಥಾನಗಳಿಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸದೆ ಖಾಲಿ ಉಳಿದಿವೆ. 4,377 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬೀದರ್ ಜಿಲ್ಲೆಯಲ್ಲಿ ಮಾತ್ರ ಪ್ರಾಯೋಗಿಕವಾಗಿ ವಿದ್ಯುನ್ಮಾನ ಮತಯಂತ್ರ(ಇವಿಎಂ) ಬಳಕೆ ಮಾಡಿದ್ದು, ಉಳಿದೆಡೆ ಮತಪತ್ರಗಳ ಮೂಲಕವೇ ಮತದಾನ ನಡೆಯಿತು.

ರಾಜ್ಯದಲ್ಲಿ 5847 ಚುನಾವಣಾ ಅಧಿಕಾರಿ ಹಾಗೂ 6085 ಸಹಾಯಕ ಚುನಾವಣಾ ಅಧಿಕಾರಿಗಳನ್ನು ರಾಜ್ಯ ಚುನಾವಣಾ ಆಯೋಗ ನಿಯೋಜಿಸಿತ್ತು. ಇಂದು ನಡೆದ ಮತದಾನದ ಮತ ಎಣಿಕೆ ಡಿ.30ರಂದು ಆಯಾ ತಾಲ್ಲೂಕು ಕೇಂದ್ರಗಳಲ್ಲಿ ನಡೆಯಲಿದ್ದು, ಅಂದೇ ಫಲಿತಾಂಶವೂ ಹೊರಬೀಳಲಿದೆ.

ಬಂದೋಬಸ್ತ್: ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಮೊದಲ ಹಂತದ ಚುನಾವಣೆಗೆ 40 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. 111 ಕೆಎಸ್‍ಆರ್‍ಪಿ ಫ್ಲಟೂನ್, ಡಿವೈಎಸ್ಪಿ, ಇನ್‍ಸ್ಪೆಕ್ಟರ್, ಸಬ್‍ಇನ್‍ಸ್ಪೆಕ್ಟರ್, ಎಎಸ್‍ಐ ಸೇರಿದಂತೆ 1746 ಅಧಿಕಾರಿಗಳು, 5369 ಪೊಲೀಸ್ ಕಾನ್‍ಸ್ಟೆಬಲ್‍ಗಳು, 10969 ಹೋಂ ಗಾಡ್ರ್ಸ್‍ಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿತ್ತು. ರಾಜ್ಯಾದ್ಯಂತ ಬಹುತೇಕ ಶಾಂತಿಯುತ ಚುನಾವಣೆ ನಡೆದಿದೆ.

error: Content is protected !! Not allowed copy content from janadhvani.com