janadhvani

Kannada Online News Paper

ಸೌದಿ ಅಂತಾರಾಷ್ಟ್ರ ವಿಮಾನ ಸೇವೆ: ಪಟ್ಟಿ ಪ್ರಕಟ ವಿಳಂಬ

ಈ ಹಿಂದೆ, ಜನವರಿ 1 ರಿಂದ ದೇಶದಲ್ಲಿ ಅಂತರರಾಷ್ಟ್ರೀಯ ವಿಮಾನಯಾನಗಳನ್ನು ಪ್ರಾರಂಭಿಸಲಾಗುವುದು ಮತ್ತು ಈ ದಿನಾಂಕಕ್ಕೆ 30 ದಿನಗಳ ಮುಂಚಿತವಾಗಿ ವಿವರಗಳನ್ನು ಪ್ರಕಟಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದರು

ರಿಯಾದ್, ಡಿ.2: ಅಂತರರಾಷ್ಟ್ರೀಯ ವಿಮಾನಯಾನ ನಿಷೇಧವನ್ನು ತೆಗೆದುಹಾಕುವ ಕುರಿತ ಘೋಷಣೆ ವಿಳಂಬವಾಗಲಿದೆ ಎಂದು ಸೌದಿ ಆಂತರಿಕ ಸಚಿವಾಲಯ ಪ್ರಕಟಿಸಿದೆ. ನಿಷೇಧವನ್ನು ತೆಗೆದುಹಾಕುವ ಬಗ್ಗೆ ಇಂದು ನಿರ್ಣಾಯಕ ಪ್ರಕಟಣೆ ನೀಡಲಾಗುವುದು ಎಂಬ ಸೂಚನೆಗಳಿತ್ತು. ಇದರನ್ವಯ ಗೃಹ ಸಚಿವಾಲಯವು ಇಂದು ಸ್ಪಷ್ಟೀಕರಿಸಿದೆ.

ಈ ಹಿಂದೆ, ಜನವರಿ 1 ರಿಂದ ದೇಶದಲ್ಲಿ ಅಂತರರಾಷ್ಟ್ರೀಯ ವಿಮಾನಯಾನಗಳನ್ನು ಪ್ರಾರಂಭಿಸಲಾಗುವುದು ಮತ್ತು ಈ ದಿನಾಂಕಕ್ಕೆ 30 ದಿನಗಳ ಮುಂಚಿತವಾಗಿ ವಿವರಗಳನ್ನು ಪ್ರಕಟಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದರು. ಕೋವಿಡ್ ಪ್ರಕರಣಗಳನ್ನು ಗಣನೆಗೆ ತೆಗೆದುಕೊಂಡು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಆ ಸಮಯದಲ್ಲಿ ತಿಳಿಸಲಾಗಿತ್ತು.

ಆದರೆ, ಇದೀಗ ಆಂತಿಮ ಪಟ್ಟಿಯನ್ನು ನಂತರ ಪ್ರಕಟಿಸಲಾಗುವುದು ಎಂದು ಗೃಹ ಸಚಿವಾಲಯದ ಹೊಸ ಪ್ರಕಟಣೆಯಲ್ಲಿ ತಿಳಿಸಿದೆ. ಅಂತರರಾಷ್ಟ್ರೀಯ ಪ್ರಯಾಣವನ್ನು ಪ್ರಸ್ತುತ ವಿಶೇಷ ರಿಯಾಯಿತಿ ವಿಭಾಗಗಳಿಗೆ ಸೀಮಿತಗೊಳಿಸಲಾಗಿದೆ.

ಸೆಪ್ಟೆಂಬರ್ನಲ್ಲಿ, ಸೌದಿ ಅರೇಬಿಯಾ ತನ್ನ ವಿಮಾನ ಪ್ರಯಾಣ ನಿಷೇಧವನ್ನು ಭಾಗಶಃ ತೆಗೆದುಹಾಕಿತು. ಭಾರತವನ್ನು ಹೊರತುಪಡಿಸಿ ಎಲ್ಲಾ ಸ್ಥಳಗಳಿಗೆ ಸೇವೆಗಳನ್ನು ಭಾಗಶಃ ಪುನರಾರಂಭಿಸಿದೆ. ಆದರೆ, ಜನವರಿಯಲ್ಲಿ ಪೂರ್ಣ ಸೇವೆಯನ್ನು ಪುನರಾರಂಭಿಸುವುದಾಗಿಯೂ, ಡಿಸೆಂಬರ್‌ನಲ್ಲಿ ಅದರ ದಿನಾಂಕವನ್ನು ಪ್ರಕಟಿಸುವುದಾಗಿ ಸೌದಿ ಅರೇಬಿಯಾ ತಿಳಿಸಿತ್ತು. ಈ ನಿಟ್ಟಿನಲ್ಲಿ ಆಂತರಿಕ ಸಚಿವಾಲಯವು ಇಂದು ವಿಮಾನ ಹಾರಾಟದ ನಿಖರವಾದ ದಿನಾಂಕವನ್ನು ಪ್ರಕಟಿಸಲಿದೆ ಎಂದು ಸೌದಿ ಅರೇಬಿಯಾದ ಸ್ಥಳೀಯ ಮಾಧ್ಯಮಗಳು ನಿನ್ನೆ ವರದಿ ಮಾಡಿತ್ತು.

error: Content is protected !! Not allowed copy content from janadhvani.com