janadhvani

Kannada Online News Paper

ಟ್ರಂಪ್ ಚೇತರಿಕೆಗಾಗಿ ಉಪವಾಸ: ತೆಲಂಗಾಣದ ಟ್ರಂಪ್ ಭಕ್ತ ಸಾವು

ತೆಲಂಗಾಣ ,ಅಕ್ಟೋಬರ್​ 12: ಕೊರೋನಾ ಸೋಂಕು ತಗುಲಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಶೀಘ್ರವಾಗಿ ಚೇತರಿಕೆಯಾಗಲಿ ಎಂದು ಅಪ್ಪಟ ಅಭಿಮಾನಿಯಾಗಿದ್ದ ತೆಲಂಗಾಣದ ವ್ಯಕ್ತಿಯೊಬ್ಬ ಪ್ರತಿನಿತ್ಯ ಪ್ರಾರ್ಥನೆ, ವ್ರತ ಮತ್ತು ಉಪವಾಸ ಮಾಡುತ್ತಿದ್ದ ವ್ಯಕ್ತಿ ಇದೇ ಕಾರಣದಿಂದಾಗಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ. ಡೊನಾಲ್ಡ್​ ಟ್ರಂಪ್ ಇತ್ತೀಚೆಗೆ ಕೊರೋನಾ ಸೋಂಕಿಗೆ ತುತ್ತಾಗಿದ್ದರು. ಹೀಗಾಗಿ ಆಸ್ಪತ್ರೆಗೆ ದಾಖಲಾಗಿ ಸೂಕ್ತ ಚಿಕಿತ್ಸೆಯನ್ನು ಪಡೆದಿದ್ದರು. ಈ ಕುರಿತು ಸ್ವತಃ ಅವರೇ ಟ್ವೀಟ್​ ಮೂಲಕ ಮಾಹಿತಿ ನೀಡಿದ್ದರು. ಆದರೆ, ತೆಲಂಗಾಣದ ಅಭಿಮಾನಿಯೊಬ್ಬ ಟ್ರಂಪ್​ ಚೇತರಿಕೆಗಾಗಿ ವ್ರತ ಉಪವಾಸವಿದ್ದ ಕಾರಣ ಮೃತಪಟ್ಟಿರುವ ಸುದ್ದಿ ಇದೀಗ ರಾಷ್ಟ್ರ ಮಟ್ಟದಲ್ಲಿ ಭಾರೀ ಸದ್ದು ಮಾಡುತ್ತಿದೆ.

ತೆಲಂಗಾಣದ ಮೆದಕ್‌ನ ನಿವಾಸಿಯಾದ ರೈತ ಬುಸ್ಸಾ ಕೃಷ್ಣರಾಜು ಮೃತ ದುರ್ದೈವಿ. ಈತ ಟ್ರಂಪ್‌ಗೆ ಕೊರೋನಾ ಸೋಂಕು ತಗುಲಿದ ನಂತರ ಆಘಾತಕ್ಕೊಳಗಾಗಿದ್ದರು. ಅವರಿಗಾಗಿ ಮೌನ ವ್ರತ, ಪೂಜೆಯೊಂದಿಗೆ ಉಪವಾಸ ಸಹ ಆರಂಭಿಸಿದ್ದರು ಎಂದು ಅವರ ನಿಕಟವರ್ತಿಗಳು ತಿಳಿಸಿದ್ದಾರೆ. ಇದೇ ಕಾರಣಕ್ಕೆ ಅವರಿಗೆ ಹೃದಯಾಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಇದೇ ವ್ಯಕ್ತಿ ಈ ಹಿಂದೆಯೇ ಆರು ಅಡಿ ಎತ್ತರದ ಡೋನಾಲ್ಡ್ ಟ್ರಂಪ್ ಪ್ರತಿಮೆ ಸ್ಥಾಪಿಸಿ ನಿತ್ಯ ಪೂಜೆ ಮಾಡುವು ಮೂಲಕ ಗಮನಸೆಳೆದಿದ್ದರು. ಇವರು ಟ್ರಂಪ್‌ರವರ ಅಪ್ಪಟ ಭಕ್ತ, ಅಭಿಮಾನಿಯಾಗಿದ್ದರು ಎಂದು ಅವರ ಸ್ನೇಹಿತರು ತಿಳಿಸಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಯಾರೊಂದಿಗೂ ಮಾತನಾಡದೇ, ಯಾವುದೇ ಆಹಾರ ಸೇವಿಸದೆ ಪ್ರಾರ್ಥನೆಯಲ್ಲಿ ನಿರತನಾಗಿದ್ದ ಬುಸ್ಸಾ ಕೃಷ್ಣರಾಜುರವರು ಭಾನುವಾರ ಹೃದಯಾಘಾತ ಸಂಭವಿಸಿ ಮರಣ ಹೊಂದಿದ್ದಾರೆ. ಇನ್ನೊಂದೆಡೆ ಟ್ರಂಪ್ ಕೊರೋನಾದಿಂದ ಚೇತರಿಸಿಕೊಂಡಿದ್ದಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.

error: Content is protected !! Not allowed copy content from janadhvani.com