janadhvani

Kannada Online News Paper

ಅ.12ರಿಂದ 30 ರವರೆಗೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಮಧ್ಯಂತರ ರಜೆ- ಸಿಎಂ ಘೋಷಣೆ

ಬೆಂಗಳೂರು,ಅ.11:ಕೋವಿಡ್ ವ್ಯಾಪಿಸುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಮಧ್ಯಂತರ ರಜೆ ಘೋಷಿಸಿದೆ. ಅಕ್ಟೋಬರ್ 12ರಿಂದ ಅಕ್ಟೋಬರ್ 30ರವರೆಗೆ ಮಧ್ಯಂತರ ರಜೆ ಘೋಷಿಸಿ ಆದೇಶ ಹೊರಡಿಸಿದೆ. ಈ ಕುರಿತು ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ವಿದ್ಯಾಗಮ ಯೋಜನೆಯನ್ನು ಸ್ಥಗಿತಗೊಳಿಸದಿದ್ದರೆ ಮಂಗಳವಾರ ಅಹೋರಾತ್ರಿ ಧರಣಿ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ವಿದ್ಯಾಗಮ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು.

ಸದ್ಯಕ್ಕೆ ಶಾಲೆಗಳನ್ನು ಆರಂಭ ಮಾಡದಿರಲು ಹಾಗೂ ವಿದ್ಯಾಗಮ ಯೋಜನೆಯನ್ನು ಸ್ಥಗಿತಗೊಳಿಸಲು ನಿರ್ದೇಶನ ನೀಡಲಾಗಿದೆ. ಸದ್ಯಕ್ಕೆ ಇದನ್ನು ಸ್ಥಗಿತಗೊಳಿಸುವಂತೆ ನಿರ್ದೇಶನ ಕೊಡಲಾಗಿದೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಆರೋಗ್ಯದ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿರುವ ಮುಖ್ಯಮಂತ್ರಿ ಯಡಿಯೂರಪ್ಪ ಮಧ್ಯಂತರ ರಜೆ ಹಾಗೂ ವಿದ್ಯಾಗಮ ಯೋಜನೆ ಬಗ್ಗೆ ಅಧಿಕೃತ ಆದೇಶ ಹೊರಡಿಸಿದ್ದಾರೆ. ಅಕ್ಟೋಬರ್ 12ರಿಂದ 30ರ‌ವರೆಗೆ ಮಧ್ಯಂತರ ರಜೆ ನೀಡಿ ಆದೇಶಿಸಲಾಗಿದೆ.

ಮಧ್ಯಂತರ ರಜೆ ಘೋಷಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದ ಹೆಚ್.ಡಿ. ಕುಮಾರಸ್ವಾಮಿ ಅವರ ಒತ್ತಡಕ್ಕೆ ಮಣಿದು, ಸಿಎಂ ಯಡಿಯೂರಪ್ಪ ರಜೆ ಘೋಷಣೆ ಬಗ್ಗೆ ನಿರ್ಧಾರ ಕೈಗೊಂಡಿದ್ದಾರೆ. ನಿನ್ನೆ ವಿದ್ಯಾಗಮ ಯೋಜನೆ ಸ್ಥಗಿತದ ಬಗ್ಗೆ ಒತ್ತಾಯಿಸಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಅವರ ಎರಡು ಬೇಡಿಕೆಗಳೂ ಈಡೇರಿದಂತಾಗಿದೆ.

ಈಗಾಗಲೇ ಕೊರೋನಾ ಸಂಧರ್ಭದಲ್ಲಿ ಅರ್ಧ ಶೈಕ್ಷಣಿಕ ವರ್ಷ ಮುಗಿದಿದೆ. ಶಿಕ್ಷಕರಿಗೆ ಸಿಗಬೇಕಾದ ಸೌಲಭ್ಯಗಳು ಸಿಗಲೇಬೇಕು. ವಿದ್ಯಾರ್ಥಿಗಳಿಗೆ ರಿಯಾಯಿತಿ ಕೊಟ್ಟು ಪಾಸ್ ಮಾಡುವುದರಿಂದ ಏನೂ ಆಗುವುದಿಲ್ಲ. ಪೋಷಕರ, ಮಕ್ಕಳ ಆರೋಗ್ಯದ ದೃಷ್ಟಿಯಿಂದ ಇನ್ನೂ 2-3 ತಿಂಗಳು ಶಾಲೆ ಆರಂಭ ಮಾಡಬಾರದು ಎಂದು ಹೆಚ್.ಡಿ. ಕುಮಾರಸ್ವಾಮಿ ಸಲಹೆ ನೀಡಿದ್ದರು.

error: Content is protected !! Not allowed copy content from janadhvani.com