janadhvani

Kannada Online News Paper

ಅರಿವು ಸಾಲ ವಿಳಂಬ: ವಿದ್ಯಾರ್ಥಿಗಳು ಸಂಕಷ್ಟದಲ್ಲಿ- ಬ್ಯಾರಿ ಸಭಾದಿಂದ ಉಸ್ತುವಾರಿ ಸಚಿವರ ಭೇಟಿ

ಮಂಗಳೂರು,ಅ.06: ಪ್ರಸಕ್ತ 2020 ನೇ ಶೈಕ್ಷಣಿಕ ಸಾಲಿನ ದ.ಕ. ಜಿಲ್ಲೆಯ ವಿದ್ಯಾರ್ಥಿಗಳ ಅರಿವು ಯೋಜನೆಯ ನಿಧಿ ಬಿಡುಗಡೆಗೊಳ್ಳದ ಸಂತ್ರಸ್ತ ಮತ್ತು ಸಂದಿಗ್ಧ ಪರಿಸ್ಥಿತಿಯನ್ನು ಇತ್ಯರ್ಥ ಪಡಿಸುವಂತೆ ಕೋರಿ ಅಖಿಲ ಭಾರತ ಬ್ಯಾರಿ ಮಹಾಸಭಾ ನಿಯೋಗವು ಇಂದು ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಜಿಲ್ಲೆಯ ಅಗಾಧ ವಿದ್ಯಾರ್ಥಿ, ವಿದ್ಯಾರ್ಥಿನಿಗಳು 2020 ನೇ ಸಾಲಿನ ತಮ್ಮ ವಿದ್ಯಾಭ್ಯಾಸಕ್ಕಾಗಿ ಅರಿವು ಯೋಜನೆಯ ಶೈಕ್ಷಣಿಕ ಸಾಲವನ್ನು ಅವಲಂಬಿಸಿದ್ದು, ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಕೋವಿಡ್ 19 ಪರಿಣಾಮದಿಂದ ಸೃಷ್ಟಿಯಾದ ಸಾಮೂಹಿಕ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ತೀವ್ರ ಸಂಕಷ್ಟ ಮತ್ತು ಸಂದಿಗ್ಧತೆಯಲ್ಲಿದೆ.

ಶೈಕ್ಷಣಿಕ ಸಂಸ್ಥೆಗಳು ತಮ್ಮ ಹಾಲಿ ವಿದ್ಯಾರ್ಥಿಗಳಿಗೆ ಶುಲ್ಕ ಪಾವತಿಸುವಂತೆ ಒತ್ತಡ ಹೇರುತ್ತಿದ್ದು, ಅರಿವು ಯೋಜನೆಯ ಫಲಾನುಭವಿಗಳು ಸರ್ಕಾರದ ಸ್ಪಷ್ಟ ಮಾಹಿತಿ ಇಲ್ಲದೆ ಮತ್ತು ಕೋವಿಡ್ ಪರಿಣಾಮಿತ ಆರ್ಥಿಕ ಸಂಕಷ್ಟದಿಂದ ಶಿಕ್ಷಣ ಮುಂದುವರಿಸುವ ಬಗ್ಗೆ ಚಿಂತಿತರಾಗಿದ್ದಾರೆ. ಶೆಕ್ಷಣಿಕ ಇಲಾಖೆ ಮತ್ತು ವಿಶ್ವವಿದ್ಯಾನಿಲಯಗಳ ಸುತ್ತೋಲೆಗಳ ಮಾಹಿತಿಗಳನ್ನು ವ್ಯತ್ಯಯಗೊಳಿಸಿ ಶೈಕ್ಷಣಿಕ ಸಂಸ್ಥೆಗಳು ತಮ್ಮ ವಿದ್ಯಾರ್ಥಿಗಳಿಗೆ ಮತ್ತು ರಕ್ಷಕರಿಗೆ ತಪ್ಪು ಸಂದೇಶ ನೀಡಿ ಶುಲ್ಕ ಪಡೆಯುವಿಕೆಗಾಗಿ ಒತ್ತಡ ಹೇರಲಾಗುತ್ತಿದೆ.

ಈ ಬಗ್ಗೆ ಜಿಲ್ಲಾಡಳಿತ/ ಸರ್ಕಾರ ಮಧ್ಯ ಪ್ರವೇಶಿಸಿ ಶೈಕ್ಷಣಿಕ ಸಂಸ್ಥೆಗಳಿಗೆ, ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಸರ್ಕಾರದ ನಿಲುವನ್ನು ವ್ಯಕ್ತಪಡಿಸಬೇಕಾಗಿಯೂ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಉಪನ್ಯಾಸ ಮತ್ತು ಪರೀಕ್ಷೆಗಳನ್ನು ಮುಂದುವರಿಸಿ ಕೊಂಡು ಹೋಗಲು ಮತ್ತು ಅರಿವು ಬಿಡುಗಡೆಗೊಳ್ಳುವ ವರೆಗೆ ಶುಲ್ಕ ಪಾವತಿಸುವಂತೆ ಪೋಶಕರಿಗೆ ಒತ್ತಡ ಹೇರಬಾರದೆಂದು ಶೈಕ್ಷಣಿಕ ಸಂಸ್ಥೆಗಳಿಗೆ ನಿರ್ದೇಶಿಸಲು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ನಿಯೋಗದಲ್ಲಿ ಬ್ಯಾರಿ ಸಭಾ ಅಧ್ಯಕ್ಷರಾದ ಅಝೀಝ್ ಬೈಕಂಪಾಡಿ, ಸದಸ್ಯರಾದ ಮುಹಮ್ಮದ್ ಹನೀಫ್ ಯು, ಬಷೀರ್ ಹೊಕ್ಕಾಡಿ ಮತ್ತಿತರರು ಉಪಸ್ಥಿತರಿದ್ದರು. ಮನವಿ ಸ್ವೀಕರಿಸಿದ ಉಸ್ತುವಾರಿ ಸಚಿವರು , ಜಿಲ್ಲಾಧಿಕಾರಿ ಮೂಲಕ ಶೈಕ್ಷಣಿಕ ಸಂಸ್ಥೆಗಳಿಗೆ ನಿರ್ದೇಶನ ನೀಡುವ ಭರವಸೆ ನೀಡಿದರು.

error: Content is protected !! Not allowed copy content from janadhvani.com