janadhvani

Kannada Online News Paper

ತಾಜುಲ್ ಫುಖಹಾಅ್ ಉಸ್ತಾದರ ಅಂತಿಮ ದರ್ಶನಕ್ಕೆ ಹರಿದುಬಂದ ಜನಸಾಗರ

ಮಂಗಳೂರು: ಇಂದು ಬೆಳಿಗ್ಗೆ ವಫಾತಾದ ಸುನ್ನೀ ಜಂಇಯ್ಯತುಲ್ ಉಲಮಾ ರಾಜ್ಯಾಧ್ಯಕ್ಷರು, ಉಡುಪಿ,ಚಿಕ್ಕಮಂಗಳೂರು, ಹಾಸನ ಜಿಲ್ಲಾ ಸಂಯುಕ್ತ ಖಾಝಿ,ಸಮಸ್ತ ಕೇಂದ್ರ ಮುಶಾವರ ಸದಸ್ಯರು ತಾಜುಲ್ ಫುಖಹಾಅ್ ಅಲ್ಹಾಜ್ ಪಿ.ಎಂ. ಇಬ್ರಾಹೀಂ ಮುಸ್ಲಿಯಾರ್ ‘ಬೇಕಲ್ ಉಸ್ತಾದ್’ ಅವರ ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದು ಬರುತ್ತಿದೆ.

ನಿಧನ ವಾರ್ತೆ ತಿಳಿದು ಅವರ ಮೊಂಟೆಪದವಿನ ಮನೆಯ ಬಳಿ ಜನಸ್ತೋಮವೇ ಹರಿದು ಬಂತು. ಸುಮಾರು ಹನ್ನೊಂದು ಗಂಟೆಗೆ ಅವರ ಪಾರ್ಥಿವ ಶರೀರವನ್ನು ಮನೆಗೆ ತರಲಾಯಿತು. ಧಾರ್ಮಿಕ ಗುರುಗಳು, ಮುಖಂಡರು, ರಾಜಕೀಯ ಮುಖಂಡರು ಸೇರಿ ಸಾವಿರಾರು ಮಂದಿ ‌ಭೇಟಿ ನೀಡಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಜಿಲ್ಲೆಯ ಬೇರೆ ಬೇರೆ ಕಡೆಯಿಂದ ಸಾವಿರಾರು ಜನರು‌ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ನೂರಾರು ಯುವಕರು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವಾಹನ ನಿಲುಗಡೆಗೂ ಬೇರೆ ಬೇರೆ ಕಡೆಗಳಲ್ಲಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಬೇರೆ ಬೇರೆ ಊರುಗಳಿಂದ ಆಗಮಿಸುತ್ತಿರುವ ಜನರನ್ನು ಅಂತಿಮ ದರ್ಶನ‌ ಪಡೆದ ಬಳಿಕ ಗುಂಪುಗೂಡಲು ಅವಕಾಶ ಕೊಡದೆ ಕಳುಹಿಸುವ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ಸ್ಥಳದಲ್ಲಿ ಕೊಣಾಜೆ‌ ಠಾಣೆ ಪೊಲೀಸರು, ಟ್ರಾಫಿಕ್ ಪೊಲೀಸರು ಕಾರ್ಯ ಪ್ರವೃತ್ತರಾಗಿದ್ದಾರೆ.

ದೇವಬಂದ್ ಅರಬಿಕ್ ಕಾಲೇಜಿನಿಂದ ಪದವಿ ಪಡೆದಿದ್ದ ಅವರು, ಸೂರಿಂಜೆ ಮತ್ತು ಬಂಟ್ವಾಳದ ಜುಮಾ ಮಸೀದಿಗಳಲ್ಲಿ ತಲಾ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಬಳಿಕ ಸುದೀರ್ಘ 43 ವರ್ಷಗಳಿಂದ ಬೇಕಲದಲ್ಲಿ ಮುದರ್ರಿಸ್ ಆಗಿ ಸೇವೆ ಸಲ್ಲಿಸುವ ಮೂಲಕ ‘ಬೇಕಲ್ ಉಸ್ತಾದ್’ ಎಂದೇ ಜನಪ್ರಿಯರಾಗಿದ್ದರು.

ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮದ ಫೂಡಲ್ ಎಂಬಲ್ಲಿನ ಮುಹಮ್ಮದ್ ಮತ್ತು ಖದೀಜಾ ದಂಪತಿಯ ಪುತ್ರನಾಗಿ 1949ರಲ್ಲಿ ಜನಿಸಿದ್ದ ಅವರು ನರಿಂಗಾನ ಗ್ರಾಮದ ಡಿಜಿ ಕಟ್ಟೆಯ ಶಾಲೆಯಲ್ಲಿ 7ನೆ ತರಗತಿ ಕಲಿತ ಬಳಿಕ ಧಾರ್ಮಿಕ ವಿದ್ಯಾಭ್ಯಾಸ ಕಲಿಯಲು ಆಸಕ್ತಿ ವಹಿಸಿದ್ದರು. ಧಾರ್ಮಿಕ ಕ್ಷೇತ್ರದಲ್ಲಿ ಸಲ್ಲಿಸಿದ ಅಪ್ರತಿಮ ಸೇವೆಗೆ ‘ತಾಜುಲ್ ಫುಖಹಾಅ್’ ಎಂಬ ಬಿರುದು ಪಡೆದಿದ್ದಾರೆ.

ಅವರು ಕರ್ಮಶಾಸ್ತ್ರ, ಖಗೋಳಶಾಸ್ತ್ರದ ಬಗ್ಗೆ ಉನ್ನತ ಜ್ಞಾನ ಹೊಂದಿದ್ದರು.ಕರ್ನಾಟಕದ ಹೆಮ್ಮೆಯಾಗಿದ್ದ ಶೈಖುನಾ, ಧಾರ್ಮಿಕ ಕ್ಷೇತ್ರದ ಅಧಿಕೃತ ಧ್ವನಿಯಾಗಿದ್ದರು. ಉಸ್ತಾದರ ವಫಾತ್ ಅಕ್ಷರಶಃ ಸುನ್ನತ್ ಜಮಾಅತ್’ಗೆ ತುಂಬಲಾರದ ನಷ್ಟವಾಗಿದೆ.

error: Content is protected !! Not allowed copy content from janadhvani.com