janadhvani

Kannada Online News Paper

ಕಿರಿದಾದ ಸ್ಥಳದಲ್ಲಿ ಇನೋವಾ ಪಾರ್ಕಿಂಗ್ : ಅಪ್ರತಿಮ ಚಾಲಕನಿಗೆ ಸನ್ಮಾನ

ಇತ್ತೀಚೆಗೆ ಕಾರ್ ಚಾಲಕರೊಬ್ಬರ ಪಾರ್ಕಿಂಗ್ ಕೌಶಲ್ಯವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಊಹಿಸಲಾಸಾಧ್ಯವಾದ ಜಾಗದಲ್ಲಿ ಟೊಯೊಟಾ ಇನೋವಾ ಕಾರನ್ನು ಪಾರ್ಕಿಂಗ್ ಮಾಡಿ, ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದರು.

ದೊಡ್ಡ ಕಾರನ್ನು ಅತ್ಯಂತ ಚಿಕ್ಕ ಜಾಗದಲ್ಲಿ ಪಾರ್ಕ್ ಮಾಡಿದ್ದ ಚಾಲಕ, ಪಾರ್ಕ್ ಮಾಡುವಾಗ ಯಾರ ನೆರವನ್ನೂ ಪಡೆದಿರಲಿಲ್ಲ ಎಂಬುದು ಗಮನಾರ್ಹ. ದೊಡ್ಡ ಪಾರ್ಕಿಂಗ್ ಸ್ಥಳಗಳಲ್ಲಿಯೇ ಜನರು ತಮ್ಮ ವಾಹನಗಳನ್ನು ಪಾರ್ಕ್ ಮಾಡಲು ಪರದಾಡುವಾಗ ಅತಿ ಚಿಕ್ಕ ಜಾಗದಲ್ಲಿ ಇನೋವಾದಂತಹ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಈ ಚಾಲಕರ ಕುಶಲಟೀಯನ್ನು ಮೆಚ್ಚಲೇ ಬೇಕು.

ದೇಶಾದ್ಯಂತ ವೈರಲ್ ಆದ ಈ ವೀಡಿಯೊದಿಂದ ಕೇರಳದ ಈ ಚಾಲಕ ರಾತ್ರೋರಾತ್ರಿ ಇಂಟರ್ ನೆಟ್ ಸ್ಟಾರ್ ಆದರು. ಟೊಯೊಟಾದ ಅಧಿಕೃತ ಡೀಲರ್ ಆದ ಅಮಾನಾ ಈ ಚಾಲಕನ ಕುಶಲತೆಯನ್ನು ಮೆಚ್ಚಿ ಅವರಿಗೆ ಪಾರ್ಕಿಂಗ್ ಲೆಜೆಂಡ್ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಸರಿ ಸಾಟಿಯಿಲ್ಲದ ನಿಮ್ಮ ಪಾರ್ಕಿಂಗ್ ಸಾಮರ್ಥ್ಯವನ್ನು ನಾವು ಸ್ವಾಗತಿಸುತ್ತೇವೆ ಎಂದು ಅಮಾನಾ ತಾನು ನೀಡಿರುವ ಪ್ರಶಸ್ತಿಯಲ್ಲಿ ತಿಳಿಸಿದೆ. ಅಮಾನಾ ಟೊಯೊಟಾ ಡೀಲರ್, ಆ ಚಾಲಕನು ಕಾರನ್ನು ಪಾರ್ಕ್ ಮಾಡಿದ ಜಾಗದಲ್ಲಿಯೇ ಪ್ರಶಸ್ತಿ ನೀಡಿ ಸನ್ಮಾನಿಸಿರುವುದು ವಿಶೇಷ.

ಟೊಯೊಟಾ ಡೀಲರ್ ನೀಡಿದ ಸನ್ಮಾನದ ನಂತರ ಆ ಚಾಲಕನ ಜನಪ್ರಿಯತೆ ಮತ್ತಷ್ಟು ಹೆಚ್ಚಿದೆ. ಆದರೆ ಈ ಸನ್ಮಾನವು ಟೊಯೊಟಾ ಕಂಪನಿ ನೀಡುತ್ತಿರುವ ಗೌರವವಲ್ಲ ಎಂಬುದನ್ನು ಗಮನಿಸಬೇಕು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಾಲಕ ತಾನು ಪಾರ್ಕ್ ಮಾಡುತ್ತಿರುವ ವೀಡಿಯೊವನ್ನು ರೆಕಾರ್ಡ್ ಮಾಡಲಾಗಿದೆ ಎಂಬುದು ತನಗೆ ತಿಳಿದಿರಲಿಲ್ಲವೆಂದು ಹೇಳಿದರು.

ಕೆಲವರು ತಮ್ಮ ಕಾರನ್ನು ಅದೇ ಸ್ಥಳದಲ್ಲಿ ಪಾರ್ಕ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಸ್ಥಳವು ತುಂಬಾ ಕಿರಿದಾಗಿರುವ ಕಾರಣ ಕಾರು ಪ್ರವೇಶಿಸಲು ಸಹ ಸಾಧ್ಯವಾಗುತ್ತಿಲ್ಲ. ಯುವಕನೊಬ್ಬ ತನ್ನ ಸೆಡಾನ್ ಕಾರನ್ನು ಪಾರ್ಕ್ ಮಾಡಲು ಪ್ರಯತ್ನಿಸಿ ವಿಫಲವಾದ ವೀಡಿಯೊ ಕೂಡ ವೈರಲ್ ಆಗಿದೆ.

ತಮಗೆ ಹಲವು ರೀತಿಯ ವಾಹನಗಳನ್ನು ಚಾಲನೆ ಮಾಡಿದ ಅನುಭವವಿರುವ ಕಾರಣಕ್ಕೆ ಕಾರನ್ನು ಈ ಕಿರಿದಾದ ಜಾಗದಲ್ಲಿ ಪಾರ್ಕಿಂಗ್ ಮಾಡಲು ಸಾಧ್ಯವಾಯಿತು ಎಂದು ಅವರು ಹೇಳಿದ್ದಾರೆ. ಈ ಹಿಂದೆ ಅವರು ಲಾರಿಗಳಂತಹ, ಭಾರೀ ಗಾತ್ರದ ವಾಹನಗಳನ್ನು ಚಾಲನೆ ಮಾಡಿದ ಅನುಭವ ಹೊಂದಿದ್ದಾರೆ.

ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕಿಂಗ್ ಮಾಡುವುದು ಸಾಮಾನ್ಯ ಸಂಗತಿಯಲ್ಲ. ಇದು ಅಸಾಧ್ಯವಾದ ಕೌಶಲ್ಯ. ಈ ಕಾರಣಕ್ಕೆ ಆ ಟೊಯೊಟಾ ಕಾರಿನ ಚಾಲಕ ಹೆಚ್ಚು ಜನಪ್ರಿಯರಾಗಿದ್ದಾರೆ.

ಭಾರತವನ್ನು ಹೊರತುಪಡಿಸಿ ವಿಶ್ವದ ವಿವಿಧ ದೇಶಗಳಲ್ಲಿ ಕಡಿದಾದ ಸ್ಥಳಗಳಲ್ಲಿ ಕಾರ್ ಪಾರ್ಕಿಂಗ್ ಮಾಡಲು ತರಬೇತಿ ನೀಡಲಾಗುತ್ತದೆ. ಆದರೆ ಬಹುತೇಕ ಭಾರತಿಯರಿಗೆ ತಮ್ಮ ಕಾರನ್ನು ಹೇಗೆ ಪಾರ್ಕ್ ಮಾಡಬೇಕೆಂದೇ ತಿಳಿದಿಲ್ಲ.

error: Content is protected !! Not allowed copy content from janadhvani.com