janadhvani

Kannada Online News Paper

JEE-NEET ಪರೀಕ್ಷೆ ಮುಂದೂಡುವಂತೆ ಸಲ್ಲಿಸಿದ್ದ ಅರ್ಜಿ ‘ಸುಪ್ರೀಂ’ ನಲ್ಲಿ ವಜಾ

ನವದೆಹಲಿ, ಸೆ.04; ಕೊರೋನಾ ಸಮಸ್ಯೆಯ ನಡುವೆಯೂ ಕೇಂದ್ರ ಸರ್ಕಾರ JEE-NEET ಪರೀಕ್ಷೆಯನ್ನು ನಡೆಸಲು ಮುಂದಾಗಿದ್ದು, ವಿದ್ಯಾರ್ಥಿಗಳ ಯೋಗಕ್ಷೇಮವನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷೆಯನ್ನು ಮುಂದೂಡುವಂತೆ ಒತ್ತಾಯಿಸಿ ಅನೇಕ ರಾಜ್ಯಗಳು ಸುಪ್ರೀಂ ಕದ ತಟ್ಟಿದ್ದವು. ಇಂದು ಇನ್‌ ಪ್ರೊಸಿಡಿಂಗ್‌ನಲ್ಲಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಬಿ.ಆರ್.ಗವಾಯಿ ಮತ್ತು ಕೃಷ್ಣ ಮುರಾರಿ ಅವರಿದ್ದ ತ್ರಿಸದಸ್ಯ ನ್ಯಾಯಪೀಠ ರಾಜ್ಯಗಳ ಅರ್ಜಿಯನ್ನು ಮತ್ತೊಮ್ಮೆ ವಜಾ ಮಾಡುವ ಮೂಲಕ ಪರೀಕ್ಷೆ ನಡೆಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿದಿದೆ.

ಕಳೆದ ಆಗಸ್ಟ್ 17ರಂದು ಈ ಕುರಿತ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ ಪರೀಕ್ಷೆ ನಡೆಸಲು ಅನುಮತಿ ನೀಡಿತ್ತು. ಆದರೆ, ಪಶ್ಚಿಮ ಬಂಗಾಳ, ಪಂಜಾಬ್‌ ಸೇರಿದಂತೆ 6 ರಾಜ್ಯಗಳು ಈ ತೀರ್ಪನ್ನು ಮರುಪರಿಶೀಲನೆ ಮಾಡುವಂತೆ ಒತ್ತಾಯಿಸಿ ಮತ್ತೆ ಸುಪ್ರೀಂ ಕೋರ್ಟ್‌‌ಗೆ ಮನವಿ ಸಲ್ಲಿಸಿದ್ದವು.

ಪರೀಕ್ಷೆ ಮುಂದೂಡುವ ಸಂಬಂಧ ಸುಪ್ರೀಂ ಕೋರ್ಟ್‌‌ಗೆ ಅರ್ಜಿ ಸಲ್ಲಿಸಿರುವ ರಾಜ್ಯ ಸರ್ಕಾರಗಳು, “ಪರೀಕ್ಷೆಗಳನ್ನು ಸುರಕ್ಷಿತವಾಗಿ ನಡೆಸುವಲ್ಲಿ ಕೇಂದ್ರ ಸರ್ಕಾರ ಸೋತಿದೆ. ಹೀಗಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆಗಳನ್ನು ಮುಂದೂಡುವುದು ಸೂಕ್ತ. ಇಲ್ಲದಿದ್ದರೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕತ್ತಲು ಆವರಿಸಿದಂತಾಗುತ್ತದೆ” ಎಂದು ಅಭಿಪ್ರಾಯಪಟ್ಟಿದ್ದವು.

ರಾಜ್ಯ ಸರ್ಕಾರಗಳ ಅಭಿಪ್ರಾಯಕ್ಕೆ ಇಂಬು ನೀಡುವಂತೆ ಸೆಪ್ಟೆಂಬರ್‌ 01ರಂದು ಆರಂಭವಾಗಿದ್ದ ಜೆಇಇ ಪರೀಕ್ಷೆಗಳಿಗೆ ದೇಶದಾದ್ಯಂತ ಸುಮಾರು ಶೇ.50ರಷ್ಟು ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಇನ್ನೂ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ಸೆಪ್ಟೆಂಬರ್ 13 ರಂದು ಆರಂಭವಾಗಲಿದ್ದು, ಈ ಪರೀಕ್ಷೆಗೂ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು ಗೈರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಅನೇಕ ವಿದ್ಯಾರ್ಥಿ ಸಂಘಟನೆಗಳೂ ಸಹ ಪರೀಕ್ಷೆಯನ್ನು ಮುಂದೂಡುವಂತೆ ಒತ್ತಾಯಿಸಿದ್ದವು.

ಬಿಹಾರ, ಅಸ್ಸಾಂ ಮತ್ತು ಗುಜರಾತ್ ಸೇರಿದಂತೆ ಹಲವು ರಾಜ್ಯಗಳು ಕೊರೊನಾ ವೈರಸ್ ಮತ್ತು ಪ್ರವಾಹಕ್ಕೆ ಒಳಗಾಗಿರುವುದರಿಂದ, ಆ ರಾಜ್ಯಗಳ ವಿದ್ಯಾರ್ಥಿಗಳು ಮತ್ತಷ್ಟು ತೊಂದರೆಯಲ್ಲಿ ಸಿಲುಕಿದ್ದಾರೆ. ಹೀಗಾಗಿ ಪರೀಕ್ಷೆಗೆ ಆಗಮಿಸಲು ಸಾಧ್ಯವಾಗಲಿಲ್ಲ ಎನ್ನಲಾಗುತ್ತಿದೆ. ಇದಲ್ಲದೆ, ಎಲ್ಲೆಡೆ ಸರ್ಮಪಕ ಸಾರಿಗೆ ವ್ಯವಸ್ಥೆಯನ್ನು ಇನ್ನೂ ಆರಂಭಿಸದ ಕಾರಣ ದೇಶದ ಹಲವಾರು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಪ್ರಯಾಣಿಸಲು ಸಾಧ್ಯವಾಗಿಲ್ಲ ಎಂದು ಹಲವು ವಿದ್ಯಾರ್ಥಿ ಸಂಘಟನೆಗಳು ಆರೋಪಿಸಿವೆ.

ಎಂಜಿನಿಯರಿಂಗ್ ಮತ್ತು ಫಾರ್ಮಸಿ ಕೋರ್ಸ್‌ಗಳ ಪ್ರವೇಶಕ್ಕಾಗಿ ಮಂಗಳವಾರ ರಾಷ್ಟ್ರವ್ಯಾಪಿ ಪ್ರಾರಂಭವಾದ ಜೆಇಇ ಪರೀಕ್ಷೆಯನ್ನು ಬರೆಯಲು ಗುಜರಾತ್‌ನಲ್ಲೇ ಸುಮಾರು ಶೇ.45 ಅಭ್ಯರ್ಥಿಗಳು ಗೈರಾಗಿದ್ದಾರೆ. ಮೊದಲ ದಿನ, ನೋಂದಾಯಿತ 3,020 ವಿದ್ಯಾರ್ಥಿಗಳಲ್ಲಿ 1,664 (55%) ಮಾತ್ರ ಹಾಜರಿದ್ದರು. 1,356 (45%) ಮಂದಿ ಹಾಜರಾಗಲಿಲ್ಲ.

ಗುಜರಾತ್‌ನಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಸುಮಾರು ಶೇ.50ರಷ್ಟು ಅಭ್ಯರ್ಥಿಗಳು ಜೆಇಇ ಪರೀಕ್ಷೆಯನ್ನು ಬರೆದಿಲ್ಲ ಎಂದು ಈಗಾಗಲೇ ವರದಿಗಳು ಹೊರ ಬೀಳುತ್ತಿವೆ. ಅಲ್ಲದೆ, ಸೆಪ್ಟೆಂಬರ್ 1 ರಿಂದ 6 ರವರೆಗೆ ನಡೆಯುತ್ತಿರುವ ಜೆಇಇ ಪರೀಕ್ಷೆಗೆ 8.58 ಲಕ್ಷ ಎಂಜಿನಿಯರಿಂಗ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಸೆಪ್ಟೆಂಬರ್ 13 ರಂದು ನಡೆಸಲು ನಿರ್ಧರಿಸಲಾಗಿರುವ ನೀಟ್ ಪರೀಕ್ಷೆಗೆ 15.97 ಲಕ್ಷ ವೈದ್ಯಕೀಯ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಹಾಗಾಗಿ ನೀಟ್‌ ಪರೀಕ್ಷೆಯನ್ನು ಮುಂದೂಡಿ ಎಂಬುದು ರಾಜ್ಯ ಸರ್ಕಾರಗಳ ಒತ್ತಾಯವಾಗಿತ್ತು.

ಹೀಗಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ NEET-JEE ಪರೀಕ್ಷೆಗೆ ಸಂಬಂಧಿಸಿದಂತೆ ತಾನೇ ನೀಡಿದ ಆದೇಶವನ್ನು ಸುಪ್ರೀಂ ಕೋರ್ಟ್‌ ಮರುಪರಿಶೀಲನೆ ನಡೆಸಲಿದೆ ಎಂದೇ ಅಂದಾಜಿಸಲಾಗಿತ್ತು. ಆದರೆ, ಸುಪ್ರೀಂ ಕೋರ್ಟ್‌ ಮತ್ತೊಮ್ಮೆ ರಾಜ್ಯ ಸರ್ಕಾರಗಳ ಅರ್ಜಿಯನ್ನು ತಿರಸ್ಕರಿಸುವ ಮೂಲಕ ಕೇಂದ್ರ ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿದಿದೆ. ಆದರೆ, ಸುಪ್ರೀಂ ಕೋರ್ಟ್‌‌ನ ಈ ನಡೆ ಕೊರೋನಾ ಮತ್ತು ಪ್ರವಾಹಕ್ಕೆ ಸಿಲುಕಿರುವ ವಿದ್ಯಾರ್ಥಿಗಳ ಪಾಲಿಗೆ ಸಂಕಷ್ಟವನ್ನು ತಂದೊಡ್ಡಲಿದೆ ಎಂದೇ ಹೇಳಲಾಗುತ್ತಿದೆ.

error: Content is protected !! Not allowed copy content from janadhvani.com