janadhvani

Kannada Online News Paper

ಪ್ರಶಾಂತ್ ಭೂಷಣ್ ಗೆ ಒಂದು ರೂಪಾಯಿ ದಂಡ ವಿಧಿಸಿದ ಸುಪ್ರೀಂಕೋರ್ಟ್

ನವದೆಹಲಿ, ಆ 31: ನ್ಯಾಯಾಂಗ ನಿಂದನೆಯ ಪ್ರಕರಣದಲ್ಲಿ ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ಗೆ ಇಂದು ಸುಪ್ರೀಂಕೋರ್ಟ್ ಒಂದು ರೂಪಾಯಿ ದಂಡ ವಿಧಿಸಿದೆ.
ದಂಡದ ಹಣವನ್ನು ಇದೇ 15 ರ ಒಳಗೆ ಠೇವಣಿ ಇಡಬೇಕು ತಪ್ಪಿದಲ್ಲಿ ಮೂರು ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕು ನ್ಯಾಯಪೀಠ ಹೇಳಿದೆ.ನ್ಯಾ| ಅರುಣ್ ಮಿಶ್ರ ಅವರಿದ್ದ ಸುಪ್ರೀಂ ನ್ಯಾಯಪೀಠ ಈ ತೀರ್ಪು ನೀಡಿದೆ.

63 ವರ್ಷದ ಪ್ರಶಾಂತ್ ಭೂಷಣ್, ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಎಸ್ಎ ಬೋಬ್ಡೆ ಹಾಗೂ ಇತರೆ ಮಾಜಿ ನ್ಯಾಯಮೂರ್ತಿಗಳ ನಿಲುವು ಟೀಕಿಸಿ ಟ್ವೀಟ್ ಮಾಡಿದ್ದರು. ಇದನ್ನು ನ್ಯಾಯಾಂಗ ನಿಂದನೆ ಅಂತ ಪರಿಗಣಿಸಿ ಪ್ರಶಾಂತ್ ಭೂಷಣ್ ಅವರನ್ನು ದೋಷಿ ಎಂದು ನ್ಯಾಯಾಲಯ ಸಾರಿತ್ತು.ತಮ್ಮ ಹೇಳಿಕೆಗೆ ಬೇಷರತ್ ಕ್ಷಮೆ ಕೋರುವಂತೆ ಪ್ರಶಾಂತ್ ಭೂಷಣ್​ಗೆ ಮೂರು ದಿನ ಕಾಲಾವಕಾಶವನ್ನೂ ಕೋರ್ಟ್ ನೀಡಿತ್ತು.

ಆದರೆ, 63 ವರ್ಷದ ಪ್ರಶಾಂತ್ ಭೂಷಣ್ ತಾನು ಕ್ಷಮೆ ಕೇಳುವುದಿಲ್ಲ. ಕ್ಷಮೆ ಕೇಳಿದರೆ ಆತ್ಮಸಾಕ್ಷಿಗೆ ವಂಚನೆ ಮಾಡಿಕೊಂಡಂತೆ. ನೀವು ಏನೇ ಶಿಕ್ಷೆ ಕೊಟ್ಟರೂ ಸ್ವೀಕರಿಸುತ್ತೇನೆಯೇ ಹೊರತು ಕ್ಷಮೆ ಕೇಳುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರು ಕಳೆದ ಮಂಗಳವಾರ ನಡೆದ ವಿಚಾರಣೆ ವೇಳೆ ಪ್ರಶಾಂತ್ ಭೂಷಣ್ ಅವರನ್ನ ಕ್ಷಮಿಸಿಬಿಡುವಂತೆ ಕೋರ್ಟ್​ಗೆ ಮನವಿ ಮಾಡಿಕೊಂಡಿದ್ದು ಕುತೂಹಲ ಮೂಡಿಸಿತು. ಪ್ರಶಾಂತ್ ಭೂಷಣ್ ಬಹಳಷ್ಟು ಮಂದಿಗೆ ನೆರವಾಗಿದ್ದಾರೆ. ಅದನ್ನು ಪರಿಗಣಿಸಿ ಅವರಿಗೆ ಎಚ್ಚರಿಕೆ ಕೊಟ್ಟು ಕ್ಷಮಿಸುವುದು ಉತ್ತಮ ಎಂಬ ಸಲಹೆ ನೀಡಿದ್ದರು. ಆದರೆ, ನ್ಯಾಯಪೀಠ ಇದಕ್ಕೆ ಸಮಾಧಾನಗೊಳ್ಳಲಿಲ್ಲ. ಪ್ರಶಾಂತ್ ಭೂಷಣ್ ತಮ್ಮ ತಪ್ಪನ್ನೇ ಒಪ್ಪಿಕೊಳ್ಳುತ್ತಿಲ್ಲ ಎಂದು ತನ್ನ ಅಸಮಾಧಾನ ತೋರ್ಪಡಿಸಿತು.

ಇವತ್ತೂ ಕೂಡ ಪ್ರಶಾಂತ್ ಭೂಷಣ್ ಅವರು ಕ್ಷಮೆ ಕೋರುವ ಅವಕಾಶ ಹೊಂದಿದ್ದರು. ಅವರಿಗೆ 6 ತಿಂಗಳವರೆಗೆ ಸರಳ ಸೆರೆಮನೆವಾಸದ ಶಿಕ್ಷೆ ಅಥವಾ 2 ಸಾವಿರ ರೂಪಾಯಿ ದಂಡ, ಅಥವಾ ಎರಡನ್ನೂ ಅವರಿಗೆ ನೀಡುವ ಅವಕಾಶವನ್ನ ಸರ್ವೋಚ್ಚ ನ್ಯಾಯಾಲಯ ಹೊಂದಿತ್ತು. ಆದರೆ, ಅಂತಿಮವಾಗಿ ಒಂದು ರೂ ದಂಡ ವಿಧಿಸಿ ಬಿಟ್ಟುಕಳುಹಿಸಲು ಕೋರ್ಟ್ ನಿರ್ಧಾರ ಮಾಡಿತು.

error: Content is protected !! Not allowed copy content from janadhvani.com