janadhvani

Kannada Online News Paper

ಪ್ರವಾದಿ ನಿಂದನೆ ಅಕ್ಷಮ್ಯ! ನಾವು ಪ್ರಬುದ್ಧರಾಗಿ ಎದುರಿಸೋಣ- ಅಬೂ ಸುಫ್ಯಾನ್ ಮದನಿ

ವಿಶ್ವಕ್ಕೆ ಶಾಂತಿಯ ಪಾಠವನ್ನು ಕಲಿಸಿದ, ಮಾನವೀಯತೆಯ ಮಹಾನ್ ಮಾದರಿ ಪ್ರವಾದಿ ಮುಹಮ್ಮದ್ ಪೈಗಂಬರ್ ಸಲ್ಲಲ್ಲಾಹು ಅಲೈಹಿವಸಲ್ಲಂ ರವರ ಬಗ್ಗೆ ತಿಳಿಯದವರು ಈ ಪ್ರಪಂಚದಲ್ಲಿ ವಿರಳ. ಕರಿ ಬಿಳಿ ಉಚ್ಛ ನೀಚ ಶ್ರೀಮಂತ ಬಡವ ಎಂಬ ವ್ಯತ್ಯಾಸವಿಲ್ಲದೆ ಎಲ್ಲರಿಗೂ ಕರುಣೆ ತೋರಿದ ಆ ಮಹಾನ್ ವ್ಯಕ್ತಿತ್ವದ ಬಗ್ಗೆ ಇಡೀ ಜಗತ್ತೇ ಮೆಚ್ಚುಗೆ ವ್ಯಕ್ತಪಡಿಸಿದೆ.

ಪ್ರಪಂಚದಲ್ಲಿ ಕಳೆದು ಹೋದ ಅನೇಕಾರು ಚಿಂತಕರು, ಬುದ್ಧಿಜೀವಿಗಳು, ಇತಿಹಾಸಕಾರರು ಆ ಪ್ರವಾದಿಯವರ ಬಗ್ಗೆ ಬಹಳಷ್ಟು ಮೆಚ್ಚುಗೆಯ ಮಾತುಗಳನ್ನಾಡಿದ್ದು ನಾವು ಕಂಡಿದ್ದೇವೆ. ಆದರೆ ಇತಿಹಾಸದ ಬಗ್ಗೆ ಎಳ್ಳಷ್ಟು ಜ್ಞಾನವಿಲ್ಲದ, ಧರ್ಮಗಳ ತಿರುಳರಿಯದ ಕೆಲವು ಧರ್ಮಾಂಧರು ಮಾತ್ರ ತಮ್ಮ ಸ್ವಾರ್ಥತೆಗಾಗಿ ಅಥವಾ ರಾಜಕೀಯ ದುರ್ಲಾಭಕ್ಕಾಗಿ ಪದೇ ಪದೇ ಮಹಾನ್ ಪುರುಷರನ್ನು, ಪ್ರವಾದಿಗಳನ್ನು ಅವಹೇಳನ ಮಾಡುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿದ್ದಾರೆ.

ದೇಶಕ್ಕೆ ಮಾರಕವಾದ ಇಂಥಹಾ ಕ್ಷುದ್ರ ಶಕ್ತಿಗಳ ಮೇಲೆ ಕಠಿಣ ಕ್ರಮ ಕೈಗೊಂಡು ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ನೋಡಿಕೊಳ್ಳಬೇಕಾಗಿದೆ.
ತನ್ನ ಮೇಲೆ ಕಲ್ಲೆಸೆದಾಗಲೂ ಅವಾಚ್ಯ ಪದಗಳಿಂದ ನಿಂದಿಸಿದಾಗಲೂ, ತನ್ನ ಸಹಚರರನ್ನು ಕ್ರೂರವಾಗಿ ಹಿಂಸಿಸಿದಾಗಲೂ ಸಹನೆಯನ್ನು ಪಾಲಿಸಿ, ಪ್ರೀತಿ ವಿಶ್ವಾಸದ ಮೂಲಕ ಶಾಂತಿ-ಸೌಹಾರ್ದತೆಯ ಮೂಲಕ ಜಗತ್ತಿನ ಮನವನ್ನು ಗೆದ್ದ ಪ್ರವಾದಿ ಮುಹಮ್ಮದ್ ಪೈಗಂಬರ್ ಸಲ್ಲಲ್ಲಾಹು ಅಲೈಹಿವಸಲ್ಲಂ ರವರ ಅನುಯಾಯಿಗಳಾದ ನಾವು ಕೂಡ ಇಂತಹ ಕ್ಷುದ್ರ ಶಕ್ತಿಗಳ ಕುತಂತ್ರಗಳಿಗೆ ಬಲಿಯಾಗಿ ಕಾನೂನು ಬಾಹಿರವಾಗಿ ವರ್ತಿಸದೆ ಸಂಯಮ ಪಾಲಿಸುವ ಮೂಲಕ ಪವಿತ್ರ ಇಸ್ಲಾಮಿನ ನೈಜ ಆದರ್ಶವನ್ನು ಜಗತ್ತಿನ ಮುಂದೆ ಎತ್ತಿ ತೋರಿಸಬೇಕಾದ ಬಾಧ್ಯತೆ ಇಂತಹ ಸಂದರ್ಭಗಳಲ್ಲಿ ನಮಗಿದೆ.

ಪಕ್ವತೆಯಿಂದ ವರ್ತಿಸಿ ಪ್ರಬುದ್ಧತೆಯಿಂದ ಇಂತಹ ವಿಷಯಗಳನ್ನು ತೀಕ್ಷ್ಣವಾಗಿ ಖಂಡಿಸೋಣ. ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಂ ಈ ಜಗತ್ತಿಗೆ ತೋರಿಸಿದ ಅನನ್ಯವಾದ ಪ್ರೀತಿ ಸೌಹಾರ್ದತೆಯ ನೈಜತೆಯನ್ನು ಜಗತ್ತಿಗೆ ಪರಿಚಯಿಸೋಣ. ಅಲ್ಲಾಹು ಅನುಗ್ರಹಿಸಲಿ.

ಅಬೂ ಸುಫ್ಯಾನ್ ಮದನಿ
(ಉಪಾಧ್ಯಕ್ಷರು ಕರ್ನಾಟಕ ಮುಸ್ಲಿಂ ಜಮಾಅತ್)

error: Content is protected !! Not allowed copy content from janadhvani.com