janadhvani

Kannada Online News Paper

ಕೋರೋನಾ ಹಾಗೂ ಮದ್ರಸಾ ಅಧ್ಯಾಪಕರು…!

ಕೋರೋನ ಮಹಾಮಾರಿ ಜಗತ್ತನ್ನೇ ತಲ್ಲಣಗೊಳಿಸಿದೆ. ಆರ್ಥಿಕ ಸ್ಥಿತಿ-ಗತಿ ಪಾತಾಳಕ್ಕಿಳಿದಿದೆ‌. ಅದೆಷ್ಟೋ ಜನ ಕೆಲಸ ಕಳಕೊಂಡರು. ಹಲವರಂತೂ ಉಪಜೀವನ ಮಾರ್ಗ ಕೈಗೊಂಡು ಬಹುತೇಕ ಯಶಸ್ವಿಯಾದರು. ಆದರೆ ಮದ್ರಸಾ ಅಧ್ಯಾಪಕರುಗಳ ಜೀವನವನ್ನು ಕೋರೋನಾ ಇನ್ನಿಲ್ಲದಂತೆ ಕಾಡಿದೆ. ಹಲವರನ್ನು ನಿರ್ಧಾಕ್ಷಿಣ್ಯವಾಗಿ ಸೇವೆಯಿಂದ ವಜಾಗೊಳಿಸಲಾಯಿತು. ಸೇವೆಯಲ್ಲಿರುವವರಿಗಂತೂ ಅರ್ಧವೇತನ…!
ಸಾಮಾನ್ಯವಾಗಿ ಉಸ್ತಾದರುಗಳಿಗೆ ಇರುವ ಕೂಲಿಯೇ ₹10,000. ಅದರಲ್ಲಿ ಅರ್ಧವೇತನವನ್ನೂ ಸರಿಯಾಗಿ ನೀಡದೆ ಸತಾಯಿಸಲಾಗುತ್ತಿದೆ.

ಇನ್ನು ಆಡಳಿತ ಕಮಿಟಿಯವರು “ಉಸ್ತಾದರುಗಳಿಗೆ ಕೆಲಸವಿಲ್ಲ, ಮತ್ಯಾಕೆ ವೇತನ ನೀಡುವುದು’ ಎಂಬ ಉಡಾಫೆಯ ಮಾತನ್ನಾಡಿ ಮಾಸಾಶನವನ್ನು ತೀರಾ ನೀಡದವರಿದ್ದಾರೆ. ಬಹುತೇಕ ಎಲ್ಲರೂ ಕೋರೋನಾದಿಂದ ಪಾಠ ಕಲಿತಿದ್ದರೆ, ಜಮಾಅತ್ ಕಮಿಟಿಯೆಂಬ ಒಂದು ಸಮೂಹ ಇನ್ನೂ ಪಾಠ ಕಲಿತಂತೆ ಕಾಣುವುದಿಲ್ಲ. ನಾನು ಇಲ್ಲಿ ಉಲ್ಲೇಖಿಸುವುದು ಎಲ್ಲಾ ಜಮಾಅತ್ ಕಮಿಟಿಗಳನ್ನಲ್ಲ. ಕೆಲವಾರು ಜಮಾಅತ್ ಕಮಿಟಿಯವರು ಪೂರ್ಣ ಸಂಬಳವನ್ನು ನೀಡಿ ಹಾಗೂ ಇನ್ನು ಕೆಲವರು ಪ್ರತಿಯೊಬ್ಬರಿಗೂ 10,000 ದಂತೆ ನೀಡಿ ಮಾದರಿಯಾದವರೂ ಇದ್ದಾರೆ. ಕೆಲವು ಜಮಾಅತ್ ಕಮಿಟಿಯವರು ವಂತಿಗೆ ವಸೂಲಾಗುತ್ತಿಲ್ಲವೆಂಬ ಕ್ಷುಲ್ಲಕ ಕಾರಣ ನೀಡುತ್ತಾರೆ. ಕೋರೋನಾ ಕಾಲದಲ್ಲಿ ವಂತಿಗೆಗೆ ವಿನಾಯಿತಿ ನೀಡಿದಂತಹ ಪ್ರಸಂಗ ತೀರಾ ಕಡಿಮೆ. ವಂತಿಗೆ ಪೂರ್ಣವಾಗಿ ವಸೂಲು ಮಾಡಲಾಗುತ್ತಿದ್ದರೂ ಕೂಡ ಉಸ್ತಾದರುಗಳಿಗೆ ನೀಡಬೇಕಾದ ಸಂಬಳ ನೀಡದೆ ಸತಾಯಿಸಲಾಗುತ್ತಿದೆ.

ಕೋರೋನಾ ಕಾರಣದಿಂದ ಪೂರ್ಣಾವಧಿಗೆ ಕೆಲಸವಿಲ್ಲದೆ ಕಷ್ಟಪಡುತ್ತಿರುವುದು ಉಸ್ತಾದರುಗಳು ಮಾತ್ರ. ಅವರಲ್ಲಿ ಬಹುತೇಕರಿಗೆ ಅಧ್ಯಾಪನ ವೃತ್ತಿಯಲ್ಲದೆ ಇನ್ನಾವ ವೃತ್ತಿ ಮಾಡಿ ಗೊತ್ತೂ ಇಲ್ಲ. ಗೊತ್ತಿದ್ದರೂ ಉಸ್ತಾದರೆಂಬ ಕಾರಣಕ್ಕೆ ಕೆಲಸಕ್ಕೆ ಸೇರಿಸುಕೊಳ್ಳುವುದಿಲ್ಲ. ಇನ್ನು ಜಮಾಅತ್ ಕಮಿಟಿಯವರ ಋಣವೇ ಬೇಡವೆಂದು ಬೆಂಗಳೂರು ಮುಂತಾದ ವಾಣಿಜ್ಯ ನಗರಗಳೆಡೆ ಕೆಲಸ ಹುಡುಕಿ ಹೋದವರೂ ಇದ್ದಾರೆ. ಇದೆಲ್ಲವೂ ನಮ್ಮ ಸಮಾಜ ಉಸ್ತಾದರುಗಳನ್ನು ಯಾವ ರೀತಿ ನಡೆಸಿಕೊಳ್ಳುತ್ತಿದೆ ಎನ್ನುವುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ.‌ ಸಮಾಜದಲ್ಲಿ ಅತ್ಯಂತ ಗೌರವಿಸಲ್ಪಡಬೇಕಾಗಿದ್ದ, ನಮ್ಮ ಎಳೆಯ ಮಕ್ಕಳಲ್ಲಿ ದೀನೀ ವಿಚಾರಗಳನ್ನು ಬಿತ್ತಿ ಸಮಾಜದ ಪ್ರಬುದ್ಧ ಪ್ರಜೆಗಳಾಗಿ ಮಾಡುವಂತಹಾ ಪವಿತ್ರ ಕೈಂಕರ್ಯವನ್ನು ಹೊತ್ತುಕೊಂಡ ಮದ್ರಸಾ ಅಧ್ಯಾಪಕರುಗಳನ್ನು ನಮ್ಮ ಸಮಾಜವು ಯಾವ ರೀತಿ ಗೌರವಿಸುತ್ತಿದೆ ಎಂಬುದಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಒಂದು ವಿಚಾರ ಜಮಾಅತ್ ಕಮಿಟಿಯವರು ಎಲ್ಲರೂ ಅರ್ಥೈಸಿಕೊಳ್ಳಬೇಕಾಗಿದೆ. ಉಸ್ತಾದರುಗಳಿಗೂ ಪತ್ನಿ ಮಕ್ಕಳಿದ್ದಾರೆ. ತಂದೆ-ತಾಯಿಗಳ ಖರ್ಚು, ಮನೆಬಾಡಿಗೆ, ಮನೆಯ ದಿನಸಿ ಸಾಮಾನುಗಳ ಖರ್ಚು ಎಲ್ಲವೂ ನಮ್ಮಂತೆಯೇ ಅವರಿಗೂ ಇದೆ. ಉಸ್ತಾದರುಗಳೆಂಬ ಕಾರಣಕ್ಕೆ ಯಾವ ಕಿರಾಣಿ ಅಂಗಡಿಯವನೂ ಕೂಡ ಅವರಿಗೆ ಅರ್ಧ ಬೆಲೆಗೆ ದಿನಸಿ ಸಾಮಾನುಗಳನ್ನ ಮಾರುವುವುದಿಲ್ಲ. ಅವರು ತಮ್ಮ ಜೀವನೋಪಾಯಕ್ಕಾಗಿ ತಿಂಗಳ ಸಂಬಳವನ್ನೇ ನೆಚ್ಚಿಕೊಂಡಿದ್ದಾರೇ ವಿನಃ ಮತ್ಯಾವ ಸಂಪಾದನೆಯ ಮಾರ್ಗವೂ ಅವರಿಗಿರುವುದಿಲ್ಲ. ಇದೆಲ್ಲ ಗೊತ್ತಿದ್ದೂ ಕೂಡಾ ತಿಳಿಯದವರಂತೆ ನಟಿಸುವ ಜಮಾಅತ್ ಕಮಿಟಿಯವರ ಕುರಿತು ನೆನೆಯುವಾಗ ಸೋಜಿಗವೆನಿಸುತ್ತದೆ…!

ಉಸ್ತಾದರುಗಳ ಕುರಿತು ನಮ್ಮ ಸಮಾಜ ಅದೇಕೆ ಅಂತಹ ಉತ್ಪ್ರೇಕ್ಷೆ ಭಾವನೆ ಹೊಂದಿದೆಯೆಂದು ತಿಳಿಯುತ್ತಿಲ್ಲ. ಉಸ್ತಾದರುಗಳೆಂದರೆ, ನಾಡಿನ ಸರ್ವತೋಮುಖ ಅಭಿವೃದ್ಧಿಗಾಗಿ ಚಿಂತಿಸಿ, ಇಡೀ ಜಮಾಅತಿನ ಆಗು-ಹೋಗುಗಳನ್ನು ನಿಯಂತ್ರಿಸಿ, ಸಮಸ್ಯೆಗೆ ಸ್ಪಂದಿಸುವವರು. ಸಾಮಾನ್ಯ ಜನರಿಗೆ ಒಳಿತಿನ ದಾರಿ ತೋರಿಸಿ, ತಪ್ಪು ಮಾರ್ಗಗಳಿಂದ ಹಿಂಜರಿಯುವಂತೆ ಉಪದೇಶಿಸುವವರು. ಅದಕ್ಕೂ ಮಿಗಿಲಾಗಿ ನಮ್ಮ ಪುಟ್ಟ ಮಕ್ಕಳ ಭವಿಷ್ಯವನ್ನು ಸಮರ್ಥವಾಗಿ ರೂಪಿಸುವುದು ಉಸ್ತಾದರೇ ಹೊರತು ಜಮಾಅತ್ ಕಮಿಟಿಯವರೋ ಇನ್ನಾವ ರಾಜಕಾರಣಿಗಳೋ ಅಲ್ಲ..!
ಕೆಲವು ಕಮಿಟಿಯವರಂತೂ ತಿಂಗಳ ವಂತಿಗೆ ವಸೂಲಿ ಮಾಡಲು ಸಾಧ್ಯವಾಗುತ್ತಿಲ್ಲ ಅನ್ನುವವರಿದ್ದಾರೆ. ಅದು ಅವರ ಜವಬ್ದಾರಿಯಿಂದ ನುಣುಚಿಕೊಳ್ಳುವ ತಂತ್ರಗಾರಿಕೆಯೆಂದೇ ಅರ್ಥೈಸಬೇಕಾಗುತ್ತದೆ. ಯಾಕೆಂದರೆ ಜಮಾಅತ್ ಕಮಿಟಿಯ ಪ್ರಮುಖ ಜವಾಬ್ದಾರಿಗಳಲ್ಲೊಂದಲ್ಲವೇ ವಂತಿಗೆ ವಸೂಲಿ ಮಾಡುವುದು. ಅದು ಸಾಧ್ಯವಿಲ್ಲ ಅಂದಮೇಲೆ ಅವರು ಯಾವ ಅರ್ಹತೆಗಾಗಿ ಕಮಿಟಿಯಲ್ಲಿರಬೇಕು..!

ಇನ್ನು ಕೆಲವರಿಗೆ ತಮ್ಮ ಮೊಬೈಲ್ ರೀಚಾರ್ಜ್ ಮಾಡಲು ₹600, ತನ್ನ ಹೆಂಡತಿಯ ಮೊಬೈಲಿಗೆ ಇನ್ನೊಂದು 600 ರೂಪಾಯಿ ಮಾಡಲು ಹಣ ಹೊಂದಿಸುವುದು ಕಷ್ಟವೇ ಅನ್ನಿಸುವುದಿಲ್ಲ. ಆದರೆ ತಿಂಗಳಿಗೊಂದು ಇನ್ನೂರು ಮುನ್ನೂರು ರುಪಾಯಿ ಮಸೀದಿ ವಂತಿಗೆ ನೀಡುವುದು ಪರ್ವತದಷ್ಟು ಭಾರವೆನಿಸುತ್ತದೆ. ಇದಕ್ಕೆ ಏನನ್ನಬೇಕೋ ಎಂದು ತಿಳಿಯುತ್ತಿಲ್ಲ. ಇದನ್ನೇ ಮುಂದಿಟ್ಟುಕೊಂಡು ಉಸ್ತಾದರುಗಳ ಸಂಬಳ ಕಡಿತಗೊಳಿಸುವುದು ತಿಳಿಗೇಡಿತನವಲ್ಲದೆ ಮತ್ತೇನು…! ಇನ್ನು ಕೆಲವು ಮಸೀದಿಗಳಿಗಂತೂ ಬೇರೆ ಮೂಲಗಳಿಂದಲೂ ಆರ್ಥಿಕ ಭಧ್ರತೆಯಿದೆ. ವಾಣಿಜ್ಯ ಸಂಕೀರ್ಣಗಳು, ಅಡಿಕೆ ತೋಟಗಳು ಫ್ಲಾಟ್‌ಗಳನ್ನು ಹೊಂದಿರುವಂತಹ ಅದೆಷ್ಟೋ ಜಮಾ‌ಅತ್‌ಗಳಿವೆ ಅವರೂ ಕೂಡಾ ಉಸ್ತಾದರುಗಳ ಸಂಬಳಕ್ಕೆ ಕತ್ತರಿ ಇಡುವುದು ವಿಪರ್ಯಾಸವೇ ಸರಿ…!

ತಮ್ಮದಲ್ಲದ ಕಾರಣಗಳಿಗೆ ಸೇವೆಗೆ ಹಾಜರಾಗಲು ಅಸಾಧ್ಯವಾದರೆ, ಆ ಕೆಲಸಗಾರರಿಗೆ ಸಂಬಳವನ್ನು ತಡೆಹಿಡಿಯುವುದು ನಿಷಿದ್ಧವೆಂದು ಪ್ರಮುಖ ಕರ್ಮಶಾಸ್ತ್ರ ಗ್ರಂಥವಾದ ‘ತುಹ್ಫತುಲ್ ಮುಹ್ತಾಜ್’ಲ್ಲಿ ಕಾಣಬಹುದು. ಲಾಕ್ಡೌನ್ ನಂತರ ಜಮಾಅತ್ ಕಮಿಟಿಯಿಂದ ಬೇಸತ್ತು ಉಸ್ತಾದರುಗಳು ‘ಯಾವುದೇ ಮದ್ರಸಾಗಳಿಗೆ ಹೋಗುವುದಿಲ್ಲ’ (ಅವರು ಹಾಗೆ ತೀರ್ಮಾನಿಸಲಾರರು) ಎಂಬ ನಿಲುವನ್ನು ತಳೆದರೆ ನಮ್ಮ ಮಕ್ಕಳ ಭವಿಷ್ಯಕ್ಕೆ ಕುತ್ತು ತರುವವರು ನಾವೇ ಅಲ್ಲವೇ..!

ಉಲಮಾಗಳೆಂದರೆ ಅಂಬಿಯಾಗಳ ವಾರೀಸುದಾರರು. ಅವರನ್ನು ಕೀಳಾಗಿ ಕಾಣುವುದು ಅವಮಾನಿಸುವುದು ಅಂಬಿಯಾ ಮುರ್ಸಲುಗಳನ್ನು ಕೀಳಾಗಿ ಕಂಡಂತಲ್ಲವೇ…! ಅವರ ಸಂಬಳ ಕ್ರಮಬಧ್ಧವಾಗಿ ನೀಡುವುದು ಕಮಿಟಿಯವರ ಭಾಧ್ಯತೆಯಾಗಿದೆ.ಭಾಧ್ಯತೆ ಪೂರ್ಣಗೊಳಿಸದಾತನ ಪಾಶ್ಚಾತಾಪ(ತೌಬಾ) ಅಲ್ಲಾಹು ಸ್ವೀಕರಿಸಲಾರನು…! ಹಲವಾರು ಉಸ್ತಾದರುಗಳು ಹಾಗು ಅವರ ಕುಟುಂಬಗಳು ಈಗಲೂ ಕಣ್ಣೀರಲ್ಲಿ ಕೈತೊಳೆಯುತ್ತಿವೆ.ಆ ಕಣ್ಣೀರಿನ ಫಲವನ್ನು ಆಡಳಿತ ಸಮಿತಿಯವರೇ ಉಣ್ಣಬೇಕಾದೀತೆಂಬುದನ್ನು ಮರೆಯಬಾರದು. ಕ್ಷುಲ್ಲಕ ಕಾರಣಗಳಿಗಾಗಿ ಉಸ್ತಾದರನ್ನು ವಜಾಮಾಡುವುದು ಕ್ರೌರ್ಯದ ಪರಮಾವಧಿ. ಪ್ರತಿಯೊಂದಕ್ಕೂ ನಾಳೆ ಸೃಷ್ಟಿಕರ್ತನಲ್ಲಿ ಉತ್ತರ ಹೇಳಬೇಕಾದೀತು ಎಂದು ನೆನಪಿರಲಿ…!

— ಅಶ್ರಫ್ ನಾವೂರು

error: Content is protected !! Not allowed copy content from janadhvani.com