janadhvani

Kannada Online News Paper

ಲಬ್ಬೈಕಲ್ಲಾಹುಮ್ಮ ಲಬ್ಬೈಕ್- ನಾಳೆ ಅರಫಾ ಸಂಗಮ

ಮಿನಾ | “ಲಬ್ಬೈಕಲ್ಲಾಹುಮ್ಮ ಲಬ್ಬೈಕ್” ಅಲ್ಲಾಹನ ಕರೆಗೆ ಓಗೊಟ್ಟಿರುವೆನು ಎಂಬ ಮಂತ್ರ ಧ್ವನಿಯಿಂದ ಮಿನಾ ಕಣಿವೆಯು ಭಕ್ತಿ ಸಾಂದ್ರ.

ಪ್ರಾರ್ಥನೆಯಲ್ಲಿ ತಲ್ಲೀನರಾಗಿ ಹಜ್‌ನ ಮೊದಲ ದಿನ ರಾತ್ರಿ ಕಳೆಯಲು ಡೇರೆಗಳ ನಗರವಾದ ಮಿನಾಗೆ ಯಾತ್ರಾರ್ಥಿಗಳು ಆಗಮಿಸಿದರು. ಹಜ್ ಯಾತ್ರಾರ್ಥಿಗಳು ಮಿನಾದ ಡೇರೆಗಳಲ್ಲಿ ರಾತ್ರಿ ಕಳೆಯುತ್ತಾರೆ, ತಲ್ಬಿಯಾ, ಧಿಕ್ರ್ ಮತ್ತು ಕುರ್ಆನ್ ಪಠಣದಲ್ಲಿ ತೊಡಗುತ್ತಾರೆ, ಹಜ್ ನ ಪ್ರಮುಖ ಕರ್ಮವಾದ ‘ಅರಫಾ ಸಂಗಮ’ ಕ್ಕೆ ಮುಂಚಿತವಾಗಿ. ಇಲ್ಲಿಂದ ಯಾತ್ರಿಕರು ಮನಸ್ಸು ಮತ್ತು ದೇಹವನ್ನು ಸಿದ್ಧಪಡಿಸಿದ ನಂತರ ಅರಫಾಗೆ ತೆರಳುತ್ತಾರೆ.

ಇಹ್ರಾಮ್ ಮತ್ತು ತವಾಫ್ ನಂತರ ಹಜ್ ಯಾತ್ರಿಕರನ್ನು ವಿಶೇಷ ಬಸ್‌ಗಳಲ್ಲಿ ಮಿನಾಗೆ ಕರೆತರಲಾಯಿತು. ಡೇರೆಗಳ ನಗರವು ಮಕ್ಕಾ ಮತ್ತು ಮುಸ್ದಲಿಫಾ ನಡುವೆ ಇದೆ. ಗುರುವಾರ ಮಿನಾದಲ್ಲಿ ಸುಬಹಿ ನಮಾಜ್ ಮಾಡಿದ ಬಳಿಕ, ಯಾತ್ರಾರ್ಥಿಗಳು ವಿಶೇಷವಾಗಿ ಸಿದ್ಧಪಡಿಸಿದ ಬಸ್‌ಗಳಲ್ಲಿ ಅರಫಾಗೆ ತೆರಳುವರು.

ಹಜ್‌ನ ಪ್ರಮುಖ ಆರಾಧನಾ ಕರ್ಮವಾಗಿದೆ ಗುರುವಾರ ನಡೆಯುವ ‘ಅರಫಾ ಸಂಗಮ’ ಅರಫಾದ ದಿನವಿಡೀ ವಿಶ್ವಾಸಿಗಳು ಪ್ರಾರ್ಥನೆಯಲ್ಲಿ ಮುಳುಗಿರುತ್ತಾರೆ.ಹಜ್ಜಾಜ್ ಗಳು ಅರಫಾದಲ್ಲಿ ಸಂಗಮಿಸುವ ದುಲ್ ಹಜ್ ಒಂಬತ್ತರಂದು ವಿಶ್ವದಾದ್ಯಂತ ಮುಸ್ಲಿಮರು ಅರಫಾ ಉಪವಾಸವನ್ನು ಆಚರಿಸಿ ಹಜ್ ಯಾತ್ರಿಕರೊಂದಿಗೆ ಒಗ್ಗಟ್ಟನ್ನು ಪ್ರದರ್ಶಿಸುವರು.

ಅರಫಾದಲ್ಲಿ ಸೂರ್ಯಾಸ್ತದವರೆಗೆ ಕಳೆದ ನಂತರ, ಯಾತ್ರಿಕರು ಎರಡನೇ ದಿನ ರಾತ್ರಿ ಮುಸ್ದಲಿಫಾದಲ್ಲಿ ಕಳೆಯುತ್ತಾರೆ. ಮುಸ್ದಲಿಫಾಗೆ ಹಿಂದಿರುಗಿದ ನಂತರ, ಮಗ್ರಿಬ್ ಮತ್ತು ಇಶಾ ನಮಾಜ್ ನಿರ್ವಹಿಸುವರು. ಮಧ್ಯರಾತ್ರಿಯ ನಂತರ ಮಿನಾಗೆ ಹಿಂದಿರುಗುತ್ತಾರೆ.

ಮೊದಲ ದಿನ ಜಮ್ರತುಲ್ ಅಖಬಾದಲ್ಲಿ ಶೈತಾನನಿಗೆ ಕಲ್ಲೆಸೆಯುವ ಕರ್ಮವನ್ನು ಪೂರ್ಣಗೊಳಿಸುತ್ತಾರೆ. ಮುಂದಿನ ಮೂರು ದಿನ ರಾತ್ರಿಗಳನ್ನು ಮಿನಾದಲ್ಲಿ ತಂಗುವರು.

ಕೋವಿಡ್ ವ್ಯಾಪಿಸಿರುವ ಹಿನ್ನೆಲೆಯಲ್ಲಿ ಪ್ರತಿಯೊಂದು ಹಜ್ ಕರ್ಮಗಳನ್ನು ಭಾರೀ ಭದ್ರತೆಯಡಿಯಲ್ಲಿ ನಡೆಸಲಾಗುತ್ತದೆ. ಯಾತ್ರಾರ್ಥಿಗಳ ಆರೋಗ್ಯ ಮತ್ತು ಸುರಕ್ಷತೆಗಾಗಿ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಹಜ್ ಯಾತ್ರಾರ್ಥಿಗಳಿಗೆ ಜಮ್ರಾ ಗಳಲ್ಲಿ ಎಸೆಯಲು ಸೋಂಕು ಮುಕ್ತಗೊಳಿಸಿದ ಕಲ್ಲುಗಳನ್ನು ನೀಡಲಾಗುತ್ತದೆ. ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಹಜ್ ಸಚಿವಾಲಯವು ಎಲ್ಲಾ ಸಿದ್ಧತೆಗಳನ್ನು ಮಾಡಿದೆ. ಮಿನಾ ಮತ್ತು ಅರಫಾದಲ್ಲಿ ಈ ವರ್ಷ ತೀವ್ರ ಉಷ್ಣಾಂಶ ಇರಲಿದೆ.

error: Content is protected !! Not allowed copy content from janadhvani.com