janadhvani

Kannada Online News Paper

ವಿಶ್ವಾದ್ಯಂತ ಬಿಆರ್ ಶೆಟ್ಟಿಯ ಆಸ್ತಿಗಳ ಮುಟ್ಟುಗೋಲಿಗೆ ದುಬೈ ಕೋರ್ಟ್ ಆದೇಶ

ದುಬೈ: ಎನ್‌ಎಂಸಿ ಹೆಲ್ತ್ ಸಂಸ್ಥೆಯ ಸ್ಥಾಪಕ ಬಿ.ಆರ್. ಶೆಟ್ಟಿಯಿಂದ ತನಗೆ 8 ಮಿಲಿಯನ್ ಡಾಲರ್‌ಗೂ ಅಧಿಕ ಸಾಲ ಮರುಪಾವತಿಗೆ ಬಾಕಿಯಿದ್ದು ಅವರು ವಿಶ್ವದಾದ್ಯಂತ ಹೊಂದಿರುವ ಆಸ್ತಿಗಳ ಮುಟ್ಟುಗೋಲಿಗೆ ಆದೇಶ ನೀಡಬೇಕೆಂಬ ಬ್ಯಾಂಕ್‌ನ ಕೋರಿಕೆಯನ್ನು ಮನ್ನಿಸಿ, ದುಬೈ ನ್ಯಾಯಾಲಯ ಆದೇಶಿಸಿದೆ.

ಬಿ.ಆರ್. ಶೆಟ್ಟಿ, ನ್ಯೂ ಮೆಡಿಕಲ್ ಸೆಂಟರ್ ಟ್ರೇಡಿಂಗ್ ಮತ್ತು ಎನ್‌ಎಂಸಿ ಹೆಲ್ತ್‌ ಕೇರ್ ಸಂಸ್ಥೆಗಳ ವಿರುದ್ಧ ಡಿಐಎಫ್‌ಸಿ ಕೋರ್ಟ್ ನಲ್ಲಿ ನೆದರ್ ಲ್ಯಾಂಡ್ ಮೂಲದ ಕ್ರೆಡಿಟ್ ಯುರೋಪ್ ಬ್ಯಾಂಕ್‌ನ ದುಬೈ ವಿಭಾಗವು ಸಲ್ಲಿಸಿದ್ದ ಕೋರಿಕೆಯನ್ನು ಪರಿಗಣಿಸಿದ ನ್ಯಾಯಾಲಯ, ಆಸ್ತಿ ಮುಟ್ಟುಗೋಲಿಗೆ ಆದೇಶಿಸಿದೆ.

ಅರ್ಜಿಯಲ್ಲಿ ಉಲ್ಲೇಖಿಸಿದವರು, ಕಳೆದ ವರ್ಷದ ಡಿಸೆಂಬರ್‌ ನಲ್ಲಿ ಪಡೆದಿರುವ ಸಾಲ ತೀರಿಸಲು ಜಂಟಿಯಾಗಿ ಮತ್ತು ವ್ಯಕ್ತಿಗತ ರೂಪದಲ್ಲಿ ಹೊಣೆಗಾರರಾಗಿದ್ದಾರೆ ಎಂದು ಬ್ಯಾಂಕ್ ವಾದಿಸಿತ್ತು. ಸಾಲಕ್ಕೆ ಭದ್ರತೆಯಾಗಿ ಬಿಆರ್ ಶೆಟ್ಟಿ ಸಹಿ ಹಾಕಿದ ಎರಡು ಚೆಕ್‌ಗಳನ್ನು ನೀಡಲಾಗಿತ್ತು. (ಒಂದನ್ನು ಅವರ ವೈಯಕ್ತಿಕ ಖಾತೆಯಿಂದ, ಮತ್ತೊಂದನ್ನು ನ್ಯೂ ಮೆಡಿಕಲ್ ಸೆಂಟರ್ ಖಾತೆಯಿಂದ ನೀಡಲಾಗಿತ್ತು). ಖಾತೆಯಲ್ಲಿ ಸಾಕಷ್ಟು ಹಣವಿಲ್ಲ ಎಂಬ ಕಾರಣದಿಂದ ಎರಡೂ ಚೆಕ್‌ಗಳು ಬೌನ್ಸ್ ಆಗಿವೆ.

ಶೆಟ್ಟಿ “ಈಗ ಯುಎಇ ವ್ಯಾಪ್ತಿಯಿಂದ ಭಾರತಕ್ಕೆ ಪಲಾಯನ ಮಾಡಿದ್ದು ಅವರ ಅಬುಧಾಬಿ ಮತ್ತು ದುಬೈನಲ್ಲಿನ ಆಸ್ತಿಗಳು, ಜೊತೆಗೆ ಎನ್ಎಂಸಿ ಹೆಲ್ತ್, ಫಿನಾಬ್ಲರ್, ಬಿಆರ್ಎಸ್ ಇನ್ವೆಸ್ಟ್ಮೆಂಟ್ ಹೋಲ್ಡಿಂಗ್ಸ್ ಮತ್ತು ಇತರ ಕಂಪನಿಗಳ ಷೇರುಗಳು ಮುಟ್ಟುಗೋಲಾಗುವ ಆಸ್ತಿಗಳ ವ್ಯಾಪ್ತಿಯಲ್ಲಿದೆ ಎನ್ನಲಾಗಿದೆ,”ಸಾಮಾನ್ಯ ಜೀವನ ವೆಚ್ಚಗಳು ಮತ್ತು ಕಾನೂನು ಸಲಹೆ ಮತ್ತು ಪ್ರಾತಿನಿಧ್ಯಕ್ಕಾಗಿ ಸಮಂಜಸವಾದ ಮೊತ್ತ” ದ ಮೇಲೆ ಪ್ರತಿ ವಾರ $ 7,000 ವರೆಗೆ ಖರ್ಚು ಮಾಡಲು ನ್ಯಾಯಾಲಯ ಅನುಮತಿಸಿದೆ,

ಇನ್ನು ದಾವೆ ಸಂಬಂಧ ಈಗಿನ ಪರಿಸ್ಥಿತಿಯಲ್ಲಿ ಯಾವ ಪ್ರತಿಕ್ರಿಯೆ ನೀಡಲು ಕ್ರೆಡಿಟ್ ಯುರೋಪ್ ಬ್ಯಾಂಕ್ ನಿರಾಕರಿಸಿದೆ, ಅಲ್ಲದೆ ಶೆಟ್ಟಿ ಮತ್ತು ಎನ್‌ಎಂಸಿ ಹೆಲ್ತ್‌ಕೇರ್‌ನ ಪ್ರತಿನಿಧಿಗಳು ಸಹ ಈ ಕುರಿತು ಯಾವ ಪ್ರತಿಕ್ರಿಯೆಗೆ ನಿರಾಕರಿಸಿದ್ದಾರೆ.

ಶೆಟ್ಟಿ 1975 ರಲ್ಲಿಎನ್‌ಎಂಸಿ ಹೆಲ್ತ್‌ಕೇರ್ ಅನ್ನು ಸ್ಥಾಪಿಸಿದ್ದರು. ಒಂದೇ ಆಸ್ಪತ್ರೆಯಿಂದ ಯುಎಇಯ ಅತಿದೊಡ್ಡ ಖಾಸಗಿ ಸ್ವಾಮ್ಯದ ಹೆಲ್ತ್‌ಕೇರ್ ಆಪರೇಟರ್ ಆಗಿ ಬೆಳೆದ ಶೆಟ್ಟಿ ಅವರ ಈ ಹೆಲ್ತ್‌ಕೇರ್ ಸಂಸ್ಥೆಯಲ್ಲಿ 2,000 ವೈದ್ಯರು ಮತ್ತು 20,000 ಇತರ ಸಿಬ್ಬಂದಿಗಳಿದ್ದಾರೆ. ಕಂಪನಿಯು ಲಂಡನ್ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಪಟ್ಟಿಮಾಡಲ್ಪಟ್ಟಿದೆ.

error: Content is protected !! Not allowed copy content from janadhvani.com