janadhvani

Kannada Online News Paper

ಕೋವಿಡ್-19 ಮತ್ತು ಆನ್‌ಲೈನ್ ತರಗತಿಗಳು- ಸರಕಾರದ ನಿರ್ಲಕ್ಷ್ಯ ಧೋರಣೆ

ಕೋವಿಡ್-19ರಿಂದ ಅತೀ ಹೆಚ್ಚಾಗಿ ಪರಿಣಾಮ ಎದುರಿಸುತ್ತಿರುವುದು ಶಿಕ್ಷಣ ಕ್ಷೇತ್ರ ಎಂದು ಹೇಳಿದರೆ ತಪ್ಪಾಗಲಾರದು. 2020 ಮಾರ್ಚ್ 14ರಂದು ಶಾಲಾ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಬಳಿಕ ಇದುವರೆಗೆ ಚಟುವಟಿಕೆಗಳ ಪುನರಾರಂಭ ಸಾಧ್ಯವಾಗಿಲ್ಲ.

ಶಾಲಾ ಕಾಲೇಜು ಶಿಕ್ಷಣ ಪುನರಾರಂಭಗೊಳ್ಳಲು ಇನ್ನೂ ಸಮಯ ಬೇಕಾಗಬಹುದು. ಕೋವಿಡ್ ಹತೋಟಿಗೆ ಬರದೇ ಇರುವುದರಿಂದ, ಸರಕಾರ ಶಾಲಾ ಪುನರಾರಂಭಕ್ಕೆ ಅನುಮತಿ ನೀಡದು.

ಕೋವಿಡ್ ಪರಿಸ್ಥಿತಿ ಭಾರತದಾದ್ಯಂತ ಹದಗೆಟ್ಟಿರುವ ಈ ಸಂದರ್ಭದಲ್ಲಿ ಸಿಇಟಿ, ಡಿಗ್ರಿ ಮತ್ತು ಇಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿಗಳ ಪರೀಕ್ಷೆಯನ್ನು ನಡೆಸಲು ಮುಂದಾಗಿದೆ. ಎಸ್ಸೆಸ್ಸಲ್ಸಿ ಪರೀಕ್ಷೇ ಈಗಾಗಲೇ ಮುಗಿದಿದೆ.

ಹೀಗಿರುವಾಗ, KG ವಿದ್ಯಾರ್ಥಿಗಳಿಗೂ ಅನ್ವಯವಾಗುವಂತೆ ಪ್ರಾಥಮಿಕ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ನಡೆಸಲು ಸರಕಾರ ಆದೇಶ ಯಾ ಅನುಮತಿ ನೀಡಿದೆ. ಅದರ ಹೆಸರಿನಲ್ಲಿ ಹಲವಾರು ಖಾಸಗಿ ಶಾಲೆಗಳು ಈಗಾಗಲೇ ಆನ್‌ಲೈನ್ ತರಗತಿ ಪ್ರಾರಂಭಿಸಿದೆ. ಶುಲ್ಕ ವಸೂಲಿಯನ್ನೂ ಬಹಳ ಜೋರಾಗಿಯೇ ನಡೆಸುತ್ತಿದೆ. ಪೋಷಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಶಾಲಾಡಳಿತ ಮತ್ತು ಪೋಷಕರ ಮಧ್ಯೆ ವಾಗ್ವಾದಗಳು ನಡೆಯುತ್ತಿರುವುದು ಕಂಡು ಬರುತ್ತಿದೆ.

ಶಾಲೆ ಪುನರಾರಂಭ ಆಗದೇ ಇದ್ದರೂ ವಾರ್ಷಿಕ ಶುಲ್ಕದಲ್ಲಿ ಯಾವುದೇ ಕಡಿತ ಮಾಡದೇ, ಶುಲ್ಕ ಕಟ್ಟಲು ಶಾಲಾಡಳಿತ ಹೇಳುತ್ತಿರುವುದರಿಂದ ಪೋಷಕರು ರೊಚ್ಚಿಗೆದ್ದಿದ್ದಾರೆ.ಇವೆಲ್ಲದರ ನಡುವೆ ಸಿಲುಕಿ ಮಾರ್ಚ್ ಬಳಿಕ ಇದುವರೆಗೂ ಖಾಸಗಿ ಶಾಲಾ ಶಿಕ್ಷಕರು ಸೇರಿದಂತೆ, ಸಿಬ್ಬಂದಿಗಳೆಲ್ಲರೂ ವೇತನ ಪಡೆಯದೇ ಜೀವಂತವಾಗಿ ಬದುಕುತ್ತಿದ್ದಾರೆ.

ಕೆಲವು ಶಾಲಾಡಳಿತ ಅರ್ಧ ಸಂಬಳ ನೀಡಿದರೆ, ಇನ್ನೂ ಹಲವು ನಯಾ ಪೈಸೆಯನ್ನೂ ನೀಡದೇ ಸತಾಯಿಸುತ್ತಿದೆ. ಮಾತ್ರವಲ್ಲ, ಪೋಷಕರಿಂದ ಶಾಲಾ ಶುಲ್ಕ ವಸೂಲಿ ಮಾಡುತ್ತಲೂ ಇದ್ದಾರೆ. ಶಾಲೆ ಪುನರಾರಂಭಗೊಂಡರೆ, ಈ ಶಿಕ್ಷಕರನ್ನು ಮತ್ತೆ ದುಡಿಸಿಕೊಳ್ಳಲು ಅವರಿಗೆ ಯಾವುದೇ ಹಿಂಜರಿಕೆ ಇಲ್ಲ. ಕಾರಣ, ಶಿಕ್ಷಕರು ಬೇರೇಲ್ಲೂ ಹೋಗಲಾರರು ಕೋವಿಡ್ ಕಾರಣದಿಂದ ಎಂಬುದು ಅವರ ಬಲವಾದ ನಂಬಿಕೆ. ನಾಲ್ಕು ತಿಂಗಳಿಂದ ನಯಾ ಪೈಸೆ ವೇತನ ಪಡೆಯದ ಶಾಲಾ ಶಿಕ್ಷಕರೆಲ್ಲರೂ, ಶಾಲಾ ಪುನರಾರಂಭಗೊಂಡರೆ ಶಾಲೆಗೆ ಹಾಜರಾಗದೇ ಪ್ರತಿಭಟಿಸುವುದಾದರೆ, ಖಾಸಗಿ ಶಾಲಾಡಳಿತ ಸ್ವಲ್ಪ ಮಟ್ಟಿಗೆ ಪೆಟ್ಟು ಅನುಭವಿಸುತ್ತದೆಯೇನೋ? ಸರಕಾರ ತನ್ನ ಸಿಬ್ಬಂದಿಗಳ ವೇತನ ನೀಡಲು ಪರದಾಡುತ್ತಿರುವಾಗ, ಖಾಸಗಿ ಶಾಲಾ ಶಿಕ್ಷಕರನ್ನು ಗಮನಿಸಬೇಕೆಂದು ಹೇಳುವುದು ಮೂರ್ಖತನವಾದೀತು.

ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಸರಕಾರ ಸ್ಪಷ್ಟವಾಗಿ ಯಾವುದೇ ತೀರ್ಮಾನ ಕೈಗೊಂಡಂತಿಲ್ಲ. ಆನ್‌ಲೈನ್ ಪಾಠ ಮಾಡಬೇಕೆಂದು ತಿಳಿಸಿದೆಯೇ ಹೊರತು, ಸಿಲೆಬಸ್ ಎಷ್ಟು ಎಂದು ತಿಳಿಸಿಲ್ಲ. ಈ ವರ್ಷದ ಎಸ್ಸೆಸ್ಸಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಬಗ್ಗೆಯೂ ಯಾವುದೇ ತೀರ್ಮಾನ ಕೈಗೊಂಡಿಲ್ಲ.

ಹಲವಾರು ವಿದ್ಯಾರ್ಥಿಗಳಿಗೆ ಮೊಬೈಲ್ ಇಲ್ಲ, ಇರುವವರಲ್ಲಿ ಹಲವರಿಗೆ ನೆಟ್ವರ್ಕ್ ಸಮಸ್ಯೆ. ಈ ವಿದ್ಯಾರ್ಥಿಗಳು ಆನ್‌ಲೈನ್ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಅನ್ನುವುದು ಸರಕಾದ ಗಮನಕ್ಕೆ ಬಂದಿಲ್ಲವೇನೋ ಅಲ್ಲ ಹಾಗೆ ನಟಿಸುತ್ತಿದೆಯೇ? ಖಾಸಗಿ ಶಾಲಾಡಳಿತದ ಮಾಫಿಯಾಗೆ ಬಲಿಯಾಗಿ ಸರಕಾರ ತಜ್ಞರಿಂದ ಆನ್‌ಲೈನ್ ತರಗತಿ ನಡೆಸುವ ಬಗ್ಗೆ ವರದಿ ತರಿಸಿಕೊಂಡಿತ್ತು. ಅ ತಜ್ಞರ ತಂಡವು ಈ ಬಗ್ಗೆ ಏನೂ ಪ್ರತಿಪಾದಿಸಿಲ್ಲ ಅನ್ನುವುದು ವಿಸ್ಮಯದ ಸಂಗತಿಯಲ್ಲವೇ?

ಈ ವರ್ಷದಾದ್ಯಂತ ಶಾಲಾ ಚಟುವಟಿಕೆಗಳು ಇದೇ ರೀತಿ ಮುಂದುವರೆದರೆ, ಶಾಲಾ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಸರಕಾರ, ಶಿಕ್ಷಣ ಇಲಾಖೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಆನ್‌ಲೈನ್ ಶಿಕ್ಷಣ ವಂಚಿತ ಮಕ್ಕಳ ಭವಿಷ್ಯದ ಬಗ್ಗೆಯೂ ಗಮನ ಹರಿಸಬೇಕಾಗಿದೆ.

ಈ ವರ್ಷ ಶಾಲಾ ಚಟುವಟಿಕೆಗಳನ್ನು ರದ್ದುಗೊಳಿಸಿ ಮುಂದಿನ ವರ್ಷದಿಂದಲೇ ಪ್ರಾರಂಭಿಸುವ ಬಗ್ಗೆ ಆಲೋಚಿಸಬೇಕಿದೆ. ಶಾಲಾ ಶುಲ್ಕವನ್ನು ಪಡೆಯದೇ, ಖಾಸಗಿ ಶಾಲಾ ಶಿಕ್ಷಕರ ವೇತನಕ್ಕೆ ಬದಲಿ ವ್ಯವಸ್ಥೆಯಾಗಬೇಕಿದೆ. ಈ ನಿಟ್ಟಿನಲ್ಲಿ ಖಾಸಗಿ ಶಾಲಾಡಳಿತ, ಶಿಕ್ಷಣ ತಜ್ಞರು ಮತ್ತು ಸರಕಾರ ಚರ್ಚೆ ಮಾಡಬೇಕಿದೆ.

error: Content is protected !! Not allowed copy content from janadhvani.com