ಸಾಕ್ಷರತೆಯ ರಾಜ್ಯವೆನಿಸಿಕೊಂಡ ಕೇರಳದಲ್ಲಿ ನಡೆಯಿತು ಮತ್ತೊಂದು ಮನುಷ್ಯತ್ವವಿಲ್ಲದ ಕೊಲೆ..!!

ಸಾಕ್ಷರತಾ ಪ್ರಮಾಣದಲ್ಲಿ ಮುಂಚೂಣಿಯಲ್ಲಿರುವ ರಾಜ್ಯವೆನಿಸಿಕೊಂಡ ಕೇರಳ ಇತ್ತೀಚೆಗೆ ಯಾಕೋ ಮನುಷ್ಯತ್ವವಿಲ್ಲದ ವರ್ತನೆಗಳಿಂದ ಕುಖ್ಯಾತಿಗೊಳಪಡುತ್ತಲೇ ಇದೆ.
ರಾಜಕೀಯ ಸಂಘರ್ಷಗಳಿಂದಲೇ ಮನುಷ್ಯ ಜೀವಗಳನ್ನು ಪ್ರಾಣಿಗಳಿಗಿಂತಲೂ ಕೀಳಾಗಿ ಕೊಂದು ಹಾಕುವ ಘಟನೆಗಳಿಂದ ಪದೇ ಪದೇ ಕೇರಳವು ಸುದ್ಧಿಯಾಗುತ್ತಿದ್ದರೂ , ಅದರ ನಡುವೆ ಮನುಷ್ಯತ್ವವಿಲ್ಲದ ಇನ್ನಿತರ ಘಟನೆಗಳಿಂದಲೂ ಸುದ್ಧಿಯಾಗುತ್ತಿರುವುದು ದುರಂತ.
ಒಂದು ವಾರದ ಹಿಂದೆ ಅಸಹಾಯಕ ಕುಟುಂಬಗಳ ನೋವಿಗೆ ಆಸರೆಯಾಗುತ್ತಾ , ತನ್ನ ಯುವತ್ವವನ್ನು ಸಾಮಾಜಿಕ ಕಾಳಜಿ, ಮಾನವೀಯ ಸೇವೆಗಳಿಗಾಗಿ ಮೀಸಲಿರಿಸಿದಂತಹ ಕಣ್ಣೂರಿನ ಮಟ್ಟನ್ನೂರು ನಿವಾಸಿ ಶುಹೈಬ್ ಅನ್ನುವಾತ ಒಂದು ಪಕ್ಷದಲ್ಲಿ ಗುರುತಿಸಿದ್ದ ಅನ್ನುವ ಕಾರಣಕ್ಕಾಗಿ ಇನ್ನೊಂದು ಪಕ್ಷದ ಕಾರ್ಯಕರ್ತರಿಂದ ಅಮಾನುಷವಾಗಿ ಕೊಲೆಗೀಡಾಗುತ್ತಾನೆ. ಅದಕ್ಕಿಂತ ಮೊದಲೂ ವಿವಿಧ ಪಕ್ಷದ ಹಲವು ಕಾರ್ಯಕರ್ತರು ನೀಚ ರಾಜಕೀಯ ವ್ಯವಸ್ಥೆಗಾಗಿ ತಮ್ಮ ಜೀವವನ್ನು ಬಲಿ ಅರ್ಪಿಸಿದ್ದಾರೆ.
ಆ ಘಟನೆ ಮರೆಯಾಗುವ ಮುನ್ನವೇ ನಿನ್ನೆಯ ದಿನ ಹಸಿದ ಹೊಟ್ಟೆಯ ಹಸಿವನ್ನು ನೀಗಿಸಲು ಒಂದೊತ್ತಿನ ಊಟಕ್ಕೆ ಬೇಕಾದ ಅಕ್ಕಿಯನ್ನು ಕದ್ದ ಆರೋಪದಲ್ಲಿ ಮಾನಸಿಕ ಅಸ್ವಸ್ಥನಾಗಿದ್ದ ಪಾಲಕ್ಕಾಡ್ ಜಿಲ್ಲೆಯ ಅಟ್ಟಪಾಡಿ ನಿವಾಸಿ 27 ರ ಹರೆಯದ ಮಧು ಅನ್ನುವಾತನನ್ನು ಹೊಡೆದು ಸಾಯಿಸಿ ಅತೀ ಕ್ರೂರವಾದ ಘಟನೆಯೊಂದು ನಡೆದು ಹೋಯಿತು.
ಒಬ್ಬ ಮಾನಸಿಕ ಅಸ್ವಸ್ಥನಾಗಿದ್ದ ವ್ಯಕ್ತಿಗೆ ಹೊಡೆದು ಸಾಯಿಸುವಾಗ ಕೆಲವರು ಸೆಲ್ಫಿ ತೆಗೆದು ಸಂಭ್ರಮಿಸಿದ್ದು ಸಾಕ್ಷರತೆಯ ರಾಜ್ಯವೆನಿಸಿಕೊಂಡ ರಾಜ್ಯವೊಂದು ಜನತೆಯ ಅಲ್ಪ ಬುದ್ಧಿಗೆ , ಅಮಾನವೀಯತೆಗೆ ಹಿಡಿದ ಕೈ ಗನ್ನಡಿಯಂತಿತ್ತು.
ಅದಲ್ಲದೆ ಆ ವ್ಯಕ್ತಿಗೆ ಥಳಿಸುವಾಗ ಅಲ್ಲಿ ಗಡ್ಡ ಧರಿಸಿದ ಮುಸ್ಲಿಮನೂ, ಖಾವಿ ಧರಿಸಿದ ಹಿಂದುವೂ ಇದ್ದದ್ದು ಆ ವೀಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ.
ಮಾನವೀಯತೆಯನ್ನು ಬೋಧಿಸುವ ಧರ್ಮದ ಅನುಯಾಯಿಗಳಿಗೆ *”ನಿನ್ನ ನೆರೆಯವನು ಹಸಿದಿರುವಾಗ ಹೊಟ್ಟೆ ತುಂಬಾ ಉಣ್ಣುವವನು ಮುಸ್ಲಿಮನಲ್ಲ”, “ಮನುಷ್ಯರೊಂದಿಗೆ ಕರುಣೆ ತೋರಿರಿ”. “ಭೂಮಿಯಲ್ಲಿರುವ ಸರ್ವರ ಸುಖವನ್ನು ಬಯಸುವಂತರಾಗಿ”* ಅನ್ನುವಂತಹ ಉದಾತ್ತ ಸಂದೇಶಗಳು ಅರ್ಥವಾಗದೇ ಹೋದದ್ದು ವಿಪರ್ಯಾಸ.
ಒಂದೆರಡು ವರ್ಷಗಳ ಹಿಂದೆ ಕಾಸರಗೋಡಿನ ಆರರ ಹರೆಯದ ವಿದ್ಯಾರ್ಥಿ ಫಹದ್ ನನ್ನು ತನ್ನ ಸಹೋದರಿಯೊಂದಿಗೆ ಶಾಲೆಗೆ ತೆರಳುತ್ತಿದ್ದಾಗ ಹಿಂದಿನಿಂದ ಬಂದು ಚೂರಿ ಇರಿದು ಕೊಂದಂತಹ ಅಮಾನವೀಯ ಘಟನೆಯೊಂದಕ್ಕೂ ಸಾಕ್ಷಿಯಾಗಿದ್ದವು. ಆರೋಪಿಯನ್ನು ಮಾನಸಿಕ ಅಸ್ವಸ್ಥ ಅನ್ನುವುದರ ಮೂಲಕವೂ ಆ ಪ್ರಕರಣವನ್ನು ಮರೆ ಮಾಚುವಂತಹ ವ್ಯವಸ್ಥಿತವಾದ ಷಡ್ಯಂತ್ರಗಳು ಅಂದೂ ನಡೆದಿದ್ದವು.

“ನನ್ನ ಮಗ ಮಾನಸಿಕ ಅಸ್ವಸ್ಥ , ಕಾಡಿನಲ್ಲೇ ಅದ್ಯಾಗೋ ಹೊಟ್ಟೆ ತುಂಬಿಸಿಕೊಂಡು ಬದುಕುತ್ತಿದ್ದ , ಅವನನ್ನು ಯಾಕೆ ಕೊಂದು ಹಾಕಿದ್ದಿರಿ”  ಅನ್ನುವ ಹೆತ್ತ ತಾಯಿಯ ಅಸಹಾಯಕತೆಯ ಕೂಗಿಗೆ ಇಂದು ಉತ್ತರ ನೀಡುವಂತಹ ಕೆಲಸಗಳು ನಡೆಯಬೇಕಾಗಿದೆ.
ಮಾನಸಿಕ ಅಸ್ವಸ್ಥನಾಗಿದ್ದ ಆದಿವಾಸಿ ವ್ಯಕ್ತಿಯನ್ನು ಕೊಂದು ಹಾಕಿ ಸೆಲ್ಫಿ ತೆಗೆದು ಸಂಭ್ರಮಿಸಿದ ವ್ಯಕ್ತಿಗಳಿಗ್ಯಾರಿಗೂ ಹಸಿವಿನ ಮಹತ್ವ ಗೊತ್ತಿಲ್ಲದಿರಬಹುದು. ಒಂದು ವೇಳೆ ಗೊತ್ತಿದ್ದೇ ಆಗಿದ್ದಲ್ಲಿ ಖಂಡಿತವಾಗಿಯೂ ಅಸಹಾಯಕತೆಯಿಂದ ನಿಂತುಕೊಂಡು ತನಗೆ ಥಳಿಸುವಾಗಲೂ ಮೌನವಾಗಿದ್ದುಕೊಂಡು ಅವರನ್ನೇ ನೋಡುತ್ತಿದ್ದ ಆ ವ್ಯಕ್ತಿಯ ಶರೀರ ಮುಟ್ಟಲು ಅವರ ಆತ್ಮಸಾಕ್ಷಿ ಒಪ್ಪುತ್ತಿರಲಿಲ್ಲವೇನೋ..?!
ತನ್ನ ಹಸಿವನ್ನು ನೀಗಿಸಲು ನಿರ್ವಾಹವಿಲ್ಲದೆ ಆತನು ಆಯ್ದುಕೊಂಡ ಮಾರ್ಗ ಕಳ್ಳತನವಾಗಿದ್ದರೂ ಅದನ್ನು ಪ್ರಶ್ನಿಸಲು ಇಲ್ಲೊಂದು ನ್ಯಾಯ ವ್ಯವಸ್ಥೆಯಿದೆ. ಅದು ಬಿಟ್ಟು ಕಾನೂನು ಕೈಗೆತ್ತಿಕೊಂಡು ಒಂದು ಜೀವದ ಮೇಲೆ ಅಮಾನುಷವಾದ ವರ್ತನೆ ತೋರಿದ ಪ್ರತಿಯೊಬ್ಬರಿಗೂ , ಅದಕ್ಕೆ ದೃಶ್ಯ ಸಾಕ್ಷಿಗಳಾಗಿದ್ದ ಎಲ್ಲರನ್ನೂ ಕಾನೂನಿನ ಮುಂದೆ ನಿಲ್ಲಿಸಿ , ಒಂದು ಜೀವದ ಬೆಲೆ, ಮಹತ್ವ ಅರ್ಥವಾಗುವ ರೀತಿಯಲ್ಲಿ ಕಠಿಣ ಶಿಕ್ಷೆಯಾಗಲಿ . ಮನುಷ್ಯ ಜೀವಗಳನ್ನು ಪ್ರಾಣಿಗಳಿಗಿಂತಲೂ ಕೀಳಾಗಿ ತಮ್ಮ ರಾಜಕೀಯ ಸ್ವಾರ್ಥತೆಗಾಗಿಯೂ , ಇನ್ನಿತರ ಕಾರಣಗಳಿಂದ ಮನುಷ್ಯತ್ವ ಇಲ್ಲದವರಾಗಿ ಕೊಂದು ಹಾಕುವ ವ್ಯವಸ್ಥೆಳಿಗೆ ಅಂತ್ಯವಾಗಲಿ ಎಂದು ಆಶಿಸುತ್ತಾ , ಕೊಲೆಗೀಡಾದ ವ್ಯಕ್ತಿಗಳ ಕುಟುಂಬಕ್ಕೆ ಸರ್ವಶಕ್ತನು ಸಹನೆಯನ್ನು ದಯಪಾಲಿಸಲಿ.

ಸ್ನೇಹಜೀವಿ ಅಡ್ಕ.

Leave a Reply

Your email address will not be published. Required fields are marked *

error: Content is protected !!