janadhvani

Kannada Online News Paper

16 ರಿಂದ ದ.ಕ.ಜಿಲ್ಲೆಯಲ್ಲಿ ಒಂದು ವಾರಗಳ ಕಾಲ ಲಾಕ್‌ಡೌನ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿರುವ ಕೊರೊನಾ ಸೋಂಕು ಆತಂಕಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಇದೇ 16 ರಿಂದ ಜಿಲ್ಲೆಯಲ್ಲಿ ಒಂದು ವಾರಗಳ ಕಾಲ ಲಾಕ್‌ಡೌನ್ ಜಾರಿಗೆ ತರಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಸೋಮವಾರ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರೊಂದಿಗೆ ವಿಡಿಯೋ ಸಂವಾದದಲ್ಲಿ ಭಾಗವಹಿಸಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಸೇರಿದಂತೆ ಹಲವು ಅಧಿಕಾರಿಗಳು ಮತ್ತೊಂದು ಸುತ್ತಿನ ಚರ್ಚೆ ನಡೆಸಿ ಬಳಿಕ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಚಿವ ಕೋಟ ಸ್ಪಷ್ಟಪಡಿಸಿದ್ದಾರೆ.

‘ನಮ್ಮ ಜಿಲ್ಲೆಯಲ್ಲಿ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಕೊರೊನಾ ನಿಯಂತ್ರಣಕ್ಕಾಗಿ ಒಂದಷ್ಟು ದಿನಗಳ ಕಾಲ ಮತ್ತೆ ಲಾಕ್ ಡೌನ್ ಸೂಕ್ತ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ 16 ರಿಂದ ಒಂದು ವಾರಗಳ ಕಾಲ ಲಾಕ್ ಡೌನ್ ಜಾರಿಗೊಳಿಸಲಾಗುವುದು. ಈ ಹಿನ್ನಲೆಯಲ್ಲಿ ನಾನು ಜಿಲ್ಲೆಯ ಎಲ್ಲಾ ಜನರಲ್ಲಿ ವಿನಂತಿಸುತ್ತಿದ್ದು, ಇನ್ನು ಎರಡು ದಿನಗಳ ಕಾಲಾವಕಾಶ ಇರುವುದರಿಂದ ವಾರಗಳಿಗೆ ಅಗತ್ಯವಿರುವ ದಿನಸಿ ಸಾಮಗ್ರಿ ಹಾಗೂ ಮೂಲಭೂತ ಅವಶ್ಯಕತೆಗಳನ್ನು ಖರೀದಿ ಮಾಡಿಟ್ಟುಕೊಳ್ಳಬೇಕು” ಎಂದು ಸಚಿವ ಕೋಟ ಮನವಿ ಮಾಡಿದ್ದಾರೆ.

ಜಿಲ್ಲಾಡಳಿತ ನಿರ್ಧರಿತ ಲಾಕ್ ಡೌನ್ ನ ಕುರಿತ ಮಾರ್ಗಸೂಚಿ ಮತ್ತು ನಿಯಮಗಳನ್ನು ಜಿಲ್ಲಾಧಿಕಾರಿಗಳು ಪ್ರಕಟಿಸಲಿದ್ದು, ಜಿಲ್ಲೆಯ ಜನರು ಲಾಕ್‌ಡೌನ್ ಹಾಗೂ ಕೊರೊನಾ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಇದೇ ವೇಳೆ ಸಚಿವರು ಮನವಿ ಮಾಡಿದ್ದಾರೆ.

ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕ ಗಣ್ಯರಲ್ಲಿ ಚರ್ಚಿಸಿದಾಗ ಒಂದಷ್ಟು ದಿನಗಳಾದರೂ ಏರಿಕೆಯಾಗುತ್ತಿರುವ ಕೊರೋನ ಸೋಂಕಿನ ನಿಯಂತ್ರಣಕ್ಕೆ ಲಾಕ್‌ಡೌನ್ ಅನಿವಾರ್ಯ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ. ಆ ಕಾರಣ ಗುರುವಾರದಿಂದ ಒಂದು ವಾರ ಕಾಲ ಜಿಲ್ಲೆಯಲ್ಲಿ ಲಾಕ್‌ಡೌನ್‌ಗೆ ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದ್ದಾರೆ.

ಇಂದಿನಿಂದ ಬುಧವಾರದವರೆಗೆ ಎಲ್ಲಾ ವಾಣಿಜ್ಯ ವ್ಯವಹಾರಗಳು ತೆರೆದಿದ್ದು, ಸಾರ್ವಜನಿಕರು ಅಗತ್ಯ ಸಾಮಗ್ರಿಗಳು ಹಾಗೂ ಮೂಲಭೂತ ಅಗತ್ಯ ವಸ್ತುಗಳನ್ನು ಖರೀದಿಸಬೇಕು. ಬುಧವಾರ ರಾತ್ರಿಯಿಂದ ಒಂದು ವಾರ ನಡೆಯಲಿರುವ ಲಾಕ್‌ಡೌನ್ ಬಗ್ಗೆ ಜಿಲ್ಲಾಧಿಕಾರಿ ಮಾರ್ಗಸೂಚಿ ಹಾಗೂ ನಿಯಮಗಳನ್ನು ಪ್ರಕಟಿಸಲಿದ್ದಾರೆ. ಸಾರ್ವಜನಿಕರು ಕೊರೋನ ನಿಯಂತ್ರಣ ದೃಷ್ಟಿಯಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳುವ ಅಗತ್ಯವಿರುವುದರಿಂದ ಲಾಕ್‌ಡೌನ್ ಘೋಷಿಸಲಾಗುತ್ತಿದೆ. ಎಲ್ಲರೂ ಸಹಕಾರ ನೀಡಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಮನವಿ ಮಾಡಿದ್ದಾರೆ.

error: Content is protected !! Not allowed copy content from janadhvani.com