janadhvani

Kannada Online News Paper

ದಕ್ಷಿಣ ಕನ್ನಡ ಜಿಲ್ಲೆಯ ಕೋವಿಡ್ ಮರಣ ಮತ್ತು ಮಾಧ್ಯಮಗಳ ಕೋಲಾಹಲ…!!!

ಜನಧ್ವನಿ ವಿಶೇಷ :ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ರವರು ವೈದ್ಯಾಧಿಕಾರಿಗಳ ಜೊತೆ ನಡೆಸಿದ ಇಂದಿನ ಸಭೆಯಲ್ಲಿ ಮಹತ್ವದ ಅಂಶವೊಂದು ಬೆಳಕಿಗೆ ಬಂದಿದೆ ಅದೆಂದರೆ ಜುಲೈ 10 ರವರೆಗೆ ಜಿಲ್ಲೆಯಲ್ಲಿ 36 ಮರಣಗಳು ಕೋವಿಡ್ ತಲೆಬರಹದಲ್ಲಿ ಸಂಭವಿಸಿದ್ದು ಇದರಲ್ಲಿ ಕೇವಲ 4 ಮಂದಿಯ ಮರಣ ಮಾತ್ರ ಸ್ಪಷ್ಟವಾಗಿ ಕೋವಿಡ್ ಸೋಂಕು ತಗುಲಿ ಸಂಭವಿಸಿದ್ದು ಎಂಬುದಾಗಿದೆ. ಇತರ ಮರಣಗಳು ಮತ್ತಿತರ ರೋಗಗಳ ಕಾರಣ ಸಂಭವಿಸಿದ್ದಾಗಿದೆ ಅದೂ ಅಲ್ಲದೆ ಒಂದು ಮರಣ ಕೋವಿಡ್ ಸಂಬಂಧಿತ ಪ್ರಕರಣವೇ ಅಲ್ಲ…!!!

ಇಲ್ಲಿ ಉದ್ಭವವಾಗುವ ಮುಖ್ಯ ಪ್ರಶ್ನೆ ಮತ್ತು ಆತಂಕಕ್ಕೆ ದೂಡುವ ಅಂಶವೆಂದರೆ ಉಳಿದ 32 ಮರಣಗಳನ್ನು ಮಾಧ್ಯಮಗಳಲ್ಲಿ ಕೋವಿಡ್ ಮರಣ ಎಂದು ಅಚ್ಚು ಒತ್ತಿದವರು ಯಾರು? ಈ ಮಾಧ್ಯಮಗಳಿಗೆ ಮಾಹಿತಿ ನೀಡಿದ ಮಾಹಿತಿದಾರರು/ವಾರ್ತಾಧಿಕಾರಿಗಳು ಯಾರು?
ತಪ್ಪು ಮಾಹಿತಿ ನೀಡುವವರಿಗೆ ಸೂಕ್ತ ಶಿಕ್ಷೆ ನೀಡುವ ಕಾನೂನು ನಮ್ಮಲ್ಲಿ ಇಲ್ಲವೇ?

ಮರಣ ಹೊಂದಿದ ಮೃತ ಶರೀರವನ್ನು ಸ್ವತಃ ಪೋಷಕರು/ಗಂಡ/ಹೆಂಡತಿ/ಮಕ್ಕಳ ಅಂತ್ಯ ದರ್ಶನಕ್ಕೂ ಸಾಧ್ಯವಾಗದ ರೀತಿಯಲ್ಲಿ ಪ್ಲಾಸ್ಟಿಕ್ ನಿಂದ ಸುತ್ತಿ ಮೃತ ಶರೀರಕ್ಕೆ ಕೊಡಬೇಕಾದ ಕನಿಷ್ಠ ಮರ್ಯಾದೆಯನ್ನೂ ನೀಡದೆ ತರಾ ತುರಿಯಲ್ಲಿ ಅಂತ್ಯ ಸಂಸ್ಕಾರವನ್ನು ನಡೆಸಲು ಕಾರಣಕರ್ತರು ಯಾರು? ಮೃತ ವ್ಯಕ್ತಿಗಳ ಮನೆಯವರನ್ನೂ ಅವರ ಸಂಪರ್ಕಿತರನ್ನೂ ಕ್ವಾರಂಟೈನ್ ಹೆಸರಲ್ಲಿ ಆಸ್ಪತ್ರೆಗಳಿಗೆ ದೂಡಿ ಅವರ ಮಾನಸಿಕ ಸ್ಥಿತಿಯನ್ನೇ ಬುಡಮೇಲು ಮಾಡಿದ / ಮಾಡುತ್ತಿರುವ ಹೊಣೆ ಹೊರುವ ಪುಣ್ಯಾತ್ಮರು ಯಾರು? ಖಾಸಗಿ ಆಸ್ಪತ್ರೆಗಳು ಕೋವಿಡ್ ಹೆಸರಲ್ಲಿ ಲಕ್ಷಾಂತರ ದೋಚುವ ಸಂಚಿಗೆ ತೆರೆಮರೆಯ ಪಾತ್ರಧಾರಿಗಳು ಯಾರು? ಇವೆಲ್ಲಾ ಕೇವಲ ಕನಿಷ್ಠ ಪ್ರಶ್ನೆಗಳು ಮಾತ್ರ;

ಜಿಲ್ಲೆಯ ಇಂದಿನ ಸ್ಥಿತಿ ಗತಿ ಪರಿಶೀಲಿಸುವಾಗ ಕೊರೋನಾ ಬಂದರೂ ಆಸ್ಪತ್ರೆಗೆ ಹೋಗಲು ಜನ ತಯಾರಿಲ್ಲ, ಕಾರಣ ಆಸ್ಪತ್ರೆಗಳ ಲೂಟಿ ಒಂದು ಕಡೆಯಾದರೆ ಆರೋಗ್ಯವಂತ ವ್ಯಕ್ತಿಯೂ ಆಸ್ಪತ್ರೆಗೆ ಹೋಗಿ ವಾಪಸ್ ಆಗುವುದು ಮೃತ ಶರೀರವಾಗಿ ಎಂಬುವ ಹಂತಕ್ಕೆ ಪರಿಸ್ಥಿತಿ ಬಂದೊದಗಿದ್ದು.

ರಾಜ್ಯದ ಕೂಗುಮಾರಿ ದೃಶ್ಯ ಮತ್ತು ಮುದ್ರಣ ಮಾಧ್ಯಮಗಳು ಪ್ರಾರಂಭದಲ್ಲಿ ಕೊರೋನಾವನ್ನು ನಿಗದಿತ ಸಮುದಾಯಕ್ಕೆ ಮಾತ್ರ ಮೀಸಲಿಟ್ಟು ಸಮಾಜದಲ್ಲಿ ತಲೆ ಎತ್ತಿ ನಡೆಯಲು ಆಗದಂತೆ ಮಾಡಲು ಸರ್ವತೋಮುಖ ಪ್ರಯತ್ನ ಮಾಡಿ ಕೊನೆಗೆ ಮಂಡಿಯೂರಿದ್ದು ಎಲ್ಲರಿಗೂ ತಿಳಿದ ಸತ್ಯ. ಸಾರ್ವಜನಿಕ ವಾಗಿ ಕೆಮ್ಮಿದರೂ ವೇಷ ಭೂಷಣ ನೋಡಿ ಕೊರೋಣವೋ ಅಲ್ಲವೋ ಎಂದು ಮಾಧ್ಯಮದ ಗಾಜಿನ ಒಳಗೆ ಇರುವ ಸ್ಟುಡಿಯೋ ರೂಮಲ್ಲಿ ಕುಳಿತಿದ್ದ ವಾರ್ತಾ ನಿರೂಪಕ ಗುರುತಿಸುತ್ತಿದ್ದ…!!! ಇದೆಲ್ಲವನ್ನೂ ಕಂಡೂ ಕೇಳಿ ಇಲ್ಲಿನ ಆಡಳಿತ ಯಂತ್ರ ಮಾತ್ರ ಕಣ್ಣಾ ಮುಚ್ಚಾಲೆ ಆಡುತ್ತಿದ್ದುದು ವಿಪರ್ಯಾಸವಲ್ಲದೆ ಮತ್ತೇನು?

ಮಂಗಳೂರಿನ ಹೆಸರಾಂತ ವೈದ್ಯರೊಬ್ಬರು ಕೊರೋನಾದ ಪ್ರಾಥಮಿಕ ಹಂತದಲ್ಲೇ ಸರಕಾರವನ್ನು ಎಚ್ಚರಿಸುತ್ತಾ ಬಂದಿದ್ದರು. ಶೀತ, ತಲೆನೋವು, ಜ್ವರ ಎಲ್ಲದಕ್ಕೂ ಕೊರೋನಾದ ಹೆಸರು ಹೇಳಿ ಸರಕಾರಿ ಆಸ್ಪತ್ರೆಗಳ ಬೆಡ್ ಭರ್ತಿ ಮಾಡಿದರೆ ರೋಗವು ಉಲ್ಭಣಿಸಿ ಆಸ್ಪತ್ರೆಯು ಅತ್ಯವಶ್ಯಕವಾಗಿರುವ ರೋಗಿಗಳಿಗೆ ದೊರಕದ ಸ್ಥಿತಿ ಬರಬಹುದು ಎಂದು, ಆದರೆ ಯಾವುದನ್ನೂ ಕಿವಿಗೆ ಹಾಕಿಕೊಳ್ಳದ ಜಿಲ್ಲಾಡಳಿತ/ರಾಜ್ಯಾಡಳಿತ ತಾನು ನಡೆದದ್ದೇ ಹಾದಿ ಎಂದು ಅರಿತು ಇದೀಗ ತಲೆಗೆ ಕೈ ಹೊತ್ತು ಕೂರುವ ಹಂತಕ್ಕೆ ಬಂದು ತಲುಪಿದೆ. ನೆಪಕ್ಕೆ ಮಾತ್ರ ಸಂಡೇ ಲಾಕ್ ಡೌನ್ ಬೇರೆ ನಡೆಯುತ್ತಿದೆ. ರಾಜ್ಯದಲ್ಲಿ ಇನ್ನು ಲಾಕ್ ಡೌನ್ ಯಾವ ಕಾರಣಕ್ಕೂ ಮಾಡಲ್ಲ ಎಂಬ ಧ್ವನಿ ಮುದ್ರಿತ ಮಾತಿನಲ್ಲೇ ದಿನ ದೂಡುತ್ತಿದ್ದ ಮುಖ್ಯ ಮಂತ್ರಿ, ವೈದ್ಯಕೀಯ ಸಚಿವ, ಆರೋಗ್ಯ ಸಚಿವರು ಇದೀಗ ಏಕಾ ಏಕಿ ಮಾತು ಬದಲಿಸಿ ಮತ್ತೆ ಬೆಂಗಳೂರಲ್ಲಿ ಲಾಕ್ ಡೌನ್ ಹೇರುವ ಮೂಲಕ ಮತ್ತು ಇತರ ಕೆಲವು ಜಿಲ್ಲೆಗಳಲ್ಲೂಯೂ ಲಾಕ್ ಡೌನ್ ಹೇರುವ ಎಲ್ಲಾ ಲಕ್ಷಣಗಳೂ ಸ್ಪಷ್ಟವಾಗಿ ಗೋಚರಿಸತೊಡಗಿದೆ.

ಸಾಂಕ್ರಾಮಿಕ ರೋಗಗಳು ಅಥವಾ ಯಾವುದೇ ರೋಗಗಳು ಸಮಾಜದಲ್ಲಿ ಜಾತಿ, ಧರ್ಮಗಳನ್ನು ನೋಡಿಕೊಂಡು ಬರುವುದಿಲ್ಲ, ಇಂದು ಪಕ್ಕದವನಿಗೆ ಬಂದರೆ ನಾಳೆ ನನಗೂ ಬಂದೀತು ಎಂಬ ಮನೋಭಾವನೆಯನ್ನು ನಾವೆಲ್ಲರೂ ರೂಢಿಸಿಕೊಂಡು ಪರಸ್ಪರ ಸಹಕಾರ ನೀಡಿ ಬದುಕಬೇಕು ಮತ್ತು ಬದುಕಲು ಕಲಿಸಬೇಕು.

ತಟ್ಟೆ, ಜಾಗಟೆ, ಗಂಟೆ ಭಾರಿಸಿ ದೀಪ ಹೊತ್ತಿಸಿ, ಪಟಾಕಿ ಹಚ್ಚಿ, ಸೆಗಣಿ ಮೆತ್ತಿ, ಗೋ ಮೂತ್ರ ಕುಡಿಸಿ ಕೊರೋನಾ ಓಡಿಸಬಹುದೆಂಬ ಭ್ರಮೆಯಲ್ಲಿ ಇದ್ದ ಸಮಾಜದ ಉನ್ನತ ವರ್ಗವೆಂದು ಬಿಂಬಿಸಿಕೊಳ್ಳುತ್ತಿರುವವರು ಸ್ವತಃ ಸೋಂಕು ತಗುಲಿಸಿಕೊಂಡು ಕ್ವಾರಂಟೈನ್ ಮಾಡಿಕೊಳ್ಳುವ ಹಂತಕ್ಕೆ ಬಂದಾಗ ವರಸೆ ಬದಲಿಸಿ ತಮ್ಮ ಜಾಗ್ರತೆಯನ್ನು ಅಚ್ಚುಕಟ್ಟಾಗಿ ನಡೆಸುತ್ತಿರುವುದನ್ನು ನೋಡುವಾಗ ನಗಬೇಕೋ ಅಳಬೇಕೋ ಅರಿಯದಾಗಿದೆ.

ಮೂರ್ಖತನಕ್ಕೆ ಪರಮಾವಧಿ ಇರುತ್ತದೆ ಆದರೆ ಭಕ್ತಿಗೆ ಮಾತ್ರ ಅಂತ್ಯ ಇರುವುದಿಲ್ಲ. ಭಕ್ತರಾಗದೆ ಸಮಾಜದ ಏರಿಳಿತವನ್ನು ಅರಿತು ಹೊಂದಿಕೊಂಡು ಬಾಳುವವರಾಗೋಣ. ಖುಷಿಯಾಗಿರೋಣ ಇತರರಿಗೂ ಖುಷಿ ಹಂಚುವವರಾಗೋಣ.

error: Content is protected !! Not allowed copy content from janadhvani.com