janadhvani

Kannada Online News Paper

ಕೊರೋನಾ ತಡೆಯಲು ‘ನಮೋ’ ವಿಫಲರಾದರೇ?

ಕೊರೋನಾ ವೈರಸ್ ದಾಳಿಯಿಂದ ತತ್ತರಿಸದ ರಾಷ್ಟ್ರಗಳಾವುದು ಇಲ್ಲ ಎಂದೇ ಹೇಳಬಹುದಾದಷ್ಟು ಜಗತ್ತಿಡೀ ಈ ಸಾಂಕ್ರಾಮಿಕ ವ್ಯಾಪಿಸಿದೆ.

ರಾಷ್ಟ್ರಗಳನ್ನಾಳುತ್ತಿರುವ ರಾಜ ಮಹಾರಾಜರುಗಳನ್ನೂ ಸೇರಿದಂತೆ ರಾಜಕೀಯ ಚಾಣಕ್ಯಗಳೆಂದು ಸ್ವಯಂ ಕರೆಸಿಕೊಂಡಿರುವವರನ್ನೂ ಬಿಡದೇ ಎಲ್ಲರ ಮಹಾ ಯೋಜನೆಗಳನ್ನೆಲ್ಲಾ ಬುಡಮೇಲು ಮಾಡಿ ತಲೆಕೆಳಗಾಗಿಸಿದೆ ಈ ಕಣ್ಣಿಗೆ ಕಾಣದ ಮಹಾ ಅತೀ ಸಣ್ಣ ವೈರಸ್.

ಜಗತ್ತನ್ನು ನಿಯಂತ್ರಣಕ್ಕೆ ಪಡೆಯಲು ನಾನು ಅರ್ಹನೆಂದು ವಾದಿಸಿದವರನ್ನೂ ಬಾಯಿ ಮುಚ್ಚಿಸಿದ ವೈರಸ್, ಭಾರತದಲ್ಲಿ ಮಹಾ ದಾಳಿಯನ್ನೇ ಮಾಡಿದೆ ಅನ್ನಬಹುದು.

ಕೊರೋನಾ ಆರಂಭದಲ್ಲೇ ಭಾರತದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (ನ.ಮೋ.) ಯವರ ಅತೀ ಚಾಣಕ್ಯ ಬುದ್ದಿಯಿಂದ ಗಂಟೆ ಬಾರಿಸುವುದರೊಂದಿಗೆ ಓಡಿ ಹೋಯಿತು ಎಂದು ಟಿವಿ ಮಾಧ್ಯಮಗಳಲ್ಲಿ ಬೊಬ್ಬಿಟ್ಟದ್ದೇ ಬಂತು, ಕೊರೋನಾ ಲಾಕ್‌ಡೌನ್ ಮಾಡಿ, ಭಾರತದ ಪ್ರಜೆಗಳೆಲ್ಲರ ಬಾಯಿಯಿಂದ ಉಗುಳಿಸಿ ಕೊಂಡದ್ದೇ ಬಂತು. ಬಟ್ಟಲು ಬಾರಿಸಿ, ಕ್ಯಾಂಡಲ್ ಉರಿಸಿ, ಕೊನೆಗೆ ಹೂವಿನ ಮಾಲೆ ಹಾಕಿಸಿದರೂ ಕೊರೋನಾ ಅಲುಗಾಡಿಲ್ಲ.

30ದಿನ ಲಾಕ್‌ಡೌನ್ ಮಾಡಿದಾಗಲೇ ನೋಡಿ, ನಮ್ಮ ಪ್ರಧಾನಿ ಕೊರೋನಾವನ್ನು ಯಾವ ರೀತಿ ಭಾರತದಿಂದ ಓಡಿಸುತ್ತಾರೆ ನೋಡುತ್ತಾ ಇರಿ ಎಂದು ಟಿವಿ ಸ್ಟುಡಿಯೋದಲ್ಲಿ ಕುಳಿತು ಅಬ್ಬರಿಸಿದ ಆ್ಯಂಕರ್‌ಗಳೆಲ್ಲಾ ಈಗ ಸುಮ್ಮನಿದ್ದಾರೆ. ಕಾರಣ ಇಷ್ಟೇ, 60 ದಿನ ಲಾಕ್‌ಡೌನ್ ಮಾಡಿಯೂ ಕೊರೋನಾ ಇನ್ನೂ ಜಾಸ್ತಿಯಾಗುತ್ತಲೇ ಹೋಯಿತು. ನಮೋ ಪ್ಲಾನ್ ಗಳೆಲ್ಲಾ ಚಂದ್ರಯಾನ 2ರಂತೆ ತಲೆಕೆಳಗಾದವು. ಮುಸ್ಲಿಮರನ್ನು ಟಾರ್ಗೆಟ್ ಮಾಡಿ ಸ್ವಲ್ಪ ಕಾಲ ಬದುಕುಳಿಯುವ ಪ್ರಯತ್ನ ಮಾಡಿದಾಗಲೂ ಭಾರತದ ಜೀವಂತ ಜಾತ್ಯಾತೀತತೆಗೆ ಕೊರೋನಾ ತಲೆತಗ್ಗಿಸುವಂತೆ ಮಾಡಿತು.

ಲಾಕ್‌ಡೌನ್ ಯಾವಾಗ ಮುಗಿಯುತ್ತೆ ಅಂತಾ ಕಾದವರೆಲ್ಲ ಈಗ ಮತ್ತೆ ಲಾಕ್‌ಡೌನ್ ಮಾಡಿ ಎಂದು ಗೋಗರೆಯುತ್ತಿದ್ದರೂ ಸರಕಾರ ಇನ್ನೂ ತಲೆಕೆಡಿಸಿಕೊಂಡಿಲ್ಲ (ಅಥವಾ ಕೆಡಿಸಿಕೊಳ್ಳಲು ತಲೆಯೇ ಇಲ್ಲವಾಯಿತಾ)

ಅರ್ಥ ವ್ಯವಸ್ಥೆಗೆ ನೀಡಿದ ಪೆಟ್ಟನ್ನು ಸರಕಾರಗಳು ಅರಗಿಸಿಕೊಳ್ಳಲಾಗದೇ, ಬಾರ್ ಓಪನ್ ಮಾಡಿಸಿದ್ದೂ, ಇದೀಗ ಖಾಸಗಿ ಆಸ್ಪತ್ರೆ ಮಾಫಿಯಾ ಮೂಲಕ ಹಣ ಮಾಡುವ ದಂಧೆಗಿಳಿದಿರುವುದು ಖೇದಕರ.

ಕೊರೋನಾ ದಾಳಿಯಲ್ಲದೇ ಇರುತ್ತಿದ್ದರೆ NRC CAA ದಾಳಿಯಿಂದ ಭಾರತದ ಮುಸ್ಲಿಮರೆಲ್ಲಾ ಇಷ್ಟೊತ್ತಿಗೆ ಪೌರತ್ವ ಕಳೆದುಕೊಂಡು ಪರದಾಡಬೇಕಾಗಿತ್ತೇನೋ?

ಅಮಿತ್ ಶಾ ಯಾಕೆ ಸುಮ್ಮನಿದ್ದಾರೆ ಅಂತಲೂ ಕೇಳಬಾರದ ಸ್ಥಿತಿಗೆ ಅವರು ತಲುಪಿದ್ದೂ ಖೇದಕರ. “ಮಾಡಿದ್ದುಣ್ಣೋ ಮಹಾರಾಯ” ಅಂದಂತೆ ನಾವು ಮಾಡಿದ ಪಾಪಕ್ಕೆ ನಾವು ಅನುಭವಿಸಿಯೇ ತೀರಬೇಕು.

ಇಷ್ಟಾದರೂ ಕೋಮುವಾದಿಗಳಿಗೆ ಬುದ್ದಿ ಬಂದಿಲ್ಲ ಅನ್ನುವುದು ದುರಂತ. ಇನ್ನೂ ಕೋಮಾದಲ್ಲಿರುವ ತಮ್ಮ ಬುದ್ದಿಗೆ ಬುದ್ದಿ ಹೇಳುವ ಕಾಲ ಯಾವಾಗ ಬಂದಿತೋ ದೇವನೇ ಬಲ್ಲ‌. ಕೊರೋನಾ ಹಲವರಿಗೆ ಹಲವು ಪಾಠ ಕಲಿಸಿತೆನ್ನಬಹುದು. ಪಾಠ ಕಲಿತು ಜೀವನ ಸರಿಪಡಿಕೊಂಡವರು ಯಶಸ್ವಿಯಾಗಬಲ್ಲರು. ಇಲ್ಲವೇ ಮಗದೊಮ್ಮೆ ಪ್ರಕೃತಿಯ ಸೃಷ್ಟಿಕರ್ತನ ಮುಂದೆ ತಲೆಬಾಗಬೇಕಾಗಬಹುದು.

ದೇಶದ ಜನತೆಗೆ ಒಳಿತಾಗಲಿ ಅಂತ ಪ್ರಾರ್ಥಿಸೋಣ.

error: Content is protected !! Not allowed copy content from janadhvani.com