janadhvani

Kannada Online News Paper

ನೆರೆ ರಾಜ್ಯಗಳಿಂದ ಪ್ರವೇಶ ನಿಯಂತ್ರಣ- ಕ್ವಾರಂಟೈನ್ ಕಡ್ಡಾಯ

ಬೆಂಗಳೂರು:- ರಾಜ್ಯದಲ್ಲಿ ಮಹಾಮಾರಿ ತೀವ್ರಗೊಳ್ಳುತ್ತಿದ್ದಂತೆ ನಿಯಂತ್ರಿಸಲು ಪರದಾಡುತ್ತಿರುವ ರಾಜ್ಯ ಸರ್ಕಾರ ಅನ್ಯ ರಾಜ್ಯಗಳಿಂದ ಬರುತ್ತಿರುವವರ ಪ್ರವೇಶವನ್ನು ನಿಯಂತ್ರಿಸಲು ಮುಂದಾಗಿದೆ.

ಪ್ರಮುಖವಾಗಿ ವ್ಯಾಪಕ ಸೋಂಕಿನಿಂದ ಬಳಲುತ್ತಿರುವ ಮಹಾರಾಷ್ಟ್ರದಿಂದ ಬರುತ್ತಿರುವ ಪ್ರಯಾಣಿಕರಿಗೆ ಮೊದಲು ಏಳು ದಿನ ಸಾಂಸ್ಥಿಕ ಕ್ವಾರಂಟೈನ್ ಹಾಗೂ ಉಳಿದ ಏಳು ದಿನ ಗೃಹ ಕ್ವಾರಂಟೈನ್ ಇರಲೇಬೇಕು ಎಂದು ಆದೇಶಿಸಲಾಗಿದೆ.

ಮಹಾರಾಷ್ಟ್ರ ಹೊರತುಪಡಿಸಿ ಉಳಿದ ರಾಜ್ಯಗಳಿಂದ ಆಗಮಿಸುವ ವ್ಯಕ್ತಿಗಳಿಗೆ 14 ದಿನ ಗೃಹ ಕ್ವಾರಂಟೈನ್ ಇರಲು ಸರ್ಕಾರ ಸೂಚನೆ ನೀಡಿದೆ.

ನೆಪಮಾತ್ರವಾಗಿರುವ ಗೃಹ ಕ್ವಾರಂಟೈನ್: ಸೋಂಕು ನಿಯಂತ್ರಿಸಲು ವ್ಯಾಪಕವಾದ ಪರೀಕ್ಷೆ ಮತ್ತು ಕ್ವಾರಂಟೈನ್ ಮಹಾ ಅಸ್ತ್ರಗಳಾಗಿವೆ. ಶಂಕಿತರನ್ನು ಕ್ವಾರಂಟೈನ್‍ಗಿಡಲು ರಾಜ್ಯಸರ್ಕಾರ ಆರಂಭದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿತ್ತು.

ಜನ ಹೊರಗೆ ಮುಕ್ತವಾಗಿ ಸಂಚರಿಸಲು ಅವಕಾಶ ಇಲ್ಲದಂತೆ ಪೊಲೀಸರು ಲಾಠಿ ಹಿಡಿದು ನಿಂತಿದ್ದರು. ಲಾಕ್‍ಡೌನ್-3ರ ಅವಧಿವರೆಗೂ ಸೋಂಕು ನಿಯಂತ್ರಣದಲ್ಲಿತ್ತು. ಆನಂತರ ಜನಸಂಚಾರಕ್ಕಿದ್ದ ನಿರ್ಬಂಧವನ್ನು ಸಡಿಲಗೊಳಿಸಲಾಗಿದೆ. ಜನ ಹೆಚ್ಚು ಓಡಾಡಿದಷ್ಟು ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಪ್ರಾಥಮಿಕ, ದ್ವಿತೀಯ ಸಂಪರ್ಕದಲ್ಲಿದ್ದವರನ್ನು ಗೃಹ ಕ್ವಾರಂಟೈನ್‍ನಲ್ಲಿರಿಸಲು ಸರ್ಕಾರ ಹರಸಾಹಸ ಪಡುತ್ತಿದೆ.

ಇದಕ್ಕಾಗಿ ಆರು ಮಂದಿ ಐಎಎಸ್ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಲೆಕ್ಕ ಬುಕ್ಕು ಇಲ್ಲದಂತೆ ಹಣ ಖರ್ಚು ಮಾಡಿ ಕಾಲ್‍ಸೆಂಟರ್ ತೆರೆಯಲಾಗಿದೆ. ನಿಗಾ ವ್ಯವಸ್ಥೆಗಳನ್ನೂ ಅಳವಡಿಸಲಾಗಿದೆ. ಗೃಹ ಕ್ವಾರಂಟೈನ್‍ನಲ್ಲಿರುವವರನ್ನೂ ಕಾಯಲು ಹೋಂ ಗಾರ್ಡ್, ಆರೋಗ್ಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ಪ್ರತಿ ಮನೆ ಮುಂದೆಯೂ ಹೋಂಗಾರ್ಡ್‍ಗಳಿದ್ದು, ಕ್ವಾರಂಟೈನ್‍ನಲ್ಲಿರುವ ಶಂಕಿತರು ಹೊರಬರದಂತೆ ಕಾಯಬೇಕಿದೆ. ಆದರೆ, ಈ ರಕ್ಷಣಾ ವ್ಯವಸ್ಥೆ ಕೇವಲ ನೆಪಮಾತ್ರಕ್ಕೆ ಎಂಬಂತೆ ನಡೆಯುತ್ತಿದೆ. ಬಹಳಷ್ಟು ಕಡೆ ಶಂಕಿತರು ಯಾವುದೇ ಅಡೆತಡೆ ಇಲ್ಲದೆ ರಸ್ತೆಯಲ್ಲಿ ತಿರುಗುತ್ತಿದ್ದಾರೆ.

ಜೂ.24ರಂದು ಕೊರೊನಾ ಪೀಡಿತ ವ್ಯಕ್ತಿ ಕಲಾಸಿಪಾಳ್ಯ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿ ವಾಕಿಂಗ್ ಮಾಡುತ್ತ ನಡುಬೀದಿಯಲ್ಲಿ ಮೃತಪಟ್ಟಿದ್ದಾರೆ. ರಾಜ್ಯದ ಕ್ವಾರಂಟೈನ್ ವ್ಯವಸ್ಥೆ ಹದಗೆಟ್ಟುಹೋಗಿದೆ. ಸರ್ಕಾರಿ ಆಸ್ಪತ್ರೆಗಳು ತುಂಬಿ ತುಳುಕುತ್ತಿದ್ದು, ರೋಗಿಗಳನ್ನು ದಾಖಲಿಸಿಕೊಳ್ಳಲಾಗದೆ ವಾಪಸ್ ಕಳುಹಿಸುತ್ತಿವೆ.

ಪರಿಸ್ಥಿತಿ ಕೈ ಮೀರಿ ಹೋಗಿದ್ದರೂ ರಾಜ್ಯಸರ್ಕಾರ ಈಗಲೂ ಪ್ರಮಾಣಿತ ಕಾರ್ಯವಿಧಾನ (ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೋಸಸ್) ಎಂಬ ಹೆಸರಿನಲ್ಲಿ ಕಾಲಹರಣ ಮಾಡುತ್ತಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ.

ಇತರ ರಾಜ್ಯಗಳಲ್ಲಿ ಸೋಂಕಿನ ಪ್ರಮಾಣಕ್ಕಿಂತ ಕರ್ನಾಟಕದ ಪರಿಸ್ಥಿತಿ ಸಮಾಧಾನಕರವಾಗಿದೆ ಎಂಬ ಸಿದ್ಧ ಉತ್ತರ ನೀಡುತ್ತ ಜನರನ್ನು ದಾರಿ ತಪ್ಪಿಸಲಾಗುತ್ತಿದೆ. ನಿನ್ನೆ ಒಂದೇ ದಿನ 918 ಮಂದಿ ಸೋಂಕಿಗೆ ಸಿಲುಕಿದ್ದು, 11 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ದಿನೇ ದಿನೇ ಮಹಾಮಾರಿಯ ರುದ್ರನರ್ತನ ಮಿತಿಮೀರುತ್ತಿದ್ದು, ಜನ ಜೀವ ಅಂಗೈಯಲ್ಲಿಡಿದು ಬದುಕುತ್ತಿದ್ದಾರೆ.

error: Content is protected !! Not allowed copy content from janadhvani.com