janadhvani

Kannada Online News Paper

ಕೆಸಿಎಫ್ ಯುಎಇ:ದುಬೈ- ಕಣ್ಣೂರು-ಮಂಗಳೂರು ಪ್ರಥಮ ಚಾರ್ಟರ್ಡ್ ವಿಮಾನ

ದುಬೈ: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಯುಎಇ ವತಿಯಿಂದ ಮಂಗಳೂರಿಗೆ ಚಾರ್ಟರ್ ವಿಮಾನವು ಜೂನ್ 27 ಶನಿವಾರ ದುಬೈ ವಿಮಾನ ನಿಲ್ದಾಣದಿಂದ ಹೊರಡಲಿದೆ.

ಫ್ಲೈ ದುಬೈ ಸಂಸ್ಥೆಯ ವಿಮಾನವು 160 ಅನಿವಾಸಿ ಕನ್ನಡಿಗ ಪ್ರಯಾಣಿಕರನ್ನು ಹೊತ್ತು ಕಣ್ಣೂರು ವಿಮಾನ ನಿಲ್ದಾಣ ತಲುಪಲಿದ್ದು ಅಲ್ಲಿಂದ ರಸ್ತೆ ಮೂಲಕ ಎಲ್ಲಾ ಪ್ರಯಾಣಿಕರನ್ನು ಮಂಗಳೂರು ತಲುಪಿಸಲಾಗುತ್ತದೆ ಎಂದು ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಅಬ್ದುಲ್ ಜಲೀಲ್ ನಿಝಾಮಿ ದುಬೈ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೋವಿಡ್-19 ನಿಂದ ಸಂಕಷ್ಟಕ್ಕೊಳಗಾದ ಅನಿವಾಸಿ ಕನ್ನಡಿಗರ ಪಾಲಿಗೆ ಕೆಸಿಎಫ್ ಭರವಸೆಯ ಬೆಳಕಾಗಿ ಕಾರ್ಯಾಚರಿಸಿ, ಯುಎಇ ಲಾಕ್ ಡೌನ್ ಸಂದರ್ಭದಲ್ಲಿ ಕೆಸಿಎಫ್ ಸನ್ನದ್ಧ ಸಂಘ ಹೆಸರಿನಲ್ಲಿ ಮುನ್ನೂರರಷ್ಟು ಕಾರ್ಯಕರ್ತರು 1500 ರಷ್ಟು ಕನ್ನಡಿಗರಿಗೆ ಆಹಾರ ಕಿಟ್, ಮೆಡಿಕಲ್ ಸೇವೆ, ಕ್ವಾರಂಟೈನ್ ವ್ಯವಸ್ಥೆ, ಆಂಬುಲೆನ್ಸ್ ವ್ಯವಸ್ಥೆ ಮೊದಲಾದ ತುರ್ತು ಸೇವೆಗಳನ್ನು ನಿರಂತರ ಮಾಡಿಕೊಟ್ಟು ಗಲ್ಫ್ ರಾಷ್ಟ್ರಗಳಲ್ಲಿ ಕನ್ನಡಿಗರ ಅಭಿಮಾನವಾಗಿ ಕೆಸಿಎಫ್ ಮನೆಮಾತಾಗಿದೆ.

ಆದ್ಯತೆಯನ್ನು ಪರಿಗಣಿಸಿ ತುರ್ತು ಚಿಕಿತ್ಸೆ ಅಗತ್ಯವಿರುವವರು, ಗರ್ಭಿಣಿಯರು, ವಯಸ್ಕರು, ಕೆಲಸ ಕಳೆದುಕೊಂಡವರು, ವಿಸಿಟ್ ವೀಸಾ ಅವಧಿ ಮುಗಿದವರನ್ನು ಪ್ರಥಮ ಪ್ರಯಾಣದಲ್ಲಿ ಅವಕಾಶ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ವಿಮಾನಯಾನ ಕೆಸಿಎಫ್ ಏರ್ಪಡಿಸಲಿದ್ದು ಅದರ ಪ್ರಕ್ರಿಯೆಗಳು ನಡೆಯುತ್ತಿದೆ ಎಂದು ಅವರು ತಿಳಿಸಿದರು.

error: Content is protected !! Not allowed copy content from janadhvani.com